ಎಂಡೋಸಲ್ಫಾನ್ ಫಲಾನುಭವಿಗಳಿಗೆ ಎಂಆರ್‌ಪಿಎಲ್‌ನಿಂದ ಕೃತಕ ಕಾಲು ಜೋಡಣಾ ಶಿಬಿರ
ಮಂಗಳೂರು : ಎಂಆರ್‌ಪಿ.ಎಲ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜೈಪುರ್ ಪೂಟ್ಸ್ ಸಹಕಾರ ದಲ್ಲಿ ಎಂಡೋಸಲ್ಫಾನ್ ನಿಂದ ಬಲಳುತ್ತಿರುವವರಿಗೆ ಕೃತಕ ಕಾಲು ಜೋಡಣಾ ಶಿಬಿರ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು, ಬಂಟ್ವಾಳ ಮತ್ತಿತರ ಕಡೆಗಳಲ್ಲಿ ನಡೆಯಿತು.
ಸುಮಾರು 13 ಲಕ್ಷ ರೂಪಾಯಿ ವೆಚ್ಚದಲ್ಲಿ, 77 ಫಲಾನುಭವಿಗಳಿಗೆ ಕೃತಕ ಕಾಲು ಜೋಡಣೆ ಮಾಡಲಾಗಿದ್ದು, ಫಲಾನುಭವಿ ಗಳ ಕಾಲಿನ ಅಳತೆ ಪಡೆದು ಅವರ ಕಾಲಿಗೆ ಹೊಂದುವಂತಹ ಕೃತಕ ಕಾಲನ್ನು ಸ್ಥಳದಲ್ಲೇ ತಯಾರಿಸಿ ಅಳವಡಿಸಲಾಗಿದೆ. ನಿರಂತರ ಮೂರು ದಿನಗಳ ಕಾಲ ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಸ್ಥಳೀಯ ಸರಕಾರಿ ಅಸ್ಪತ್ರೆಗಳಲ್ಲಿ ಈ ಶಿಬಿರ ಆಯೋಜಿ ಸಲಾಗಿದ್ದು, ಅಲ್ಲದೆ ಫಲಾನುಭವಿಗಳಿಗೆ ಪೋಷಕಾಂಶಯುಕ್ತ ಆಹಾರ ಕಿಟ್ ನೀಡಲಾಯಿತು. ದ.ಕ. ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಎಚ್. ಆರ್ ತಿಮ್ಮಯ್ಯ ಮಾತನಾಡಿ ಎಂ.ಆರ್ ಪಿ.ಎಲ್ ಕಳೆದ ಹಲವು ವರ್ಷಗಳಿಂದ ಎಂಡೋಸಲ್ಫಾನ್ ಪೀಡಿತರಿಗೆ ಸಹಕಾರ ನೀಡುತ್ತಿದ್ದು, ಇದೀಗ ಫಲಾನುಭವಿಗಳಿಗೆ ಉಚಿತ ಕೃತಕ ಕಾಲು ವಿತರಣಾ ಶಿಬಿರ ಆಯೋಜಿಸಿ ಮತ್ತೆ ಗಮನ ಸೆಳೆದಿದೆ, ಅಲ್ಲದೆ ಫಲಾನುಭವಿಗಳಿಗೆ ಪೌಷ್ಠಿಕಾಂಶದ ಕಿಟ್ ದಿನ ಬಳಕೆಯ ಕಿಟ್ ಹೀಗೆ ನೀಡುವ ಮೂಲಕ ಅನೇಕ ಬಾರಿ ಸಹಕಾರ ನೀಡಿದೆ, ಸಂಸ್ಥೆ ತನ್ನ ಸಿಎಸ್‌ಆರ್ ಅನುದಾನದದಿಂದ ನಡೆಸುವ ನಿರಂತರ ಸಮಾಜ ಮುಖಿ ಕೆಲಸಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭ ತಾಲೂಕು ಆರೋಗ್ಯ ಅಧಿಕಾರಿ ಡಾ ದೀಪಕ್ ರೈ, ಡಾ ಸಂಜಾತ್, ಎಂಡೋಸಲ್ಫಾನ್ ಜಿಲ್ಲಾ ಸಂಯೋಜಕ ಸಾಜುದೀನ್, ಎಂಆರ್‌ಪಿಎಲ್ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೊಮತ್ತಿತರರು ಉಪಸ್ಥಿತರಿದ್ದರು.