ಮಂಗಳೂರು| ಯುವತಿಯ ಕೊಲೆ ಪ್ರಕರಣ: ಆರೋಪಿಗೆ ಜೀವಾವಧಿ ಸಜೆ, ದಂಡ

Update: 2024-09-04 15:24 GMT

ಮಂಗಳೂರು, ಸೆ.4: ತನ್ನ ಪ್ರೀತಿಯನ್ನು ಧಿಕ್ಕರಿಸಿ ಬೇರೆಯವರನ್ನು ಮದುವೆಯಾಗುತ್ತಿದ್ದಾಳೆ ಎಂಬ ಕಾರಣಕ್ಕಾಗಿ ಯುವತಿಯನ್ನು ಕೊಂದ ಆರೋಪಿ ವಿಜಯಪುರ ಜಿಲ್ಲೆಯ ನಿವಾಸಿ ಸಂದೀಪ್ ರಾಥೋಡ್(23) ಎಂಬಾತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಬುಧವಾರ ಜೀವಾವಧಿ ಸಜೆ ವಿಧಿಸಿದೆ.

2019, ಜೂ.6ರಂದು ಅಂಜನಾ ವಸಿಷ್ಠ ಎಂಬವರನ್ನು ಆರೋಪಿ ಸಂದೀಪ್ ರಾಥೋಡ್ ಕೊಲೆಗೈದು ಆಕೆಯ ಮೊಬೈಲ್, ಎಟಿಎಂ ಕಾರ್ಡ್ ಸೊತ್ತುಗಳೊಂದಿಗೆ ಪರಾರಿಯಾಗಿರುವುದಾಗಿ ಆರೋಪಿಸಲಾಗಿತ್ತು. ಅಂಜನಾ ವಸಿಷ್ಠರನ್ನು ಕೊಲೆಗೈದ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಅಪರಾಧಿ ಸಂದೀಪ್ ರಾಥೋಡ್ ಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಎಂ. ಜೋಶಿ ಅವರು ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: ಸಂದೀಪ್ ರಾಥೊಡ್ ಮತ್ತು ಮೃತ ಅಂಜನಾ ವಷಿಷ್ಠಾ ನಡುವೆ 2018ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿತ್ತು. ಬಳಿಕ ಸ್ನೇಹಿತರಾಗಿ, ಮದುವೆ ನಿರ್ಧಾರಕ್ಕೆ ಬಂದಿದ್ದರು. ಉದ್ಯೋಗ ಪಡೆದ ಬಳಿಕ ಮದುವೆಯಾಗುವ ಯೋಜನೆ ರೂಪಿಸಿದ್ದರು ಎನ್ನಲಾಗಿದೆ.

2019, ಜೂ 1ರಂದು ರಾಥೋಡ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಲಿಖಿತ ಪರೀಕ್ಷೆಯ ಪೂರ್ವ ತಯಾರಿಗೆ ಮಂಗಳೂರಿಗೆ ಬಂದಿದ್ದನು. ಅತ್ತಾವರದಲ್ಲಿ ರೂಂ ಪಡೆದು ಅಂಜನಾ ಜತೆ ಉಳಿದುಕೊಂಡಿದ್ದ. ಮನೆಯ ಮಾಲಕರಿಗೆ ತಾನು ಪೊಲೀಸ್ ಕಾನ್‌ಸ್ಟೇಬಲ್ , ತಾವಿಬ್ಬರೂ ದಂಪತಿಗಳೆಂದು ನಂಬಿಸಿ ರೂಂ ಪಡೆದಿದ್ದ ಎಂದು ತಿಳಿದು ಬಂದಿದೆ.

ಅಂಜನಾ ಊರಿಗೆ ಹೋಗಿದ್ದ ಸಂದರ್ಭ ಆಕೆಯ ಮನೆಯವರು ನಿರ್ಧರಿಸಿದ ಹುಡುಗನನ್ನು ತೋರಿಸಿ ಮಾತುಕತೆ ನಡೆಸಿದ್ದರು. ಅಂಜನಾ ತಂದೆ ತಾಯಿಯ ಆಸೆಯಂತೆ ಹುಡುಗನನ್ನು ಒಪ್ಪಿಕೊಂಡಿದ್ದರು. ಈ ವಿಚಾರವನ್ನು ಸಂದೀಪ್ ರಾಥೋಡ್‌ಗೆ ತಿಳಿಸಿ, ತನ್ನನ್ನು ಮರೆತು ಬಿಡುವಂತೆ ಆಕೆ ಹೇಳಿದ್ದಳು. ಇದರಿಂದ ಸಿಟ್ಟುಗೊಂಡು ಆರೋಪಿ 2019 ಜೂ.7ರಂದು ಟಿವಿ ಕೇಬಲ್‌ನ್ನು ಆಕೆಯ ಕುತ್ತಿಗೆಗೆ ಬಿಗಿದು ಕೊಲೆ ಮಾಡಿ , ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಕಳವು ಮಾಡಿದ್ದ. ಮಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಿರುವ ಬ್ಯಾಂಕ್‌ನ ಎಟಿಎಂನಿಂದ 15 ಸಾವಿರ ರೂ. ಹಣವನ್ನು ಡ್ರಾ ಮಾಡಿಕೊಂಡು ಪರಾರಿಯಾಗಿ, ವಿಜಯಪುರ ಸಿಂದಗಿಯ ಹೋಟೆಲೊಂದರಲ್ಲಿ ಉಳಿದುಕೊಂಡಿದ್ದನು. ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಠಾಣೆಯ ಆಗಿನ ಪಿಎಸ್‌ಐ ರಾಜೇಂದ್ರ ಬಿ. ಹಾಗೂ ಇನ್‌ಸ್ಪೆಕ್ಟರ್ ಎಂ.ಕುಮಾರ್ ಆರಾಧ್ಯ ತನಿಖೆ ನಡೆಸಿದ್ದರು. ಇನ್‌ಸ್ಪೆಕ್ಟರ್ ಲೋಕೇಶ್ ಎ.ಸಿ. ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಒಟ್ಟು 45 ಸಾಕ್ಷಿದಾರರನ್ನು ವಿಚಾರಿಸಲಾಗಿತ್ತು. 100 ದಾಖಲೆಗಳನ್ನು ಗುರುತಿಸಲಾಗಿತ್ತು. ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಅವರು ಆರೋಪಿಯನ್ನು ದೋಷಿ ಎಂದು ಪರಿಗಣಿಸಿ ತೀರ್ಪು ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಕಲಂ 302ರ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ರೂ. ದಂಡ, ದಂಡ ತೆರಳು ತಪ್ಪಿದರೆ 3 ತಿಂಗಳ ಸಾದಾ ಸಜೆ, ಐಪಿಸಿ ಕಲಂ 380 ರ ಅಪರಾಧಕ್ಕೆ 3 ತಿಂಗಳ ಸಜೆ ಹಾಗೂ 1 ಸಾವಿರ ರೂ. ದಂಡ. ದಂಡ ತೆರಲು ತಪ್ಪಿದರೆ 15 ದಿನಗಳ ಸಜೆ, ಭಾರತೀಯ ದಂಡ ಸಂಹಿತೆ ಕಲಂ 403ರ ಅಪರಾಧಕ್ಕೆ 3 ತಿಂಗಳ ಸಜೆ ಮತ್ತು 500 ರೂ. ದಂಡ, ತಂಡ ತೆರಳು ತಪ್ಪಿದರೆ 15 ದಿನಗಳ ಸಜೆ ಹಾಗೂ ಕಾನೂನು ಸೇವಾ ಪ್ರಾಧಿಕಾರದ ವತಿ ಯಿಂದ ಸಂತ್ರಸ್ತರ ಪರಿಹಾರ ಯೋಜನೆಯಡಿ ಮೃತಳ ಮನೆಯವರಿಗೆ ಪರಿಹಾರ ನೀಡಬೇಕೆಂದು ನಿರ್ದೇಶಿಸಿ ನ್ಯಾಯಾಲಯ ತೀರ್ಪು ನೀಡಿದೆ.

ಸರಕಾರದ ಪರವಾಗಿ ನಿವೃತ್ತ ಸರಕಾರಿ ಅಭಿಯೋಜಕ ಬಿ.ಶೇಖರ್ ಶೆಟ್ಟಿ ಸಾಕ್ಷಿ ವಿಚಾರಣೆ ನಡೆಸಿದ್ದಾರೆ. ಸರಕಾರಿ ಅಭಿಯೋಜಕಿ ಜುಡಿತ್ ಓಲ್ವಾ ಮಾರ್ಗರೆಟ್ ಕ್ರಾಸ್ತಾ ಹೆಚ್ಚುವರಿ ಸಾಕ್ಷಿ ವಿಚಾರಣೆ ನಡೆಸಿ, ವಾದ ಮಂಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News