ಮಂಗಳೂರು| ಗ್ರಾಹಕ ಆತ್ಮಹತ್ಯೆಗೈದ ಪ್ರಕರಣ: ಎಂಸಿಸಿ ಬ್ಯಾಂಕ್ ಅಧ್ಯಕ್ಷ ಸೆರೆ

Update: 2024-12-18 13:07 GMT

ಮಂಗಳೂರು, ಡಿ.18: ಗ್ರಾಹಕರೊಬ್ಬರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಕೆಥೋಲಿಕ್ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಅವರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿರುವುದಾಗಿ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಪೆರ್ಮಂಕಿ ಗ್ರಾಮದ ಮನೋಹರ ಪಿರೇರಾ (47) ಆತ್ಮಹತ್ಯೆ ಮಾಡಿಕೊಂಡವರು. ‌

ಅವರು ತನ್ನ ಸಹೋದರ ಮೆಲ್ಬರ್ನ್ ಪಿರೇರಾ ಅವರೊಂದಿಗೆ ಸೇರಿ ಎಂಸಿಸಿ ಬ್ಯಾಂಕ್‌ನಿಂದ 10 ವರ್ಷದ ಹಿಂದೆ 10 ಲಕ್ಷ ರೂ. ಸಾಲ ಪಡೆದಿದ್ದರು. ಆದರೆ ಕೋವಿಡ್-19 ಪರಿಣಾಮ ಸಾಲ ಮರುಪಾವತಿ ಕಷ್ಟವಾಯಿತು ಎನ್ನಲಾಗಿದೆ. ಆ ಹಿನ್ನೆಲೆಯಲ್ಲಿ ಬ್ಯಾಂಕ್ ಮನೆಯನ್ನು ಜಫ್ತಿ ಮಾಡಿಕೊಂಡಿತ್ತು. ಈ ಮಧ್ಯೆ ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷ ಅನಿಲ್ ಲೋಬೊ ಅವರು ಮನೋಹರ ಪಿರೇರಾರ ಖಾತೆಯಿಂದ 9 ಲಕ್ಷ ರೂ.ವನ್ನು ಸ್ವಯಂ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. 

ಇದರಿಂದ ಮನೋಹರ ಪಿರೇರಾ ಮತ್ತಷ್ಟು ನೊಂದಿದ್ದರು ಎನ್ನಲಾಗಿದ್ದು, ಹಾಗಾಗಿ ಡಿ.17ರ ಅಪರಾಹ್ನ 3:45ರಿಂದ 5ರ ಮಧ್ಯೆ ತನ್ನ ಮನೆಯಲ್ಲಿ ತನಗಾದ ಅನ್ಯಾಯದ ಬಗ್ಗೆ ವೀಡಿಯೊ ಮಾಡಿಕೊಂಡು ಆತ್ಮಹತ್ಯೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಪೊಲೀಸರು ಎಂಸಿಸಿ ಬ್ಯಾಂಕ್‌ನ ಅಧ್ಯಕ್ಷರನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News