ಮಂಗಳೂರು: ಹಲ್ಲೆ ಪ್ರಕರಣ; ರಾಜಿಯಾದರೂ ಶಿಕ್ಷೆ ತಪ್ಪಲಿಲ್ಲ

Update: 2024-07-05 16:41 GMT

ಮಂಗಳೂರು: ಕೊಲೆ ಯತ್ನ ಪ್ರಕರಣವೊಂದರಲ್ಲಿ ಸಾಕ್ಷಿದಾರರು ರಾಜಿಯಾಗಿ ಅಭಿಯೋಜನೆಗೆ ವಿರುದ್ಧವಾಗಿ ಸಾಕ್ಷಿ ನುಡಿದರೂ, ತನಿಖಾಧಿಕಾರಿ ಹಾಜರುಪಡಿಸಿದ ಸಿಸಿ ಕ್ಯಾಮರಾ ದೃಶ್ಯಾವಳಿ ಮತ್ತು ಪೊರೆನ್ಸಿಕ್ ವರದಿಯನ್ನೇ ಬಲವಾದ ಸಾಕ್ಷಿಯೆಂದು ಪರಿಗಣಿಸಿ ಆರೋಪಿಗಳಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಸುರತ್ಕಲ್ ಇಡ್ಯಾ ಗ್ರಾಮಮದ ಕಾನಕಟ್ಲ ಜನತಾ ಕಾಲನಿ ನಿವಾಸಿ ರಾಜೇಶ್ ದೇವಾಡಿಗ ಯಾನೇ ರಾಜಾ (42) ಮತ್ತು ಜೋಕಟ್ಟೆ 62ನೇ ತೋಕೂರು ಶೇಡಿಗುರಿ ಗ್ರಾಮದ ಜಗದೀಶ್ ಯಾನೇ ಜಗ್ಗು (45) ಶಿಕ್ಷೆಗೆ ಒಳಗಾದವರು.

ಪ್ರಕರಣದ ವಿವರ

ಶಿಕ್ಷೆಗೊಳಗಾಗಿರುವ ರಾಜೇಶ್ ದೇವಾಡಿಗ, ದೂರುದಾರ ಇಡ್ಯಾ ಜನತಾ ಕಾಲನಿ ನಿವಾಸಿ ಜೀವನ್ ಮಸ್ಕರೇನಸ್ (28) ಅವರು 2016ರಲ್ಲಿ ನಡೆದ ಹಲ್ಲೆ ಪ್ರಕರಣದಲ್ಲಿ ಆರೋಪಿಗಳಾಗಿದ್ದರು. ರಾಜೇಶ್ ನ್ಯಾಯಾಲಯಕ್ಕೆ ಹಾಜರಾಗದೇ ಪ್ರಕರಣದ ವಿಚಾರಣೆ ದಿನಾಂಕ ಮುಂದೂಡಿಕೆಯಾಗುತಿತ್ತು. ಇದರಿಂದ ಜೀವನ್‌ಗೆ ತೊಂದರೆಯಾಗುತ್ತಿದ್ದರಿಂದ ಅನೇಕ ಬಾರಿ ಇವರ ನಡುವೆ ಮಾತಿನ ಚಕಮಕಿ ನಡೆದಿತ್ತು.

2019ರ ಡಿ.14ರಂದು ರಾತ್ರಿ 10:30ರ ವೇಳೆಗೆ ಇಡ್ಯಾ ಜನತಾ ಕಾಲನಿ ಕ್ರಾಸ್ ಬಳಿಯ ಬಾರೊಂದರಲ್ಲಿ ಜೀವನ್ ಹಾಗೂ ಆತನ ಗೆಳೆಯ ಪ್ರಶಾಂತ್ ಮದ್ಯ ಸೇವಿಸುತ್ತಿದ್ದಾಗ, ರಾಜೇಶ್ ದೇವಾಡಿಗ ಮತ್ತು ಜಗದೀಶ್ ಅಲ್ಲಿಗೆ ಬಂದಿದ್ದಾರೆ. ಜೀವನ್ನನ್ನು ನೋಡಿದ ಆತ ಹೊರಗೆ ಹೋಗಿ ಕತ್ತಿಯನ್ನು ಹಿಡಿದು ಕೊಂಡು ಬಂದು ಆತನನ್ನು ಕೊಲೆ ಮಾಡುವ ಉದ್ದೇಶ ದಿಂದ ಅವಾಚ್ಯ ಶಬ್ಧಗಳಿಂದ ಬೈದು ಕತ್ತಿಯಿಂದ ಹೊಡೆದಿದ್ದಾನೆ ಎನ್ನಲಾಗಿದೆ.

ಪ್ರಶಾಂತ್ ಹಾಗೂ ಬಾರ್ ಸಿಬ್ಬಂದಿ ತಡೆಯಲು ಬಂದಾದ ಅವರಿಗೂ ಕತ್ತಿಯಿಂದ ಬೀಸಿದ್ದಾನೆ. ಬಳಿಕ ಅಲ್ಲಿಂದ ತಪ್ಪಿಸಿ ಕೊಂಡು ಓಡಿದ್ದು, ಓಡುವಾಗ ಪ್ರಶಾಂತ್ ಮೇಲೆ ಸೋಡಾ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಸುರತ್ಕಲ್ ಠಾಣೆಯ ಅಂದಿನ ಪಿಎಸ್‌ಐ ಸುಂದರಿ ಕೆ. ಅವರು ತನಿಖೆ ಪೂರ್ಣಗೊಳಿಸಿ ಐಪಿಸಿ ಕಲಂ 504 ಮತ್ತು 307ರ ಜತೆಗೆ 34ರ ಅನ್ವಯ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜತೆಗೆ ಬಾರ್‌ನ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಲ್ಲಿಸಿದ್ದು, ಅಲ್ಲಿನ ವೈಜ್ಞಾನಿಕ ಅಧಿಕಾರಿ ದಾಖಲೆ ನೈಜತೆಯಿಂದ ಕೂಡಿದೆ ಎಂದು ವರದಿ ನೀಡಿದ್ದರು.

ಪ್ರಕರಣದಲ್ಲಿ 31 ಸಾಕ್ಷಿದಾರರು ಮತ್ತು 58 ದಾಖಲೆಗಳನ್ನು ಗುರುತಿಸಲಾಗಿತ್ತು. ಸಾಕ್ಷಿದಾರರು ಅಭಿಯೋಜನೆಗೆ ವಿರುದ್ಧ ವಾಗಿ ಸಾಕ್ಷಿ ನುಡಿದರೂ ನ್ಯಾಯಾಲಯ ಸಿಸಿ ಕ್ಯಾಮರಾ ದೃಶ್ಯಾವಳಿ ಮತ್ತು ಪೊರೆನ್ಸಿಕ್ ವರದಿಯನ್ನು ಸಾಕ್ಷಿ ಎಂದು ಪರಿಗಣಿಸಿದೆ.

1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್. ಅವರು ರಾಜೇಶ್ ದೇವಾಡಿಗನಿಗೆ 323 ದಿನಗಳ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ, ಜಗದೀಶನಿಗೆ 39 ದಿನಗಳ ಸಾದಾ ಸಜೆ ಮತ್ತು 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಇಬ್ಬರೂ ವಿಚಾರಣಾಧೀನ ಕೈದಿಗಳಾಗಿ ಅದಕ್ಕಿಂತಲೂ ಹೆಚ್ಚು ದಿನ ಜೈಲಿನಲ್ಲಿದ್ದ ಕಾರಣ ಜೈಲು ಶಿಕ್ಷೆಯನ್ನು ಮನ್ನಾ ಮಾಡಲಾಗಿದೆ. 

ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಜುಡಿತ್ ಓಲ್ಗಾ ಮಾರ್ಗರೇಟ್ ಕ್ರಾಸ್ತಾ ವಾದ ಮಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News