ಗಣಿ ಮತ್ತು ಪೊಲೀಸ್ ಇಲಾಖೆ ವಶಪಡಿಸಿಕೊಂಡ ಮರಳು ಮಾಯ: ಜಿಲ್ಲಾಧಿಕಾರಿಗೆ ದೂರು ನೀಡಲು ಹರೇಕಳ ಗ್ರಾಮಸಭೆ ನಿರ್ಧಾರ
ಕೊಣಾಜೆ: ಹರೇಕಳ ಗ್ರಾಮ ವ್ಯಾಪ್ತಿಯಲ್ಲಿ ಪೊಲೀಸ್ ಮತ್ತು ಗಣಿ ಇಲಾಖೆಯು ಜಂಟಿಯಾಗಿ ದಾಳಿ ನಡೆಸಿ ವಶಪಡಿಸಿ ಕೊಳ್ಳಲಾದ ಮರಳು ಮಾಯವಾಗಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂಬ ಆಗ್ರಹ ಸೋಮವಾರ ನಡೆದ ಹರೇಕಳ ಗ್ರಾಮ ಸಭೆಯಲ್ಲಿ ಕೇಳಿ ಬಂತು.
ಹರೇಕಳ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಮೊದಲ ಹಂತದ ಅಧಿಕಾರವಧಿಯ ಕೊನೆಯ ಗ್ರಾಮಸಭೆಯು ಗ್ರಾಪಂ ಅಧ್ಯಕ್ಷ ಬದ್ರುದ್ದೀನ್ ಫರೀದ್ ನಗರ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜರುಗಿ ಈ ಬಗ್ಗೆ ವಿಸ್ತ್ರತ ಚರ್ಚೆ ನಡೆಸಲಾಯಿತು. ಅಂತಿಮವಾಗಿ ಸೂಕ್ತ ಕ್ರಮಕ್ಕಾಗಿ ದ.ಕ.ಜಿಲ್ಲಾಧಿಕಾರಿಗೆ ದೂರು ನೀಡುವ ಬಗ್ಗೆ ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಗ್ರಾಪಂ ಗ್ರಾಮಸ್ಥರಿಗೆ ಬೇಕಾದ ಬಹುತೇಕ ಸೌಲಭ್ಯವನ್ನು ನಮ್ಮ ಅವಧಿಯಲ್ಲಿ ಒದಗಿಸಿಕೊಡಲಾಗಿದೆ. ಗ್ರಾಮದ ಸ್ವಚ್ಛತೆ ಗಾಗಿ ಘಟಕ ಸ್ಥಾಪಿಸಲಾಗಿದೆ. ಮನೆಗಳಿಗೆ ಬಕೆಟ್ ಮತ್ತು ಚೀಲ ನೀಡಲಾಗಿದೆ. ಈ ವಾರದಿಂದಲೇ ಕಸ ಸಂಗ್ರಹ ಆರಂಭಿಸಲಾಗುವುದು. ಗ್ರಾಮದ ಎಲ್ಲೂ ಹುಡುಕಿದರೂ ಕಸ ಸಿಗದಂತೆ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಬದ್ರುದ್ದೀನ್ ಫರೀದ್‌ನಗರ ಹೇಳಿದರು.
ಗ್ರಾಮದಲ್ಲಿ ಗಾಂಜಾ ಪ್ರಕರಣ ಸಹಿತ ಅಪರಾಧ ಕೃತ್ಯಗಳು ಹೆಚ್ಚಾಗುತ್ತಿವೆ. ಜಿಲ್ಲೆಯಲ್ಲಿ ಗಾಂಜಾ ಮುಕ್ತ ಅಭಿಯಾನ ಆರಂಭಗೊಂಡಿದೆ. ಆದರೂ ಪೊಲೀಸ್ ಅಧಿಕಾರಿಗಳು ಗ್ರಾಮಸಭೆಗೆ ಬಾರದೆ ನಿರ್ಲಕ್ಷ್ಯ ತೋರಿದ್ದಾರೆಂದು ಗ್ರಾಮಸ್ಥರು ಆರೋಪಿಸಿದರು.
ಪ್ರತಿ ಇಲಾಖೆಗೂ ರಿಜಿಸ್ಟರ್ ಅಂಚೆ ಮೂಲಕ ಪತ್ರ ಕಳಿಸಲಾಗಿದೆ. ಕೊಣಾಜೆ ಠಾಣೆಯ ನಿರೀಕ್ಷಕರು, ಎಸಿಪಿಗೂ ಮಾಹಿತಿ ನೀಡಲಾಗಿದೆ ಎಂದು ಅಧ್ಯಕ್ಷರು ಸ್ಪಷ್ಟಪಡಿಸಿದರು.
ವಿದ್ಯುತ್ ತಂತಿಗೆ ತೊಂದರೆ ಕೊಡುವ ಮರಗಳ ರೆಂಬೆ ಕಡಿಯಲು ಗ್ರಾಮಸ್ಥರು ಸಹಕಾರ ನೀಡುತ್ತಾರೆ. ಆದರೆ ಲೈನ್ ಮ್ಯಾನ್ ಟಿ.ಸಿ. ಆಫ್ ಮಾಡಿ ಹೋದ ನಂತರ ಬಂದಿಲ್ಲ. ಕಚೇರಿಗೆ ದೂರು ನೀಡದಿದ್ದರೆ ಲೈನ್ ಸರಿಪಡಿಸಲು ಆಗುವುದಿಲ್ಲ ಎಂದು ಲೈನ್‌ಮ್ಯಾನ್ ಹೇಳುವ ಮೂಲಕ ನಿರ್ಲಕ್ಷ್ಯ ತೋರುತ್ತಿದ್ದಾರೆಂದು ಗ್ರಾಮಸ್ಥರು ದೂರಿದರು.
ನೋಡೆಲ್ ಅಧಿಕಾರಿಯಾಗಿ ಅಕ್ಷರ ದಾಸೋಹ ಇಲಾಖೆಯ ರಾಜೇಶ್ ಭಾಗವಹಿಸಿದ್ದ್ದರು. ಗ್ರಾಪಂ ಉಪಾಧ್ಯಕ್ಷೆ ಕಲ್ಯಾಣಿ, ಕೃಷಿ ಇಲಾಖೆಯ ಅಧಿಕಾರಿ ಮುರಳೀಧರ ಅಮ್ಮನ್ನನವರ, ಪಾವೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನಿತಾ, ಮೆಸ್ಕಾಂ ಕಿರಿಯ ಅಭಿಯಂತರ ವಿನೋದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಶಾಲಿನಿ, ಗ್ರಾಮಕರಣಿಕೆ ಅಕ್ಷತಾ ಭಾಗವಹಿಸಿದ್ದರು. ಗ್ರಾಪಂ ಕಾರ್ಯದರ್ಶಿ ತಾರಾಕ್ಷಿ ವರದಿ ವಾಚಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ಕಾರ್ಯಕ್ರಮ ನಿರೂಪಿಸಿದರು.