ಗಾಂಧಿ ತತ್ವಗಳ ಅಳವಡಿಕೆಯಿಂದ ಬದುಕು ಅರ್ಥಪೂರ್ಣಮ : ಪ್ರೊ. ಕೆ.ಇ ರಾಧಾಕೃಷ್ಣ

Update: 2024-10-02 14:11 GMT

ಮಂಗಳೂರು: ಗಾಂಧೀಜಿಯ ತತ್ವಗಳಾದ ಸರ್ವೋದಯ, ಸ್ವರಾಜ್ಯ, ಸ್ವದೇಶಿ, ಸ್ವಚ್ಛತೆ , ಸ್ವಾವಲಂಭನೆ ಮತ್ತು ಸ್ವಾಭಿಮಾನ ಇವನ್ನು ಅರಿತು ನಡೆಯುವುದರಿಂದ ನಮ್ಮ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಶಿಕ್ಷಣ ತಜ್ಞ ಮತ್ತು ಚಿಂತಕ ಪ್ರೊ. ಕೆ.ಇ ರಾಧಾಕೃಷ್ಣ ಹೇಳಿದ್ದಾರೆ.

ನಗರದ ಟಾಗೋರ್ ಪಾರ್ಕ್‌ನಲ್ಲಿ ಬುಧವಾರ ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವತಿಯಿಂದ ನಡೆದ ಗಾಂಧಿ ಜಯಂತಿ ಆಚರಣೆ ಮತ್ತು ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ‘ವರ್ಷದ ವ್ಯಕ್ತಿ ಗೌರವ 2024’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡಿದರು.

ಗಾಂಧಿ ತತ್ವಗಳು ಎಂದಾದರೂ ಅಪ್ರಸ್ತುತವಾಗಿಬಿಟ್ಟರೆ ನಮ್ಮ ಬದುಕು ಗಂಡಾಂತರಕ್ಕೆ ಸಿಲುಕಬಹುದು , ನಮಗೆ ರಕ್ಷಣೆಯೇ ಇಲ್ಲದಾಗಬಹುದು ಎಂದು ಎಚ್ಚರಿಸಿದರು.

ನಿಮ್ಮಲ್ಲಿರುವ ಸಂಪತ್ತು ಒಂದು ನಿಧಿಯೆಂದು ಭಾವಿಸಿ ಅದನ್ನು ದುರುಪಯೋಗ ಅಥವಾ ಅಡಂಬರಕ್ಕಾಗಿ ಬಳಸದೆ ಅದನ್ನು ಯಾರಿಗೆ ಉಪಯೋಗ ಇದೆ ಅವರಿಗೆ ಹಂಚಬೇಕು. ಮೊಬೈಲ್‌ನಲ್ಲಿ ಆನೇಕ ಆ್ಯಪ್‌ಗಗಳಿವೆ ಆದರೆ ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರಿ? ಎಂಬುವುದು ಬಹಳ ಅಗತ್ಯವಾಗಿದೆ. ಆಯ್ಕೆಯ ಬಗ್ಗೆಯೇ ತಿಳಿಸುವುದೇ ಗಾಂಧಿ ತತ್ವ ಎಂದರು.

ಗಾಂಧೀಜಿಯ ಪ್ರಭಾವ ದೇಶದಲ್ಲಿ ಮಾತ್ರವಲ್ಲ, ಹೊರದೇಶದಲ್ಲಿಯೂ ಇದೆ. ಈಗಲೂ ಬೇರೆ ದೇಶಗಳಿಗೆ ಹೋದಾಗ ಅಲ್ಲಿ ಗಾಂಧಿ, ಬುದ್ಧನ ಹೆಸರು ಉಲ್ಲೇಖಿಸಿ ನಮ್ಮನ್ನು ಬರಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು.

ಆಧುನಿಕ ಜಗತ್ತಿನ ವೇಗದ ಯುಗದಲ್ಲಿ ಎಲ್ಲವೂ ತತ್‌ಕ್ಷಣವೇ ಸಿಗಬೇಕು ಎಂಬ ಧಾವಂತದಲ್ಲಿ ನಮ್ಮ ಜೀವನವಿದೆ. ಜತೆಗೆ ವಿವಿಧ ಪ್ರಕಾರದಲ್ಲಿ ವಿಕಸಿತಗೊಳ್ಳುತ್ತಿದ್ದೇವೆ. ಇಂತಹ ಕಾಲದಲ್ಲಿ ಗಾಂಧೀಜಿಯವರು ನೀಡಿದ ಸಂದೇಶವೇ ಎಲ್ಲ ಸಮಸ್ಯೆಗಳಿಗೂ ಪರಿಹಾರವಾಗಿದೆ ಎಂದವರು ನುಡಿದರು.

ಹಿರಿಯರಲ್ಲಿ ನೈತಿಕ ಶಕ್ತಿ ಇರುತ್ತದೆ. ಆದರೆ ಯುವರಲ್ಲಿ ಇಂತಹ ಶಕ್ತಿ ಇರುವುದಿಲ್ಲ ಎಂದ ಅವರು ವಿದ್ಯಾರ್ಥಿಗಳು ಅಕ್ಕಪಕ್ಕದವರ ಜಾತಿಮತ, ಧರ್ಮದ ಬಗ್ಗೆ ಕೇಳಬೇಡಿ. ಆಹಾರ ಪದ್ಧತಿಯ ಬಗ್ಗೆ ಹೀಯಾಳಿಸಬೇಡಿ ಎಂದು ಕಿವಿ ಮಾತು ನುಡಿದರು.

ಕಲ್ಲೂರು ಶ್ರೇಯಾ ಅವರು ಗಾಂಧೀಜಿಯವರ ಅತ್ಯಂತ ಪ್ರಿಯವಾದ ‘ವೈಷ್ಣವ ಜನತೋ ... ’ ಹಾಡನ್ನು ಹಾಡಿದರು.

ಮಾನವೀಯ ಸೇವೆಯ ಕಾಯಕ ಜೀವಿ ಇಸ್ಮಾಯೀಲ್ ಕಣಂದೂರು ಅವರಿಗೆ ಮಹಾತ್ಮ ಗಾಂಧಿ ಪ್ರತಿಷ್ಠಾನದ ವರ್ಷದ ವ್ಯಕ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಷ್ಟ್ರ ಮಟ್ಟದ ಪ್ರಶಸ್ತಿಗೆ ಭಾಜನರಾದ ಕಲ್ಲೂರು ನಾಗೇಶ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಷಾ ಸನ್ಮಾನ ಪತ್ರ ವಾಚಿಸಿದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಎ.ಸದಾನಂದ ಶೆಟ್ಟಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರಭಾಕರ ಶ್ರೀಯಾನ್ ಮತ್ತು ಇಬ್ರಾಹೀಂ ಕೋಡಿಜಾಲ್ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯದರ್ಶಿ ಡಾ.ಇಸ್ಮಾಯೀಲ್ ಎನ್ ಸ್ವಾಗತಿಸಿದರು, ಕೋಶಾಧಿಕಾರಿ ಪ್ರೇಮ್ ಚಂದ್ ವಂದಿಸಿದರು, ಕಲ್ಲೂರು ನಾಗೇಶ ಕಾರ್ಯಕ್ರಮ ನಿರೂಪಿಸಿದರು.

‘‘ ಮಹಾತ್ಮ ಗಾಂಧಿ ಅವರ ಟೋಪಿಯು ಯುವಕರನ್ನು, ಮಹಿಳೆಯರನ್ನು, ರೈತರನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸೆಳೆಯುವಲ್ಲಿ ಬಹುಮುಖ್ಯ ಪಾತ್ರ ನಿರ್ವಹಿಸಿತ್ತು. ಗಾಂಧಿ ಟೋಪಿ ಸಮಾನತೆಯ, ಸರ್ವಧರ್ಮ ಸಮಭಾವದ ಸಂಕೇತವಾಗಿದೆ.

-ಶಿಕ್ಷಣ ತಜ್ಞ ಮತ್ತು ಚಿಂತಕ ಪ್ರೊಕೆ. ಇ.ರಾಧಾಕೃಷ್ಣ 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News