ಮಂಗಳೂರು: ಸುನ್ನಿ ಸಂಘ ಕುಟುಂಬದಿಂದ ಡ್ರಗ್ಸ್ ವಿರುದ್ಧ ಜನಜಾಗೃತಿ ರ‍್ಯಾಲಿ-ಸಮಾವೇಶ

Update: 2023-08-19 14:23 GMT

ಮಂಗಳೂರು, ಆ.19: ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸೆಸ್ಸೆಫ್, ಕೋ-ಆರ್ಡಿನೇಶನ್ ಕಮಿಟಿ ಮಂಗಳೂರು ರೆನ್ ಇದರ ವತಿಯಿಂದ ನಗರದ ಜ್ಯೋತಿ ಸಮೀಪದ ಅಂಬೇಡ್ಕರ್ ವೃತ್ತದಿಂದ ಪುರಭವನದವರೆಗೆ ಡ್ರಗ್ಸ್ ವಿರುದ್ಧ ಜನಜಾಗೃತಿ ರ‍್ಯಾಲಿ ಮತ್ತು ಸಮಾವೇಶ ಶನಿವಾರ ನಡೆಯಿತು.

313 ಸದಸ್ಯರನ್ನು ಒಳಗೊಂಡ ಜಾಗೃತಿ ರ‍್ಯಾಲಿಯನ್ನು ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್ ಉದ್ಘಾಟಿಸಿದರು.

ಬಳಿಕ ಪುರಭವನದ ಮಿನಿ ಹಾಲ್‌ನಲ್ಲಿ ನಡೆದ ಗ್ಲೋರಿಯಸ್ ಇಂಡಿಯಾ ಸಮಾವೇಶ ಹಾಗೂ ಪ್ರಜಾಭಾರತ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ ‘ಪ್ರತಿಯೊಬ್ಬರೂ ತಮ್ಮ ಮಕ್ಕಳ ಮೇಲೆ ವಿಶೇಷ ನಿಗಾ ವಹಿಸಬೇಕು. ಯಾವ ಕಾರಣಕ್ಕೂ ಯುವ ಪೀಳಿಗೆಯು ಮಾದಕ ವ್ಯಸನಕ್ಕೆ ಬಲಿಯಾಗದಂತೆ ನೋಡಿಕೊಳ್ಳ ಬೇಕು. ಸರಕಾರ, ಪೊಲೀಸ್ ಇಲಾಖೆಯ ಜೊತೆ ಸಮಾಜವು ಕೈ ಜೋಡಿಸಿದರೆ ಮಾತ್ರ ಈ ಪಿಡುಗನ್ನು ಮಟ್ಟ ಹಾಕಬಹುದು. ಸುನ್ನಿ ಸಂಘಟನೆಗಳು ಸಮಾಜದ ಕಣ್ತೆರೆಸುವಂತಹ ಈ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದರು.

‘ಡ್ರಗ್ಸ್ ಮಾದಕ ದ್ರವ್ಯದ ಅನಾಹುತ’ದ ಬಗ್ಗೆ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ‘ಜಿಲ್ಲೆಯಲ್ಲಿ ನಡೆಯುವ ಮತೀಯ ಗಲಭೆಗಳಲ್ಲಿ ಮಾದಕ ವ್ಯಸನಿಗಳ ಪಾತ್ರ ತುಂಬಾ ಇದೆ. ಮಾದಕ ವ್ಯಸನಿಗಳನ್ನು ಬಳಸಿಕೊಂಡು ಕೊಲೆ, ಲೂಟಿ, ಹಲ್ಲೆಯಂತಹ ಕೃತ್ಯಗಳನ್ನು ಮಾಡಿಸಲಾಗುತ್ತದೆ, ಬೆದರಿಕೆ ಹಾಕಿಸಲಾಗುತ್ತದೆ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸುನ್ನಿ ಸಂಘಟನೆಗಳು ಚಳವಳಿ ರೂಪದಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸಿರುವುದು ಉತ್ತಮ ಬೆಳವಣಿಗೆಯಾಗಿದೆ. ಹೆತ್ತವರು ನೀಡಿದ ಶುಲ್ಕವನ್ನು ಪಾವತಿಸದೆ ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಖರೀದಿಗೆ ಬಳಸಿದ ಉದಾಹರಣೆಯೂ ನಮ್ಮ ಮುಂದಿದೆ. ಹಾಗಾಗಿ ಯುವ ಪೀಳಿಗೆಯ ಭವಿಷ್ಯವನ್ನೇ ನಾಶ ಮಾಡುವ ಈ ಪಿಡುಗಿನ ವಿರುದ್ಧ ಹೋರಾಟ ತೀವ್ರಗೊಳಿಸಬೇಕಿದೆ ಎಂದರು.

‘ಗ್ಲೋರಿಯಸ್ ಇಂಡಿಯಾ’ ಕುರಿತು ಮಾತನಾಡಿದ ಎಸ್‌ವೈಎಸ್ ರಾಜ್ಯ ಮುಖಂಡ ಡಾ. ಎಮ್ಮೆಸ್ಸೆಎಂ ಅಬ್ದುಲ್ ರಶೀದ್ ಝೈನಿ ಕಾಮಿಲ್ ‘ದೇಶಕ್ಕೆ ಮುಸ್ಲಿಮರು ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಅದನ್ನು ವ್ಯವಸ್ಥಿತವಾಗಿ ಮರೆ ಮಾಚಲಾಗುತ್ತದೆ. ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ ಸುಮಾರು 5 ಲಕ್ಷ ಹೋರಾಟಗಾರರ ಪೈಕಿ ಟಿಪ್ಪು ಸುಲ್ತಾನ್ ಕೂಡ ಪ್ರಮುಖರಾಗಿದ್ದಾರೆ. ಅಂತಹ ದೇಶಪ್ರೇಮಿಯ ತ್ಯಾಗವನ್ನು ಮರೆಯಲಾಗುತ್ತದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಕೆಎಂಜೆ ಮಂಗಳೂರು ಝೋನ್ ಅಧ್ಯಕ್ಷ ವಿಎ ಮುಹಮ್ಮದ್ ಸಖಾಫಿ ವಳವೂರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸೈಯದ್ ಇಸಾಕ್ ತಂಙಳ್ ಕಣ್ಣೂರು, ಬಶೀರ್ ಮದನಿ ಅಲ್ ಕಾಮಿಲ್ ಕೂಳೂರು, ಅಶ್ರಫ್ ಪಾಳಿಲಿ ಅಮ್ಮೆಮ್ಮಾರ್, ಬಶೀರ್ ಅಹ್ಸನಿ ಪಡೀಲ್, ಸುಹೈಲ್ 10ನೆ ಮೈಲ್, ಎಪಿ ಇಸ್ಮಾಯಿಲ್, ಕೆಎಚ್ ಕರೀಂ ಹಾಜಿ ಅಡ್ಯಾರ್, ಬಿಎ ಅಬ್ದುಲ್ ಸಲೀಂ ಹಾಜಿ ಅಡ್ಯಾರ್ ಪದವು, ನವಾಝ್ ಸಖಾಫಿ ಅಡ್ಯಾರ್ ಪದವು, ಅಝ್ಮಾಲ್, ಕೆಸಿ ಸುಲೈಮಾನ್ ಮುಸ್ಲಿಯಾರ್, ಹಸನ್ ಪಾಂಡೇಶ್ವರ, ಕಮಾಲ್, ನಝೀರ್ ಲುಲು ಮತ್ತಿತರರು ಉಪಸ್ಥಿತರಿದ್ದರು.

ಎಸ್‌ವೈಎಸ್ ಫರಂಗಿಪೇಟೆ ಸರ್ಕಲ್ ಅಧ್ಯಕ್ಷ ಮನ್ಸೂರ್ ಮದನಿ ದುಆಗೈದರು. ಎಸ್‌ವೈಎಸ್ ಮಂಗಳೂರು ರೆನ್ ಅಧ್ಯಕ್ಷ ಸತ್ತಾರ್ ಸಖಾಫಿ ಅಡ್ಯಾರ್ ಪದವು ಸ್ವಾಗತಿಸಿದರು. ಸುನ್ನಿ ಕೋ-ಆರ್ಡಿನೇಶನ್ ಮಂಗಳೂರು ರೆನ್ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸುನ್ನಿ ಕೋ ಆರ್ಡಿನೇಶನ್‌ನ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News