ದ.ಕ. ಜಿಲ್ಲೆಯಲ್ಲಿ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ

Update: 2024-10-06 16:33 GMT

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಸಂಜೆ ಹೊತ್ತಿಗೆ ಭಾರೀ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆ ಸುರಿದಿದೆ.

ಮಂಗಳೂರು ನಗರದಲ್ಲಿ ಸಿಡಿಲಿನ ಅಬ್ಬರ ಜೋರಾಗಿತ್ತು. ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಆದರೆ ಸಂಜೆ ಹೊತ್ತಿಗೆ ಭಾರೀ ಮಳೆ ಸುರಿದಿದೆ.

ಬಂಟ್ವಾಳ ತಾಲೂಕಿನ ಅಳಿಕೆಯ ಎರುಂಬುವಿನಲ್ಲಿ ಕೊರಗ ಮೂಲ್ಯ ಎಂಬವರ ಮನೆಗೆ ಸಿಡಿಲು ಬಡಿದಿದೆ. ಇದರಿಂದಾಗಿ ಮನೆಗೆ ಹಾನಿಯಾಗಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿದೆ.

ಕೆಲವು ಕಡೆಗಳಲ್ಲಿ ಗಾಳಿಯೊಂದಿಗೆ ಮಳೆಯಾಗಿರುವುದು ವರದಿಯಾಗಿದೆ. ಮಳೆಯೊಂದಿಗೆ ಭಾರೀ ಗಾಳಿಗೆ ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಮಾರುತಿನಗರ ಎಂಬಲ್ಲಿ ಮನೆಯೊಂದಕ್ಕೆ ತೆಂಗಿನ ಮರ ಬಿದ್ದಿದೆ.

ಮಾರುತಿನಗರ ಆಶಾ ಎಂಬವರ ಹೆಂಚಿನ ಮನೆಯ ಮೇಲೆ ತೆಂಗಿನ ಮರ ಬಿದ್ದು ಮನೆಗೆ ತೀವ್ರ ಹಾನಿಯಾಗಿದೆ. ಆದರೆ ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

ಶನಿವಾರ ಸಂಜೆ ವೇಳೆ ಅಲ್ಲಲ್ಲಿ ತುಂತುರು ಮಳೆ ಕಾಣಿಸಿಕೊಂಡಿತ್ತು. ಕೆಲವು ದಿನಗಳಿಂದ ಮಳೆ ಕಾಣೆಯಾಗಿತ್ತು. ಇಂದು ಬೆಳಗ್ಗೆ 8:30ರ ತನಕ 12.06 ಮಿ.ಮಿ ಮಳೆಯಾಗಿತ್ತು. ಇನ್ನೆರಡು ದಿನಗಳ ಕಾಲ ಮಳೆ ಮುಂದುವರಿಯಬಹುದೆಂದು ಹವಾಮಾನ ಇಲಾಖೆಯ ಮೂಲ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News