ಮೂಡುಬಿದಿರೆ: ಬೈಕ್ ಕಳವು ಪ್ರಕರಣ; ಇಬ್ಬರ ಸೆರೆ
ಮೂಡುಬಿದಿರೆ, ನ.7: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದಿರೆ ಕೋಟೆಬಾಗಿಲು ಗ್ರಾಮದ ಸಯ್ಯದ್ ಝಾಕೀರ್ (20) ಮತ್ತು ಮುಹಮ್ಮದ್ ಶಾಹೀಮ್ (24) ಬಂಧಿತ ಆರೋಪಿಗಳಾಗಿದ್ದಾರೆ.
ನ.7ರಂದು ಬೆಳಗಿನ ಜಾವ ಮೂಡುಬಿದಿರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದ ಸಾವಿರ ಕಂಬದ ಬಸದಿಯ ಬಳಿ ಇರುವ ಕೊಂಡೆ ಸ್ಟ್ರೀಟ್ ಎಂಬಲ್ಲಿ ಇಬ್ಬರು ಯುವಕರನ್ನು ಹಾಗೂ ಅವರ ವಶದಲ್ಲಿದ್ದ ನಂಬ್ರ ಪ್ಲೇಟ್ ಇಲ್ಲದ ಬೈಕ್ ಇರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡು ವಿಚಾರಣೆಗೊಳಪಡಿಸಿದಾಗ ಬೈಕ್ ಕಳವು ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳು ಅ.25ರಂದು ಮಧ್ಯರಾತ್ರಿ ಮೂಡುಬಿದಿರೆ ಜೈನ್ ಪೇಟೆಯ ಬಡಗ ಬಸದಿ ಎದುರು ಇರುವ ದೇವಿ ಕೃಪಾ ಅಪಾರ್ಟ್‌ಮೆಂಟ್‌ನ ಪಾರ್ಕಿಂಗ್ ಏರಿಯಾದಿಂದ ಬೈಕನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.
ಮೂಡುಬಿದಿರೆ ಠಾಣಾ ವ್ಯಾಪ್ತಿಯ ಮಾರ್ಪಾಡಿ ಗ್ರಾಮದಲ್ಲಿರುವ ಎವರ್ ಪ್ರೈಸ್ ರೆಸಿಡೆನ್ಸ್, ಅಪಾರ್ಟ್ ಮೆಂಟ್‌ನ ಪಾರ್ಕಿಂಗ್ ಏರಿಯಾದಲ್ಲಿ ನಿಲ್ಲಿಸಿದ್ದ ಬೈಕನ್ನು ಕೂಡ ಕಳವು ಮಾಡಿ ಪೇಪರ್ ಮಿಲ್ ಬಳಿ ಇರುವ ಕೀರ್ತಿ ನಗರ ಕ್ರಾಸ್ ಬಳಿ ಪೊದೆಗಳ ಮಧ್ಯೆ ಬಚ್ಚಿಟ್ಟಿರುವ ಬಗ್ಗೆಯೂ ಆರೋಪಿಗಳು ಮಾಹಿತಿ ನೀಡಿದ್ದಾರೆ. ಆ ಬೈಕನ್ನು ಕೂಡಾ ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಬೈಕ್‌ಗಳ ಮೌಲ್ಯ 3 ಲಕ್ಷ ರೂ. ಅಂದಾಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೂಡುಬಿದಿರೆ ಠಾಣಾ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ ಹಾಗೂ ಠಾಣಾ ಅಪರಾಧ ವಿಭಾಗದ ಸಿಬ್ಬಂದಿ ಮುಹಮ್ಮದ್ ಇಕ್ಬಾಲ್, ಮುಹಮ್ಮದ್ ಹುಸೇನ್, ಅಖೀಲ್ ಅಹಮ್ಮದ್, ನಾಗರಾಜ್, ವೆಂಕಟೇಶ್, ಚಂದ್ರಹಾಸ ರೈ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ.