ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಪ್ರಮುಖರ ಸಭೆ: ಐವನ್ ಡಿಸೋಜ
ಮಂಗಳೂರು: ಕರಾವಳಿ ಭಾಗದ ಜನರ ಅನುಕೂಲಕ್ಕಾಗಿ ಮಂಗಳೂರು ನಗರದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಪ್ರಮುಖರೊಂದಿಗೆ ಸಭೆ ನಡೆಸಲು ಸರಕಾರದ ವಲಯದಲ್ಲಿ ಪ್ರಯತ್ನಿಸಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಹೇಳಿದರು.
ಮಂಗಳವಾರ ಕೆನರಾ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಹೈ ಕೋರ್ಟ್ ಪೀಠ ಸ್ಥಾಪನೆಗೆ ಆಗ್ರಹಿಸಿ ನಡೆದ ಸಮಾಲೋಚನೆ ಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಯಾದರೆ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡ, ಹಾಸನ ಜಿಲ್ಲೆಗಳ ಜನರಿಗೆ ಅನುಕೂಲವಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಎಚ್.ವಿ.ರಾಘವೇಂದ್ರ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಹೈಕೋರ್ಟ್‌ನಲ್ಲಿವೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುವ ಖರ್ಚು ವೆಚ್ಚ, ವ್ಯಾಜ್ಯದ ವೆಚ್ಚ ಸೇರಿದಂತೆ ಜನಸಾಮಾನ್ಯರಿಗೆ ತೀವ್ರ ಹೊರೆಯಾಗುತ್ತಿವೆ. ಪ್ರಸ್ತುತ ನ್ಯಾಯಾಧೀಶರ ಸಂಖ್ಯೆಯೂ ಕೂಡ ಹೆಚ್ಚಳವಾಗಿದ್ದು, ಈ ಭಾಗದಲ್ಲಿ ಪೀಠ ಸ್ಥಾಪನೆಯ ಅಗತ್ಯವಿದೆ ಎಂದರು.
ಕೆಸಿಸಿಐ ಅಧ್ಯಕ್ಷ ಆನಂದ ಪೈ ಮಾತನಾಡಿ, ಪೀಠ ಸ್ಥಾಪನೆಗೆ ಬೇಕಾದ ಅಗತ್ಯ ಸಹಕಾರವನ್ನು ಸಂಸ್ಥೆಯ ವತಿಯಿಂದ ನೀಡಲಾಗುವುದು ಎಂದರು. ಈ ಭಾಗದ ಸಚಿವರು, ಸಂಸದರು, ಶಾಸಕರು ಪ್ರಯತ್ನಿಸಿ ಸರಕಾರಕ್ಕೆ ಒತ್ತಡ ಹೇರಿದ್ದಲ್ಲಿ ಪೀಠ ಸ್ಥಾಪನೆ ಸಾಧ್ಯ ಎಂದು ವಕೀಲ ಎಂ.ಪಿ. ನೊರೋನ್ಹಾ ಹೇಳಿದರು.
ಕೆಸಿಸಿಐ ಉಪಾಧ್ಯಕ್ಷ ಪಿ.ಬಿ. ಅಹಮ್ಮದ್ ಮುದಸರ್, ಕಾರ್ಯದರ್ಶಿ ಅಶ್ವಿನ್ ಪೈ ಮಾರೂರು, ಅದಿತ್ಯ ಪೈ, ಮಂಗಳೂರು ವಕೀಲರ ಸಂಘದ ಉಪಾಧ್ಯಕ್ಷ ಸುಜಿತ್ ಕುಮಾರ್, ಪ್ರಮುಖರಾದ ಪ್ರೊ. ಸಿಎ ಲೈನಲ್ ಅರನ್ಹಾ, ಎ., ಶ್ರೀಧರ್ ಎಚ್. ಗಿರೀಶ್ ಶೆಟ್ಟಿ ಎ., ಜ್ಯೋತಿ, ಕೆ. ಪೃಥ್ವಿರಾಜ್ ರೈ, ಮೋನಪ್ಪ ಭಂಡಾರಿ, ಶ್ರೀಧರ್ ಎಣ್ಮಕಜೆ ಉಪಸ್ಥಿತರಿದ್ದರು.