ವನಪಾಲಕರು ಸಂಘರ್ಷದ ಬದುಕನ್ನು ಎದುರಿಸಬೇಕಾಗಿದೆ : ಜಿಲ್ಲಾ ನ್ಯಾಯಾಧೀಶ ರವೀಂದ್ರ ಜೋಶಿ
ಮಂಗಳೂರು: ಕರ್ತವ್ಯದ ವೇಳೆ ಪ್ರಾಣಾರ್ಪಣೆ ಮಾಡುವ ವನಪಾಲಕರ ಕುಟುಂಬಕ್ಕೆ ಸವಲತ್ತುಗಳನ್ನು ಒದಗಿಸುವುದರೊಂದಿಗೆ, ಅವರ ಬದುಕಿಗೆ ಭದ್ರತೆಯನ್ನು ನೀಡುವುದು ಸರಕಾರ ಮತ್ತು ಸಂಘ ಸಂಸ್ಥೆಗಳ ಜವಾಬ್ದಾರಿಯಾಗಿದೆ ಎಂದು ದ.ಕ.ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ರವೀಂದ್ರ ಜೋಶಿ ಹೇಳಿದ್ದಾರೆ.
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯ ಅಂಗವಾಗಿ ನಗರದ ಪಡೀಲ್ ನ ಅರಣ್ಯ ಭವನದ ಬಳಿ ಬುಧವಾರ ನಡೆದ ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ರಕ್ಷಿಸಲು ಪ್ರಾಣ ತ್ಯಾಗ ಮಾಡಿದ ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅರಣ್ಯ ಕಾವಲುಗಾರರು ಕಾಡಿನಲ್ಲಿ ಕರ್ತವ್ಯದ ವೇಳೆ ಮಾನವ ಮತ್ತು ವನ್ಯ ಜೀವಿಗಳ ನಿರಂತರ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಅವರ ಬದುಕಿಗೆ ಗ್ಯಾರಂಟಿ ಇರುವುದಿಲ್ಲ.ಯಾವ ಹೊತ್ತಿನಲ್ಲಿ ಮಾನವನಿಂದ, ವನ್ಯಜೀವಿಗಳಿಂದ ಆಕ್ರಮಣ ನಡೆಯುತ್ತದೆ ಎಂದು ಗೊತ್ತಾಗುವುದಿಲ್ಲ. ಅವರ ಜೀವನಕ್ಕೆ ಗ್ಯಾರಂಟಿ ಇರುವುದಿಲ್ಲ ಎಂದು ಹೇಳಿದರು.
ದೇಶಕ್ಕಾಗಿ ಪ್ರಾಣವನ್ನು ಅರ್ಪಿಸಿದ ಪ್ರತಿಯೊಬ್ಬರನ್ನೂ .ಹುತಾತ್ಮರ ದಿನಾಚರಣೆಯಂದು ನೆನಪು ಮಾಡಿಕೊಳ್ಳಬೇಕಾಗಿದೆ ಎಂದರು.
ಮಂಗಳೂರು ವೃತ್ತದ ಅರಣ್ಯ ಸಂರಕ್ಷಾಧಿಕಾರಿ ಡಾ.ವಿ.ಕರಿಕಲನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪಶ್ಚಿಮ ವಲಯ ಡಿಐಜಿಪಿ ಅಮಿತ್ ಸಿಂಗ್, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಮಲ ಕರಿಕಲನ್, ಆದಾಯ ತೆರಿಗೆ ಇಲಾಖೆಯ ನಿರ್ದೇಶಕ ಮಣಿಕಂಠನ್, ಮಂಗಳೂರು ವಿಭಾಗ ಉಪಸಂರಕ್ಷಣಾಧಿಕಾರಿ ಅಂಥೋನಿ ಎಸ್.ಮರಿಯಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜೆ ಕ್ಲಿಪರ್ಡ್ ಲೋಬೊ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್ ಉಪಸ್ಥಿತರಿದ್ದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರಾಜೇಶ್ ಬಳೆಗಾರ್ ಕಾರ್ಯಕ್ರಮ ನಿರೂಪಿಸಿದರು.