ಅಲೋಶಿಯಸ್ ವಿವಿಯಿಂದ ಕನ್ಯಾನ ಸದಾಶಿವ ಶೆಟ್ಟಿಗೆ ಸನ್ಮಾನ
ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸ್ಕೂಲ್ ಆಫ್ ಫಿಸಿಕಲ್ ಸೈನ್ಸಸ್ ವತಿಯಿಂದ, ಕಾಲೇಜಿನ ಹೆಮ್ಮೆಯ ಹಳೆವಿದ್ಯಾರ್ಥಿ, ಪ್ರಸ್ತುತ ಉದ್ಯಮಿಯಾಗಿರುವ ಕನ್ಯಾನ ಸದಾಶಿವ ಶೆಟ್ಟಿ ಇವರಿಗೆ ಹೃದಯಸ್ಪರ್ಶಿ ಸನ್ಮಾನ ಕಾರ್ಯಕ್ರಮ ವಿವಿಯ ಎಲ್.ಎಫ್. ರಸ್ಕೀನಾ ಸಭಾಂಗಣದಲ್ಲಿ ನಡೆಯಿತು.
ಸಂತ ಅಲೋಶಿಯಸ್ ಶಿಕ್ಷಣ ಸಂಸ್ಥೆಗಳ ವರಿಷ್ಠರಾದ ವಂ. ಫಾ. ಮೆಲ್ವಿನ್ ಜೋಸೆಫ್ ಪಿಂಟೋ, ಹಾಗೂ ಸಹಕುಲಪತಿ ಗಳಾದ ಡಾ. ಮೆಲ್ವಿನ್ ಡಿಕುನ್ಹಾರವರು ಪೇಟ ತೊಡಿಸಿ, ಶಾಲು ಮತ್ತು ಹಾರದೊಂದಿಗೆ ಫಲಪುಷ್ಪಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕನ್ಯಾನ ಸದಾಶಿವ ಶೆಟ್ಟರು ಅಲೋಶಿಯಸ್ ಕಾಲೇಜಿನ ತಮ್ಮ ವಿದ್ಯಾರ್ಥಿ ಜೀವನ ವನ್ನು ನೆನಪಿಸಿಕೊಂಡರು. ತಮ್ಮ ಜೀವನದಲ್ಲಿ ಒಬ್ಬ ಉದ್ಯಮಿಯಾಗಿ ಅತೀ ಹೆಚ್ಚಿನ ಯಶಸ್ಸನ್ನು ಗಳಿಸುವಲ್ಲಿ ಕಾಲೇಜಿನ ಕೊಡುಗೆ ಮತ್ತು ಶಿಕ್ಷಕರನ್ನು ಸ್ಮರಿಸಿಕೊಂಡರು.
ಯುವ ವಿಜ್ಞಾನದ ವಿದ್ಯಾರ್ಥಿಗಳು ಜೀವನದಲ್ಲಿ ಸವಾಲುಗಳನ್ನು ಅವಕಾಶಗಳನ್ನಾಗಿಸಿಕೊಂಡು ಸಮಾಜಕ್ಕೆ ದೊಡ್ಡ ಕೊಡುಗೆಗಳನ್ನು ನೀಡಬೇಕೆಂದು ಅವರು ಈ ಸಂದರ್ಭ ಸಲಹೆ ನೀಡಿದರು.
ವಿವಿಯ ಸಹಕುಲಪತಿ ಡಾ. ಮೆಲ್ವಿನ್ ಡಿಕುನ್ನಾ ಅಭಿನಂದನಾ ಭಾಷಣದಲ್ಲಿ ಸದಾಶಿವ ಶೆಟ್ಟರು ತಮ್ಮ ಸಾಧನೆಗಳ ಮೂಲಕ ಈಗಿನ ವಿದ್ಯಾರ್ಥಿಗಳಿಗೆ ಮಾದರಿಯಾದ ಒಬ್ಬ ಹಿರಿಯ ವಿದ್ಯಾರ್ಥಿ ಎಂದರು.
ಫಾ. ಮೆಲ್ವಿನ್ ಜೋಸೆಫ್ ಪಿಂಟೋರವರು ಮಾತನಾಡಿ, ಕನ್ಯಾನ ಸದಾಶಿವ ಶೆಟ್ಟಿರು ಉದ್ಯಮಿಯಾಗಿ ಹೆಸರು ಗಳಿಸುವು ದರೊಂದಿಗೆ ಸಮಾಜದ ಅನೇಕ ಬಡವರಿಗೆ ಆರ್ಥಿಕ ಸಹಾಯ ಕೊಡುವುದರೊಂದಿಗೆ ಅಲೋಶಿಯಸ್ ಸಂಸ್ಥೆಯ ಹೆಮ್ಮೆಯ ವಿದ್ಯಾರ್ಥಿ ಎನಿಸಿಕೊಂಡಿದ್ದಾರೆ. ಸಮಾಜದ ಅನೇಕ ಇತರ ಸಾಹಿತ್ಯಿಕ ಚಟುವಟಿಕೆಗಳಿಗೂ ಅವರ ಕೊಡುಗೆ ಅಪಾರ ಎಂದರು.
ಕಾಲೇಜಿನ ಕುಲಸಚಿವ ಡಾ. ಆಲ್ವಿನ್ ಡೇಸಾ, ವಿವಿಯ ಕುಲಸಚಿವರಾದ ಡಾ. ರೊನಾಲ್ಡ್ ನಜರೆತ್ ಹಾಗೂ ಸಾಂಸ್ಥಿಕ ಅಭಿವೃದ್ದಿ ಅಧಿಕಾರಿ ಶಿಲ್ಪಾ ಡಿಸೋಜ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಸೇವಿಯರ್ ಬ್ಲಾಕಿನ ನಿರ್ದೇಶಕ ಡಾ. ಈಶ್ವರ ಭಟ್ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕಿ ಸಹನಾ ವಂದಿಸಿದರು.