ಉಪ್ಪಿನಂಗಡಿ: ಬಾಲಕಿಯರ ವಿದ್ಯಾರ್ಥಿನಿಲಯದ ನೂತನ ಕಟ್ಟಡ ಉದ್ಘಾಟನೆ

Update: 2024-12-21 14:23 GMT

ಉಪ್ಪಿನಂಗಡಿ: ರಾಜ್ಯ ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಯ ವತಿಯಿಂದ ಉಪ್ಪಿನಂಗಡಿಯಲ್ಲಿ 5 ಕೋಟಿ ರೂ. ವೆಚ್ಚ ದಲ್ಲಿ ನಿರ್ಮಿಸಲಾದ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಉದ್ಘಾಟಿಸಿ , ಉದ್ಘಾಟನಾ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ನಿರ್ಗಮಿಸಿದ  ಘಟನೆ ಶನಿವಾರ ಉಪ್ಪಿನಂಗಡಿಯಲ್ಲಿ ನಡೆದಿದೆ.

ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ 100 ಮಂದಿ ಸಾಮರ್ಥ್ಯದ ಬಾಲಕಿಯರ ವಿದ್ಯಾರ್ಥಿ ನಿಲಯವನ್ನು 5 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, 18 ತಿಂಗಳ ಕಾಲವಕಾಶದಲ್ಲಿ ಮೂರು ಮಹಡಿಯ ಸುಸಜ್ಜಿತ ವಿದ್ಯಾರ್ಥಿ ನಿಲಯವನ್ನು ನಿರ್ಮಿಸಿ ಲೋಕಾರ್ಪಣೆಗೊಳಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವರ ಸಮಯಾನುಕೂಲತೆಯನ್ನು ಗಮನಿಸಿ ಶನಿವಾರದಂದು ದಿನಾಂಕ ನಿಗದಿಪಡಿಸಲಾಗಿತ್ತು. ಅಂತೆಯೇ ಶನಿವಾರದಂದು ಸಾಯಂಕಾಲ 3.30ರ ವೇಳೆಗೆ ಸಚಿವರು ಧಾವಿಸಿ ಬಂದವರೇ ರಿಬ್ಬನ್ ಕತ್ತರಿಸಿ , ಕಾರ್ಯಕರ್ತರೊಂದಿಗೆ ಭಾವಚಿತ್ರ ತೆಗೆದು ನಿರ್ಗಮಿಸಿದರು. 

ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು 

ಪುತ್ತೂರು ಶಾಸಕರು ಹಿಂದುಳಿದ ವರ್ಗಗಳ ಜಿಲ್ಲಾಸ್ತರದ ಕಲ್ಯಾಣಾಧಿಕಾರಿ ಬಿಂದಿಯಾ ನಾಯಕ್ ರನ್ನು ತರಾಟೆಗೆ ತೆಗೆದು ಕೊಂಡರು. ತನ್ನ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯೊಳಗಿನ ಯಾವುದೇ ಸರಕಾರಿ ಕಟ್ಟಡದ ಉದ್ಘಾಟನೆಗೆ ಸಚಿವರ ಸಮಯಾನುಕೂಲತೆಯನ್ನು ಖಚಿತಪಡಿಸಿದರೂ ಅದನ್ನು ನನ್ನ ಗಮನಕ್ಕೆ ಮೊದಲಾಗಿ ತರಬೇಕು. ಶಾಸಕನಾದ ನನಗೂ ಮಾಹಿತಿ ನೀಡದೆ, ಮಾಧ್ಯಮಕ್ಕೂ ಮಾಹಿತಿ ನೀಡದೆ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಈ ಸುಸಜ್ಜಿತ ಕಟ್ಟಡವನ್ನು ಗುಟ್ಟಾಗಿ ಲೋಕಾರ್ಪಣೆ ಮಾಡುವ ಅಗತ್ಯತೆ ಏನಿದೆ. ಊರಿನ ಮಂದಿಯನ್ನು ಕರೆದು ಸರಕಾರದ ಸಾಧನೆಯನ್ನು ತಿಳೀಸುವುದಕ್ಕೆ ನಿರ್ಲಕ್ಷ್ಯ ಯಾಕೆ ? ಎಂದೆಲ್ಲಾ ತರಾಟೆಗೆ ತೆಗೆದುಕೊಂಡು ಈ ಕಟ್ಟಡವನ್ನು ಮುಂದಿನ 15 ದಿನಗಳ ಒಳಗಾಗಿ ವ್ಯವಸ್ಥಿತ ವಾದ ರೀತಿಯಲ್ಲಿ ಉದ್ಘಾಟನೆಗೆ ಕ್ರಮ ಕೈಗೊಳ್ಳಬೇಕೆಂದು ನಿರ್ದೇಶನವಿತ್ತರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News