ಮ್ಯಾರಥಾನ್, ವಾಕಥಾನ್ ಆರೋಗ್ಯದ ಪ್ರಜ್ಞೆ ಮೂಡಿಸುತ್ತಿವೆ: ಸ್ಪೀಕರ್ ಯು.ಟಿ. ಖಾದರ್

Update: 2023-11-05 15:45 GMT

ಮಂಗಳೂರು: ಮ್ಯಾರಥಾನ್, ವಾಕಥಾನ್‌ಗಳು ಆರೋಗ್ಯದ ಪ್ರಜ್ಞೆ ಮೂಡಿಸುತ್ತಿವೆ. ಇದು ನಗರಕ್ಕೆ ಮಾತ್ರ ಸೀಮಿತ ವಾಗಿರದೆ, ತಾಲೂಕು ಮಟ್ಟದಲ್ಲೂ ನಡೆಯಬೇಕು ಎಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ನಗರದ ಮಂಗಳಾ ಕ್ರೀಡಾಂಗಣದಲ್ಲಿ ರವಿವಾರ ಮಂಗಳೂರು ರನ್ನರ್ಸ್ ಕ್ಲಬ್ ಆಯೋಜಿಸಿದ್ದ ನೀವಯಸ್ ಮಂಗಳೂರು ಮ್ಯಾರಥಾನ್- 2023 ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಿ ಮಾತನಾಡಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ನೀವಿಯಸ್ ಸೊಲ್ಯೂಷನ್ ಪ್ರೈ.ಲಿ.ನ ಸಿಇಒ ಸುಯೋಗ್ ಶೆಟ್ಟಿ, ರೇಸ್ ಡೈರೆಕ್ಟರ್ ಅಭಿಲಾಷ್ ಡೊಮಿನಿಕ್, ಮಂಗಳೂರು ರನ್ನರ್ಸ್ ಕ್ಲಬ್ ಅಧ್ಯಕ್ಷೆ ಅಮಿತಾ ಡಿಸೋಜ ಉಪಸ್ಥಿತರಿದ್ದರು.

ಮ್ಯಾರಥಾನ್‌ನಲ್ಲಿ ವೃದ್ಧರು ಸೇರಿದಂತೆ ಸುಮಾರು ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.

42.2 ಕಿ.ಮೀ. ದೂರದ ಪೂರ್ಣ ಮ್ಯಾರಥಾನ್‌ನಲ್ಲಿ 100ಕ್ಕೂ ಹೆಚ್ಚು ಓಟಗಾರರು, 21.1 ಕಿ.ಮೀ. ದೂರದ ಹಾಫ್ ಮ್ಯಾರಥಾನ್‌ನಲ್ಲಿ 600ಕ್ಕೂ ಹೆಚ್ಚು ಮಂದಿ, 10 ಕಿಮೀ ನಲ್ಲಿ 1000ಕ್ಕೂ ಹೆಚ್ಚು, 5 ಕಿಮೀನಲ್ಲಿ 1,350ಕ್ಕೂ ಹೆಚ್ಚು ಮತ್ತು 2ಕಿಮೀ ಗಮ್ಮತ್ ಓಟದಲ್ಲಿ 900ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು. ಜಪಾನ್ ಮತ್ತು ಡೆನ್ಮಾರ್ಕ್‌ನ ಅಂತರ್‌ರಾಷ್ಟ್ರೀಯ ಓಟಗಾರರು ಮುಖ್ಯ ಆಕರ್ಷಣೆಯಾಗಿದ್ದರು. ಕಾರ್ಯಕ್ರಮದ ಚಾರಿಟಿ ಪಾಲುದಾರರಾದ ರೋಮನ್ ಮತ್ತು ಕ್ಯಾಥರೀನ್ ಲೋಬೊ ದೃಷ್ಟಿ ವಿಕಲಚೇತನರ ಶಾಲೆಯ ಮಕ್ಕಳು ಕೂಡಾ ಓಟದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ನ ಐಜಿಪಿ ಸಂದೀಪ್ ಪಾಟೀಲ್ ಮ್ಯಾರಥಾನ್ ಉದ್ಘಾಟಿಸಿ ಹಾಫ್ ಮ್ಯಾರಥಾನ್‌ ನಲ್ಲಿ ಭಾಗವಹಿಸಿದರು. ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಿಜೋ ಚಾಕೋ ಕುರಿಯನ್, ಡಿಸಿಪಿ ದಿನೇಶ್ ಕುಮಾರ್, ನಿವೀಯಸ್ ಸೊಲ್ಯೂಷನ್‌ನ ಚೀಫ್ ಗ್ರೋಥ್ ಆಫಿಸರ್ ಶಶಿಧರ್ ಶೆಟ್ಟಿ, ಸಿಎಫ್‌ಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ವಿಜಯ್ ಮೊರಾಸ್, ಮಂಗಳೂರು ಇನ್ಫೋಸಿಸ್‌ನ ಮುಖ್ಯಸ್ಥ ವಾಸುದೇವ್ ಕಾಮತ್, ಸಂಘಟಕ ಯತೀಶ್ ಬೈಕಂಪಾಡಿ, ಇನ್ಫೋಸಿಸ್‌ನ ದೀಪ್ ಡಿಸಿಲ್ವ ಉಪಸ್ಥಿತರಿದ್ದರು.

ಆರ್‌ಜೆ ಅನುರಾಗ್ ಕಾರ್ಯಕ್ರಮ ನಿರೂಪಿಸಿದರು.
















 


 


 


 


 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News