ಕಾರ್ಮಿಕ ಕಾನೂನುಗಳ ಸಂಹಿತೆ ವಿರುದ್ಧ ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟನೆ

Update: 2024-09-23 12:34 GMT

ಮಂಗಳೂರು: ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಜಾರಿಗೆ ತಂದಿರುವ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಸೋಮವಾರ ನಗರದ ಕ್ಲಾಕ್ ಟವರ್ ಬಳಿಯಲ್ಲಿ ಜೆಸಿಟಿಯು ನೇತೃತ್ವದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಲಾಯಿತು.

ಕಾರ್ಪೊರೇಟ್ ಕಂಪೆನಿಗಳ ಹಿತ ಕಾಯುವ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೀತಾರಾಮ ಬೇರಿಂಜ ಕೈಗಾರಿಕಾ ಕುರಿತಾಗಿನ ಕಾಯ್ದೆಯು ಕಾರ್ಮಿಕ ಸಂಘಗಳ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳುತ್ತಿದೆ. ವಾರ್ಷಿಕ ರಿಟರ್ನ್ಸ್ ಸಲ್ಲಿಸು ವಲ್ಲಿ ಕಾರ್ಮಿಕ ಸಂಘಗಳು ವಿಳಂಬ ಮಾಡಿದರೆ ಸಂಘದ ನೋಂದಣಿ ರದ್ದು ಅಥವಾ ಭಾರೀ ದಂಡ ವಿಧಿಸುವ ಮೂಲಕ ಸಂಘಗಳ ಅಸ್ತಿತ್ವಕ್ಕೆ ದಕ್ಕೆ ತರುವ ಕೆಲಸ ಮಾಡುತ್ತಿದೆ. ಕಾರ್ಮಿಕರ ಮುಷ್ಕರದ ಹಕ್ಕನ್ನು ಸಂಪೂರ್ಣವಾಗಿ ಕಸಿದು ಕೊಳ್ಳಲಾಗುತ್ತಿದೆ ಎಂದು ಹೇಳಿದರು.

ಸಿಐಟಿಯು ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಸಿಐಟಿಯು ಜಿಲ್ಲಾ ನಾಯಕ ವಸಂತ ಆಚಾರಿ, ಬ್ಯಾಂಕ್ ಅಧಿಕಾರಿಗಳ ಸಂಘಟನೆಯ ರಾಜ್ಯ ನಾಯಕ ಸುರೇಶ್ ಹೆಗ್ಡೆ, ಬ್ಯಾಂಕ್ ನೌಕರರ ಸಂಘಟನೆಯ ರಾಜ್ಯ ನಾಯಕ ಕೆ. ಫಣೀಂದ್ರ, ಎಐಟಿಯುಸಿ ಜಿಲ್ಲಾ ನಾಯಕ ಸುರೇಶ ಕುಮಾರ್ ಮಾತನಾಡಿದರು.

ಪ್ರತಿಭಟನೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಸುಕುಮಾರ್ ತೊಕ್ಕೋಟ್ಟು, ಜಯಂತ ನಾಯಕ್, ನೋಣಯ್ಯ ಗೌಡ, ಬಿ.ಕೆ. ಇಮ್ತಿಯಾಝ್, ಚಂದ್ರಹಾಸ, ರಾಧಾ ಮೂಡುಬಿದಿರೆ, ಲೋಲಾಕ್ಷಿ, ಸುಂದರ ಕುಂಪಲ, ಭಾರತಿ ಬೋಳಾರ, ಜಯಲಕ್ಷ್ಮಿ, ರೋಹಿದಾಸ್, ವಿಲಾಸಿನಿ, ಕೃಷ್ಣಪ್ಪ, ಲಕ್ಷ್ಮಿ, ಬಿ. ಶೇಖರ್, ವಿ. ಕರುಣಾಕರ್, ಪುಷ್ಪರಾಜ್ ಬೋಳೂರು, ಪ್ರವೀಣ್ ಕುಮಾರ್, ಸುಲೋಚನಾ, ಕುಸುಮಾ, ಸದಾಶಿವದಾಸ್, ನವೀನ್ ಕೊಂಚಾಡಿ, ರಿಜ್ವಾನ್ ಹರೇಕಳ, ಜಗದೀಶ್ ಬಜಾಲ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News