ಸೌಲಭ್ಯಗಳನ್ನು ಒದಗಿಸಲು ಹಜ್ ಸಮಿತಿಯ ನಿರ್ಲಕ್ಷ್ಯ ಆರೋಪ; ಮುಸ್ಲಿಂ ಲೀಗ್ ವಿಷಾದ

Update: 2024-07-05 14:10 GMT

ಮಂಗಳೂರು: ಕರ್ನಾಟಕ ರಾಜ್ಯ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಿಂದ ಪವಿತ್ರ ಹಜ್ ಯಾತ್ರೆಗೆ ತೆರಳಿದ್ದ ಹಲವು ಮಂದಿ ಹಜ್ ಯಾತ್ರಿಕರು ವಿವಿಧ ಸವಲತ್ತುಗಳಿಂದ ವಂಚಿತರಾಗಿ ವಿಪರೀತ ಯಾತನೆಗೊಳಪಟ್ಟ ಬಗ್ಗೆ ವರದಿಯಾಗಿದ್ದು, ಹಜ್ ಸಮಿತಿಯ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಮುಸ್ಲಿಂ ಲೀಗ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯು ವಿಷಾದ ವ್ಯಕ್ತಪಡಿಸಿದೆ.

ಯಾತ್ರಿಕರು ಅಪಾರ ಮೊತ್ತ ನೀಡಿ ಹಜ್ ಯಾತ್ರೆ ಕೈಗೊಂಡಿದ್ದು ಹಜ್‌ಗೆ ತೆರಳಿದ ನಂತರ ಈ ಸಮಿತಿಯ ತನಗೆ ಸಂಬಂಧ ವಿಲ್ಲದಂತೆ ವರ್ತಿಸಿದ್ದಾರೆ. ಮಹಿಳೆಯರು, ಹಿರಿಯರು, ಬಿಸಿಲ ಬೇಗೆಯಿಂದ ನೊಂದಿದ್ದು, ಸಮರ್ಪಕ ಸಾರಿಗೆ ವ್ಯವಸ್ಥೆ ಇಲ್ಲದೆ, ಸೂರಿನ ವ್ಯವಸ್ಥೆ ಇಲ್ಲದೇ ಹಲವಾರು ದೂರ ಕಾಲ್ನಡಿಗೆಯಿಂದಲೇ ಸಾಗಬೇಕಾದ ಪರಿಸ್ಥಿತಿ ಒದಗಿರುವುದಲ್ಲದೇ ಯಾತ್ರಿಗಳ ಬಗ್ಗೆ ಮಾರ್ಗದರ್ಶಕರು ಇಲ್ಲದೇ ಇರುವುದು ವಿಷಾದನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಅಬ್ದುರ‌್ರಹ್ಮಾನ್ ಸಿ ಅಭಿಪ್ರಾಯಪಟ್ಟಿದ್ದಾರೆ.

ಯಾತ್ರೆ ತೆರಳುವಾಗ ಹಲವಾರು ಮುಖಂಡರು, ರಾಜಕೀಯ ನಾಯಕರು ಸಂಭ್ರಮದಿಂದ ಬೀಳ್ಕೊಡುಗೆ ಮಾಡುತ್ತಿದ್ದು, ಹಜ್ ಯಾತ್ರಿಗಳ ಸ್ವಾಗತಕ್ಕೆ ಏಕೆ ಸಜ್ಜಾಗಿಲ್ಲ? ಎಂಬ ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಸಂಭವಿಸದಂತೆ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ತಮ್ಮ ನೇತೃತ್ವದಲ್ಲಿ ಜಿಲ್ಲಾ ಮುಸ್ಲಿಂ ಲೀಗ್ ಕೋಶಾಧಿಕಾರಿ ರಿಯಾಝ್ ಹರೇಕಳ, ಮುಸ್ಲಿಂ ಲೀಗ್‌ನ ಧುರೀಣರಾದ ಎಂ ಎ ಅಶ್ರಫ್, ಬಶೀರ್ ಉಳ್ಳಾಲ, ನೌಶಾದ್ ಮಲಾರ್, ಹಾಜಿ ಅಬ್ದುಲ್ ಖಾದರ್, ಹಾಜಿ ಅಬ್ದುಲ್ ರಹ್ಮಾನ್ ಮತ್ತು ಸಯ್ಯಿದ್ ಬಂಗೇರುಕಟ್ಟೆ, ಶಬೀರ್ ತಲಪಾಡಿ ನೇತೃತ್ವದ ನಿಯೋಗವೊಂದು ರಾಜ್ಯದ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟವರನ್ನು ಶೀಘ್ರದಲ್ಲೇ ಭೇಟಿಯಾಗಿ ಮನವಿ ಮಾಡುವುದಾಗಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News