ಮಂಗಳೂರು| ಸೌಹಾರ್ದ - ಸಹೋದರತ್ವ ವಾತಾವರಣ ಬೆಳೆಸೋಣ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ನಾಡೆಲ್ಲಾ ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆಯ ಗುಂಗಿನಲ್ಲಿರುವಂತೆಯೇ ಮಂಗಳೂರಿನಲ್ಲಿ ಗ್ಲೋಬಲ್ ವಿಲೆಜ್ (ಜಾಗತಿಕ ಹಳ್ಳಿ) ಪರಿಕಲ್ಪನೆಯಲ್ಲಿ 3 ವರ್ಷಗಳ ಬಳಿಕ ಹಮ್ಮಿಕೊಳ್ಳಲಾಗಿರುವ ಕರಾವಳಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಇಂದಿನಿಂದ ಜ. 19ರವರೆಗೆ ನಡೆಯಲಿರುವ ಕರಾವಳಿ ಉತ್ಸವವನ್ನು ಕರಾವಳಿ ಉತ್ಸವ ಮೈದಾನದ ಸಭಾಂಗಣದಲ್ಲಿ ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ದಕ್ಷಿಣ ಕನ್ನಡ ವೈವಿಧ್ಯಮಯ ಸಂಸ್ಕೃತಿಯನ್ನು ಹೊಂದಿರುವ ಜಿಲ್ಲೆಯಾಗಿದ್ದು, ಇಂತಹ ಸೌಹಾರ್ದತೆಯ ವಾತಾವರಣ ಬೇರೆಲ್ಲೂ ಸಿಗದು. ಇಲ್ಲಿ ಸೌಹಾರ್ದ ಮತ್ತು ಸಹೋದರತ್ವ ವಾತಾವರಣವನ್ನು ಬೆಳೆಸೋಣ ಎಂದು ಕರೆ ನೀಡಿದರು.
ಕಾರಣಾಂತರಗಳಿಂದ ಮೂರು ವರ್ಷಗಳಿಂದ ನಿಂತು ಹೋಗಿದ್ದ ಕರಾವಳಿ ಉತ್ಸವವನ್ನು ಈ ವರ್ಷದಿಂದ ಪುನರಾರಂಭಿಸಲಾಗಿದೆ. ಇಲ್ಲಿ ಇಂತಹ ಉತ್ಸವ, ಹಬ್ಬಗಳನ್ನು ಮಾಡಿದಾಗ, ತಮ್ಮ ಕಲೆ, ಪದ್ಧತಿ, ಆಚರಣೆಗಳನ್ನು ತೋರಿಸುವ ಅವಕಾಶವಾಗುತ್ತದೆ. ಈ ಜಿಲ್ಲೆಯಲ್ಲಿ ಕೊಂಕಣಿ, ಅರೆಭಾಷೆ, ಬ್ಯಾರಿ, ಹವ್ಯಕ, ಕನ್ನಡ ಸೇರಿದಂತೆ ಹಲವಾರು ಭಾಷೆಗಳನ್ನು ಮಾತನಾಡುವವರಿದ್ದಾರೆ. ಜತೆಗೆ ತಮ್ಮದೇ ಆದ ಸಾಂಸ್ಕೃತಿಕ ಪಾರಂಪರಿಕ ಪದ್ಧತಿಗಳನ್ನು ಉಳಿಸಿ ಕೊಂಡು ಬಂದಿದ್ದಾರೆ. ಸೌಹಾರ್ದಯುತ ವಾತಾವರಣವನ್ನು ಕಾಪಾಡಿಕೊಂಡಿದ್ದಾರೆ. ಎಲ್ಲಾ ಸಮುದಾಯಗಳು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಲವಾರು ಸಂಘ ಸಂಸ್ಥೆಗಳನ್ನು ಕಟ್ಟಿಕೊಂಡಿದ್ದಾರೆ. ಇಲ್ಲಿ ವಿವಿಧ ಹಬ್ಬಗಳ ಆಚರಣೆಯ ಜತೆಗೆ ಇಲ್ಲಿನ ದೇವಸ್ಥಾನಗಳು ದೇಶದಲ್ಲೇ ಪ್ರಸಿದ್ಧಿಯನ್ನು ಪಡೆದಿವೆ. ಎಲ್ಲಾ ಭಾಗದಿಂದ ಇಲ್ಲಿಗೆ ಜನರು ಭೇಟಿ ನೀಡುವ ಪುಣ್ಯ ಹಾಗೂ ವೈಶಿಷ್ಟ್ಯಮಯ ಭೂಮಿ ಎಂದವರು ಹೇಳಿದರು.
ಕ್ರಿಸ್‌ಮಸ್, ಹೊಸವರ್ಷದ ಜತೆಗೆ ರಾಜ್ಯ ಮಟ್ಟದ ಒಲಿಂಪಿಕ್ಸ್ ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಕ್ರೀಡಾ, ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಇಲ್ಲಿ ಜತೆಯಾಗಿ ಸುಮಾರು ಒಂದು ತಿಂಗಳ ಕಾಲ ಜರಗಲಿದೆ ಎಂದು ಅವರು ಹೇಳಿದರು.
ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ ಮಾತನಾಡಿ, ವಿವಿಧ ರೀತಿಯ ಆಚಾರ ವಿಚಾರಗಳನ್ನು ಪ್ರಸ್ತುಪಡಿಸುವ ಹಾಗೂ ಕುಟುಂಬ ಸಹಿತ ಭಾಗವಹಿಸುವ ಉತ್ಸವ ಇದಾಗಿದ್ದು ಈ ಮೂಲಕ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸುವ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೊಂಕಣಿ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್ ಮಾತನಾಡಿ ಶುಭ ಹಾರೈಸಿದರು.
ಬ್ಯಾರಿ ಅಕಾಡಮಿ ಅಧ್ಯಕ್ಷ ಉಮರ್ ಯು. ಎಚ್., ಗ್ಯಾರಂಟಿ ಸಮಿತಿ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ, ಪಾಲಿಕೆ ವಿಪಕ್ಷ ನಾಯಕ ಅನಿಲ್ ಕುಮಾರ್, ಎಂ ಆರ್ ಪಿ ಎಲ್ ಎಂಡಿ ಶ್ಯಾಮ್ ಪ್ರಸಾದ್ ಕಾಮತ್, ಕ್ರೆಡೈ ಅಧ್ಯಕ್ಷ ವಿನೋದ್, ಕೆಸಿಸಿ ಐ ಅಧ್ಯಕ್ಷ ಆನಂದ್, ರೋಹನ್ ಕಾರ್ಪೊರೇಷನ್ ಮುಖ್ಯಸ್ಥ ರೋಹನ್ ಮೊಂತೆರೋ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಜಿ.ಪಂ. ಸಿಇಒ ಡಾ. ಆನಂದ್, ಅಪರ ಜಿಲ್ಲಾಧಿಕಾರಿ ಡಾ. ಸಂತೋಷ್, ಪಾಲಿಕೆ ಆಯುಕ್ತ ಆನಂದ್ ಸಿ.ಎಲ್., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕ ರಾಜೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
ಮಂಗಳೂರು ಉಪ ವಿಭಾಗಾಧಿಕಾರಿ ಹರ್ಷವರ್ಧನ್ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ಮತ್ತು ಕಾರ್ಯಕ್ರಮ ನಿರೂಪಿಸಿದರು.
ಕರಾವಳಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೇಯರ್ ಮನೋಜ್ ಕುಮಾರ್ ಮಾತನಾಡಿ, ವಿವಿಧ ತಂಡಗಳ ಕಲಾಪ್ರದರ್ಶನ, ವೇಷಭೂಷಣಗಳ ಮೂಲಕ ತುಳುನಾಡಿನ ಸಂಸ್ಕೃತಿ ಈ ಉತ್ಸವದಲ್ಲಿ ಮೇಳೈಸಿದೆ’ ಎಂದರು.
ನಮ್ಮದು ಇತರ ಜಿಲ್ಲೆಗಳಂತೆ ಅಲ್ಲ. ಇಲ್ಲಿನ ಭಾಷೆಗಳು, ಜಾತಿಗಳು, ಆಚಾರ ವಿಚಾರಉಡುಗೆ ತೊಡುಗೆ ಅಹಾರ ಪದ್ದತಿ ಜೀವನ ಪದ್ದತಿ ಕಲೆ ಸಂಸ್ಕೃತಿ ವಿಭಿನ್ನ. ಹಾಗಿದ್ದರೂ ಏಕತೆ ಕಾಯ್ದುಕೊಂಡಿರುವ ಈ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿ ಸ್ಥಾನದಲ್ಲಿದೆ. ಹೊರಜಿಲ್ಲೆಯವರಿಗೆ ಇಲ್ಲಿನ ಯುವ ಜನರಿಗೆ ಇಲ್ಲಿನ ವೈಶಿಷ್ಟ್ಯ ತಿಳಿಸಬೇಕಾಗಿದೆ. ಕರಾವಳಿ ದೇಶದ ಇತರ ಕಡೆಗಳಲ್ಲೂ ಇರುವುದರಿಂದ ಕರಾವಳಿ ಉತ್ಸವದ ಹೆಸರನ್ನು ತುಳುನಾಡು ಉತ್ಸವ ಎಂದು ಬದಲಿಸಬೇಕು ಎಂದು ಸಲಹೆ ನೀಡಿದರು.
ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿಯವರೂ ತುಳುನಾಡ ಬಹು ಸಂಸ್ಕೃತಿಯ ಉತ್ಸವವನ್ನಾಗಿ ಹೆಸರಿಸಬೇಕು ಎಂದರು.
ಮೆರವಣಿಗೆಗೆ ಕೊರಗರ ನೃತ್ಯ, ಸಾಂತಕ್ಲಾಸ್, ದಫ್, ಹುಲಿವೇಷದ ಮೆರುಗು
ಸಭಾ ಕಾರ್ಯಕ್ರಮಕ್ಕೆ ಮೊದಲು ಆಕರ್ಷಕ ಮೆರವಣಿಗೆ ನಡೆಯಿತು. ನಗರದ ಸಂತ ಅಲೋಶಿಯಸ್ ಪಿ.ಯು. ಕಾಲೇಜಿ ನಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಗಿದ್ದು, ಮೆರವಣಿಗೆಯಲ್ಲಿ ಕರಾವಳಿಯ ಮೂಲ ನಿವಾಸಿಗಳಾದ ಕೊರಗರ ಡೋಲು ಮತ್ತು ಕೊಳಲು ವಾದನ ನೃತ್ಯದ ಜತೆಗೆ, ಕ್ರಿಸ್‌ಮಸ್ ಆಚರಣೆಯ ಪ್ರಯುಕ್ತ ಸಾಂತಾಕ್ಲಾಸ್, ಕ್ಯಾರಲ್ ಸಂಗೀತ, ದಫ್ ಜತೆಗೆ ಪುಟಾಣಿ ಹುಲಿವೇಷಧಾರಿಗಳ ಕುಣಿತ ಮೊದಲಾದ ವಿವಿಧ ತಂಡಗಳ ಆಕರ್ಷಕ ಮೆರವಣಿಗೆ ಕರಾವಳಿ ಉತ್ಸವ ವೇದಿಕೆಯುದ್ದಕ್ಕೂ ನಗರದ ರಾಜಬೀದಿಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಮೆರೆದವು.
ಡೊಳ್ಳು ಕುಣಿತ, ಹುಲಿವೇಷ, ಕಂಗೀಲು ಕುಣಿತ, ನಾದಸ್ವರ, ಬ್ಯಾಂಡ್, ಎನ್ಸೆಸ್ಸೆಸ್ ತಂಡ, ಜಾನಪದ ಕುಣಿತ, ಆಟಿಕೆ ಳಂಜ, ಕಲ್ಲಡ್ಕ ಬೊಂಬೆ ಬಳಗ, ವಿವಿಧ ಕಾಲೆಜುಗಳ ಸ್ಕೌಟ್ಸ್ ಗೈಡ್ಸ್ ದಳ, ಕೊಂಬು, ಕಲಶ ಹೊತ್ತ ಮಹಿಳೆಯರು, ಯಕ್ಷಗಾನ ತಂಡ, ಮಹಿಳೆ-ಪುರುಷರ ಚೆಂಡೆ ಬಳಗ, ಸಿದ್ದಿಗಳ ನೃತ್ಯ, ಯಕ್ಷಗಾನದ ತಟ್ಟೀರಾಯ, ಎನ್‌ಸಿಸಿ ತಂಡ, ಕುಡುಬಿ ಗುಂಮ್ಟೋ ತಂಡ, ಸರಕಾರದ ಗ್ಯಾರೆಂಟಿ ಯೋಜನೆ ಮಾಹಿತಿ ಸಹಿತ ವಿವಿಧ ಅಕಾಡೆಮಿ, ಸಂಸ್ಥೆ, ಶಾಲಾ-ಕಾಲೇಜುಗಳ ತಂಡ ಭಾಗವಹಿಸಿದ್ದವು. ಮೆರವಣಿಗೆಯು ಕೆ.ಎಸ್. ರಾವ್ ರಸ್ತೆಯಿಂದ ಆರಂಭಗೊಂಡು ರಾಷ್ಟ್ರಕವಿ ಗೊವಿಂದ ಪೈ ವೃತ್ತ, ಪಿವಿಎಸ್ ಜಂಕ್ಷನ್, ಬೆಸೆಂಟ್ ಜಂಕ್ಷನ್, ಬಳ್ಳಾಲ್‌ಬಾಗ್, ಲಾಲ್‌ಬಾಗ್ ಮಾರ್ಗವಾಗಿ ಕರಾವಳಿ ಉತ್ಸವ ಮೈದಾನದಲ್ಲಿ ಸಮಾಪನಗೊಂಡಿತು.
ಮೆರವಣಿಗೆ ಉದ್ಘಾಟನೆಯ ಸಂದರ್ಭ ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಕರಾವಳಿಯ ಸಾಂಸ್ಕೃತಿಕ, ಜಾನಪದ ಸೊಗಡು ಆಸ್ವಾಧಿಸಲು ಕರಾವಳಿ ಉತ್ಸವ ಮುಖ್ಯ ವೇದಿಕೆಯಾಗಿದೆ ಎಂದರು.
ಪದ್ಮಶ್ರೀ ಪುರಸ್ಕೃತ ಹಾಜಬ್ಬ ಆಕರ್ಷಣೆ
ಕರಾವಳಿ ಉತ್ಸವ ಉದ್ಘಾಟನಾ ವೇದಿಕೆಯಲ್ಲಿ ಸರಳ ಸಜ್ಜನಿಕೆಯ, ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ವಿಶೇಷ ಆಕರ್ಷಣೆಯಾಗಿದ್ದರು. ಕರಾವಳಿ ಉತ್ಸವದ ಪ್ರಯುಕ್ತ ಆಯೋಜಿಸಲಾಗಿರುವ ಹೆಲಿಕಾಪ್ಟರ್ ಪ್ರಯಾಣದ ಉದ್ಘಾಟನೆಯಲ್ಲೂ ಹರೇಕಳ ಹಾಜಬ್ಬ ಭಾಗವಹಿಸಿದ್ದರು.
ಕರಾವಳಿ ಉತ್ಸವ ಮೈದಾನದಲ್ಲಿ ಗ್ಲೋಬಲ್ ವಿಲೆಜ್!
ದ.ಕ.ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ ಆಯೋಜಿಸಲಾಗಿರುವ ಈ ಬಾರಿಯ ಕರಾವಳಿ ಉತ್ಸವದ ವಸ್ತು ಪ್ರದರ್ಶನವು ಜಾಗತಿಕ ಹಳ್ಳಿ (ಗ್ಲೋಬಲ್ ವಿಲೆಜ್) ಎಂಬ ಪರಿಕಲ್ಪನೆಯಲ್ಲಿ ನಡೆಯುತ್ತಿದೆ. ಸರಕಾರದ ವಿವಿಧ ಇಲಾಖೆಗಳಿಂದ ಕರಾವಳಿಯ ಸಂಸ್ಕೃತಿ, ಸಂಪ್ರದಾಯವನ್ನು ಪರಿಚಯಿಸುವ ಪ್ರಯತ್ನ ಮಾಡಲಾಗಿದೆ.
ಕರಾವಳಿ ಉತ್ಸವ ಮೈದಾನ ಹಳ್ಳಿ ಸೊಗಡನ್ನು ಪಡೆದುಕೊಂಡಿದ್ದು, ಇಲ್ಲಿ ಬುಡಕಟ್ಟು ಸಂಸ್ಕೃತಿ ಮತ್ತು ವಸ್ತು ಪ್ರದರ್ಶನ ಮಳಿಗೆಯಲ್ಲಿ ಇಲ್ಲಿ ವಿವಿಧ ರೀತಿಯ ಉತ್ಪನ್ನಗಳು ಸಿದ್ಧಗೊಳ್ಳುತ್ತಿವೆ. ಬುಟ್ಟಿ, ಚಾಪೆ ಎಣೆಯುವುದನ್ನು ನೇರವಾಗಿ ಕಾಣುವ ಅವಕಾಸ ಕಲ್ಪಿಸಲಾಗಿದೆ. ಮಾತ್ರವಲ್ಲದೆ, ತುಳುನಾಡಿನಲ್ಲಿ ಪಾರಂಪರಿಕವಾಗಿ ಬಳಸುತ್ತಿದ್ದ ವಸ್ತುಗಳು, ಸಾಧನಗಳನ್ನು ಪರಿಚಯಿಸಲಾಗಿದೆ. ಮರಾಯಿ, ಚಕ್ಕುಲಿ ಪರಸೆ, ಸಾಂಬಾರ್ ಮರಾಯಿ, ಓಡ ಮರಾಯಿ, ಚಣ್ಣೆ ಮಣೆಕೊದಂಟಿ, ತಟ್ಟಿ ಕುಡುಪು ಹೀಗೆ ತುಳುನಾಡಿನಲ್ಲಿ ಹಿಂದಿನ ಕಾಲದಲ್ಲಿ ಉಪಯೋಗಿಸುತ್ತಿದ್ದ ನಾನಾ ರೀತಿಯ ವಸ್ತುಗಳು ಈ ಮಳಿಗೆಯಲ್ಲಿದೆ.
ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮಳಿಗೆಯಲ್ಲಿ ರಾಜಸ್ಥಾನದ ಕೋಟ ಜಿಲ್ಲೆಯ ಕೋಟ (ಕರೋಲಿ) ಕುರಿ ಗಮನ ಸೆಳೆಯುತ್ತಿದೆ. 60ರಿಂದ 85 ಕೆಜಿಯಷ್ಟು ತೂಕವಿರುವ ಈ ಕೋಟ ಕುರಿ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಅಲ್ಲದೆ ಅತೀ ಗಿಡ್ಡ ಗೋ ತಳಿ ಎಂದೇ ಖ್ಯಾತಿ ಪಡೆದ ಪುಂಗನೂರು ಗೋ ತಳಿಯೂ ಇಲ್ಲಿದ್ದು ಆಕರ್ಷಣೆ ಪಡೆದುಕೊಂಡಿದೆ.
ಹಲವು ಪ್ರಾಣಿ ಪಕ್ಷಿಗಳ ಜತೆಗೆ ಸುಳ್ಯ ಪಶು ಆಸ್ಪತ್ರೆಯ ಪ್ರಯೋಗಾಲಯದ ಪ್ರಾಣಿಗಳ ಸಂರಕ್ಷಿತ ಕಳೆಬರಹ ಪ್ರದರ್ಶನ ಲ್ಲಿವೆ. ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ ಮಳಿಗೆ, ತೋಟಗಾರಿಕೆ, ಕೃಷಿ, ಆಯುಷ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳೂ ಪ್ರದರ್ಶನದಲ್ಲಿದ್ದು, ಜಲ ಜೀವನ್ ಮಿಶನ್‌ನ ಮನೆ ಮನೆಗೆ ಗಂಗೆ ಪ್ರದರ್ಶನವೂ ಗಮನ ಸೆಳೆಯುತ್ತಿದೆ. ಅಮ್ಯೂಸ್‌ಮೆಂಟ್‌ಪಾರ್ಕ್ ಜತೆಗೆ, ಕರಾವಳಿಯ ವೈವಿಧ್ಯ ಮಯ ಖಾದ್ಯಗಳ ತಯಾರಿಕೆ, ಪ್ರದರ್ಶನ ಮತ್ತು ಮಾರಾಟಗಳನ್ನು ಒಂದೇ ಸೂರಿನಡಿ ಏರ್ಪಡಿಸಲಾಗಿದ್ದು, ತುಳು ನಾಡಿನ ತಿಂಡಿ ತಿನಿಸುಗಳನ್ನು ಮಳಿಗೆಗಳೂ ಇಲ್ಲಿವೆ.