ಆಳ್ವಾಸ್ ನಲ್ಲಿ ವೇಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರ ಉದ್ಘಾಟನೆ

Update: 2024-10-15 13:18 GMT

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ(ರಿ)ದ ವತಿಯಿಂದ ವಿದ್ಯಾಗಿರಿಯ ಶ್ರೀಮತಿ ಮೋಹಿನಿ ಅಪ್ಪಾಜಿ ನಾಯಕ್ ಸಭಾಂಗಣದಲ್ಲಿ ನಿರ್ಮಾಣಗೊಂಡಿರುವ ಕೀರ್ತಿಶೇಷ ಲೋಕನಾಥ ಬೋಳಾರ್ ವೆಯ್ಟ್ ಲಿಫ್ಟಿಂಗ್ ತರಬೇತಿ ಕೇಂದ್ರವು ಸೋಮವಾರ ಉದ್ಘಾಟನೆಗೊಂಡಿತು.

ಕೇಂದ್ರವನ್ನು ಅರ್ಜುನ ಪ್ರಶಸ್ತಿ ಪುರಸ್ಕೃತ ಒಲಂಪಿಯನ್ ಸತೀಶ್ ರೈ ಅವರು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಜೀವನದಲ್ಲಿ ನಿರ್ದಿಷ್ಟ ಗುರಿ ಮತ್ತು ಸ್ಪಷ್ಟತೆ ಇರಲಿ. ಭವಿಷ್ಯದ ಗುರಿಯನ್ನು ಈಡೇರಿಸಲು ಇಂದೇ ಶ್ರಮವಹಿಸಿ ಹೆಜ್ಜೆ ಇಡಬೇಕು. ಪ್ರತಿ ಕ್ರೀಡಾಪಟುವಿನಲ್ಲೂ ಶಿಸ್ತು, ಸಂಯಮ, ಸಮಯಪಾಲನೆ ಅತ್ಯವಶ್ಯಕ. ಕ್ರೀಡಾ ಮನೋಭಾವ ದಿಂದ ಕ್ರೀಡೆ, ಸಂಸ್ಥೆ ಹಾಗೂ ದೇಶಕ್ಕೂ ಹೆಮ್ಮೆಯ ವಿದ್ಯಾರ್ಥಿಗಳಾಬೇಕು ಎಂದು ನುಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರತಿಯೊಬ್ಬರಲ್ಲೂ ಇಚ್ಛಾ ಶಕ್ತಿ ಇದ್ದೆ ಇರುತ್ತದೆ. ಅದನ್ನು ಸರಿಯಾದ ರೀತಿಯಲ್ಲಿ ವಿನಿಯೋಗಿಸಿಕೊಂಡರೆ ಉತ್ತಮ ಪ್ರಜೆಗಳಾಗಲು ಸಾಧ್ಯ ಎಂದು ನುಡಿದರು.

ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಉಪಸ್ಥಿತರಿದ್ದು ಮಾತನಾಡಿದರು. ಲೋಕನಾಥ ಬೋಳಾರ್ ಅವರ ಪತ್ನಿ ಡಾ. ದೇವಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ ಎಸ್. ರಮಾನಂದ ಶೆಟ್ಟಿ, ಉದ್ಯಮಿ ಕಿಶೋರ್ ಶೆಟ್ಟಿ, ವೇಯ್ಟ್ ಲಿಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಆಲ್ವಿನ್ ಪಿಂಟೊ, ಯುವಜನ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ಪ್ರದೀಪ್ ಡಿ ಸೋಜಾ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News