ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿ ದ.ಕ. ಜಿಲ್ಲೆಗೆ ರಾಜ್ಯದಲ್ಲಿ ಅಗ್ರಸ್ಥಾನ: ಭರತ್ ಮುಂಡೋಡಿ

* ಗ್ಯಾರಂಟಿ ಯೋಜನೆಯಡಿ ಜಿಲ್ಲೆಗೆ ರೂ.1464.22 ಕೋ.ರೂ. ಅನುದಾನ, 'ಗೃಹ ಜ್ಯೋತಿ'ಯಲ್ಲಿ ಶೇ.98 ಪ್ರಗತಿ

Update: 2024-12-21 10:26 GMT

ಮಂಗಳೂರು, ಡಿ.21: ಗ್ಯಾರಂಟಿ ಯೋಜನೆಯ ಅನುಷ್ಠಾನದ ಬಳಿಕ ಕರ್ನಾಟಕ ರಾಜ್ಯ ಜಿಡಿಪಿ ಸೂಚ್ಯಂಕದ ಪ್ರಕಾರ ದೇಶದಲ್ಲಿ ಪ್ರಥಮ ಸ್ಥಾನದಲ್ಲಿದೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಆರು ತಿಂಗಳು ಕಳೆಯುವುದರೊಳಗೆ ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ರಾಜ್ಯಕ್ಕೆ ಅಗ್ರಸ್ಥಾನದಲ್ಲಿದೆ ಎಂದು ದಕ್ಷಿಣ ಕನ್ನಡ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಭರತ್ ಮುಂಡೋಡಿ ತಿಳಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶನಿವಾರ ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡ ಮಾಧ್ಯಮ ಸಂವಾದ ಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಅವರು ವಿವರಣೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸುವ ಅವಕಾಶವನ್ನು ನನಗೆ ನೀಡಿದ ಬಳಿಕ ತಾಲೂಕು ಸಮಿತಿಗಳನ್ನು ರಚನೆ ಮಾಡಿ ಕಚೇರಿಗಳನ್ನು ಆರಂಭಿಸಿದೆ. ಬಳಿಕ ಯೋಜನೆಯನ್ನು ಹೆಚ್ಚು ಪರಿಣಾಮಕಾರಿ ಅನುಷ್ಠಾನ ಮಾಡಲು ಸಾಧ್ಯವಾಗಿದೆ. ಗೃಹಜ್ಯೋತಿ ಯೋಜನೆಯಲ್ಲಿ ದ.ಕ. ಜಿಲ್ಲೆ ಶೇ.98 ಪ್ರಗತಿ ಸಾಧಿಸಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಈ ಯೋಜನೆಯ ಮೂಲಕ 5.51 ಲಕ್ಷ ಫಲಾನುಭವಿಗಳಿಗೆ 2023-24ನೇ ಸಾಲಿನಲ್ಲಿ ರೂ. 276.87 ಕೋಟಿ ಹಾಗೂ 2024ರ ನವೆಂಬರ್ ವರೆಗೆ 282.3 ಕೋಟಿ ರೂ. ಮೊತ್ತದ ಉಚಿತ ವಿದ್ಯುತ್ ನೀಡಲಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 3,72,300 ಮಹಿಳೆಯರು ರೂ.943.41 ಕೋಟಿ ರೂ. ಆರ್ಥಿಕ ಸಹಾಯ ಪಡೆದಿರುತ್ತಾರೆ. ಶಕ್ತಿ ಯೋಜನೆಯಲ್ಲಿ 6.79 ಕೋಟಿ ಮಹಿಳೆಯರು ಪ್ರಯಾಣ ಮಾಡಿ 219.86 ಕೋಟಿ ಆರ್ಥಿಕ ನೆರವು ಪಡೆದಿರುತ್ತಾರೆ. ಯುವನಿಧಿ ಯೋಜನೆಯಡಿ 4,240 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, 3,643 ಫಲಾನುಭವಿಗಳು ರೂ.3,87,94,500 ನಿರುದ್ಯೋಗ ಭತ್ತೆ (ಅಕ್ಟೋಬರ್ 2024 ರವರೆಗೆ) ಪಡೆದಿರುತ್ತಾರೆ. ಅನ್ನಭಾಗ್ಯ ಯೋಜನೆಯಡಿಯಲ್ಲಿ 2,59,730 ಪಡಿತರ ಚೀಟಿ ಹೊಂದಿದವರ ಖಾತೆಗೆ 5.61 ಲಕ್ಷ ಅರ್ಹ ಫಲಾನುಭವಿಗಳಿದ್ದು, 282.03 ಕೋಟಿ ರೂ. ವರ್ಗಾವಣೆ ಸೇರಿ ದಕ್ಷಿಣ ಕನ್ನಡ ಜಿಲ್ಲೆಗೆ 1464 ಕೋಟಿ 21 ಲಕ್ಷದ 94,500 ರೂ. ಬಂದಿದೆ.

ನಮ್ಮ ರಾಜ್ಯದ ಬಜೆಟ್ ಗಾತ್ರ 3 ಲಕ್ಷದ 78 ಸಾವಿರ ಕೋಟಿ ರೂ. ಆದರೆ ವಾರ್ಷಿಕ 56,000 ಕೋಟಿ ರೂ.ವನ್ನು ನಮ್ಮ ಪಂಚ ಗ್ಯಾರಂಟಿ ಯೋಜನೆಗಳಿಗೆ ವ್ಯಯ ಮಾಡಬೇಕಿದೆ. ರಾಜ್ಯದ ಜನತೆಗೆ ನೀಡಿರುವ ಉಚಿತ ವಿದ್ಯುತ್ ಬಿಲ್ ಯೋಜನೆ, ವಿದ್ಯಾವಂತ ನಿರುದ್ಯೋಗಿ ಭತ್ತೆ, ಶಕ್ತಿ ಹೆಸರಿನಲ್ಲಿ ಮಹಿಳೆಯರಿಗೆ ಉಚಿತ ಬಸ್ ಸೇವೆ ಯೋಜನೆ, ಅನ್ನ ಭಾಗ್ಯ ಯೋಜನೆಯಲ್ಲಿ 5 ಕೆಜಿ ಇದ್ದ ಅಕ್ಕಿಯನ್ನು 10 ಕೆಜಿಗೆ ಏರಿಕೆ, ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡುವ ಗೃಹಲಕ್ಷ್ಮಿ ಯೋಜನೆ ಇದೆಲ್ಲ ನಮ್ಮ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ ಎಂದು ಭರತ್ ಮುಂಡೋಡಿ ವಿವರಿಸಿದರು.

ಸರಕಾರದಲ್ಲಿ ಹಣವಿಲ್ಲ ಅಭಿವೃದ್ಧಿ ಕಾರ್ಯ ನಿಂತಿದೆ ಎಂದು ಬಿಜೆಪಿ ಸಹಿತ ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ, ರಾಜ್ಯ ಬಜೆಟ್ ನಲ್ಲಿ ರೂ3,32,000 ಕೋಟಿ ಇತರ ಯೋಜನೆಗಳಿಗೆ ಇರಿಸಲಾಗಿದೆ. ಪ್ರತಿ ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗೆ ರೂ.10 ಕೋಟಿ ನೀಡುವ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಜಿಡಿಪಿಯಲ್ಲಿ ನಮ್ಮ ರಾಜ್ಯ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ನಮ್ಮ ಯೋಜನೆಗಳಲ್ಲಿ ಮಧ್ಯವರ್ತಿಗಳಿಲ್ಲದೆ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ಹಣ ಜಮೆ ಆಗುತ್ತಿದೆ. ಈ ಯೋಜನೆಗಳಿಂದ ಯಾರೂ ದಿವಾಳಿಯಾಗುವುದಿಲ್ಲ, ಬದಲಾಗಿ ಜನರ ಕೊಳ್ಳುವ ಸಾಮರ್ಥ್ಯ ಹೆಚ್ಚಾಗಿದೆ. ಜನರ ಕೈಗೆ ಹಣ ಹೋಗಿದೆ. ಅತ್ತೆ ಸೊಸೆ ಇಬ್ಬರು ಸೇರಿ ಕುಟುಂಬದ ಅಭಿವೃದ್ಧಿ ಮಾಡಲು ಸಾಧ್ಯವಾಗಿದೆ ಎನ್ನುವುದಕ್ಕೆ ರಾಜ್ಯದಲ್ಲಿ ಉದಾಹರಣೆ ಇದೆ ಎಂದರು.

ಕರಾವಳಿ ಉತ್ಸವದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಯ ಅನುಷ್ಠಾನಕ್ಕೆ ಪೂರಕವಾಗಿ ಮಂಗಳೂರಿನಲ್ಲಿ ಮಳಿಗೆ ಆರಂಭಿಸ ಲಾಗುವುದು ಎಂದು ಅವರು ಹೇಳಿದರು.

ನಬಾರ್ಡ್ ಮೂಲಕ ಅಪೆಕ್ಸ್ ಬ್ಯಾಂಕ್ ಗಳಿಗೆ ಶೇ.50 ಅನುದಾನ ಕಡಿತ ಮಾಡಿರುವುದರಿಂದ ರೈತರಿಗೆ ಬರಬೇಕಾದ ಸಾಲದಲ್ಲಿ ಕಡಿತವಾಗುತ್ತಿದೆ. ಆದಾಯ ತೆರಿಗೆ ಇಲಾಖೆಯ ಕೆಲವು ತಾಂತ್ರಿಕ ಕಾರಣಗಳಿಂದ ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ತೊಂದರೆ ಯಾಗಿದೆ ಇದನ್ನು ಸರಿಪಡಿಸಬೇಕಾಗಿದೆ.

"ದಕ್ಷಿಣ ಕನ್ನಡದ ಪತ್ರಕರ್ತರ ಸಂಘಗ್ರಾಮ ವಾಸ್ತವ್ಯದ ಮೂಲಕ ಗ್ರಾಮದ ಜನರಿಗೆ ನೆರವಾಗುವ ಶ್ಲಾಘನೀಯ ಕಾರ್ಯ ಮಾಡುತ್ತಿದೆ. ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಿರೀಕ್ಷೆಗೂ ಮೀರಿ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದೆ. ಮಡಪ್ಪಾಡಿಯಲ್ಲಿ ನಡೆದಿದ್ದ ಗ್ರಾಮ ವಾಸ್ತವ್ಯದಿಂದ ಊರಿಗೆ ಸುಸಜ್ಜಿತ ರಸ್ತೆ ಸಹಿತ ಅನೇಕ ಯೋಜನೆಗಳು ಜಾರಿಯಾಗಿವೆ. ಇದಕ್ಕಾಗಿ ಅಭಿನಂದನೆಗಳು" ಎಂದರು.

ವೇದಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ಸ್ವಾಗತಿಸಿದರು.

ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ, ದಕ್ಷಿಣ ಕನ್ನಡ ಕಾರ್ಯ ನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ ಉಪಸ್ಥಿ ತರಿದ್ದರು.

ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ವಂದಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News