ಉಳ್ಳಾಲದಲ್ಲಿ ಸೀರತ್ ಸಮಾವೇಶ

Update: 2024-10-27 14:54 GMT

ಮಂಗಳೂರು: ಯುನಿವೆಫ್ ಕರ್ನಾಟಕ ಇದರ ಆಶ್ರಯದಲ್ಲಿ ಸೆ. 20 ರಿಂದ ಡಿ.20 ವರೆಗೆ ಮಾನವ ಸ್ವಾತಂತ್ರ್ಯ, ಕಲ್ಯಾಣ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ಕೇಂದ್ರೀಯ ವಿಷಯದಲ್ಲಿ ಹಮ್ಮಿಕೊಂಡಿರುವ ಅರಿಯಿರಿ ಮನುಕುಲದ ಪ್ರವಾದಿ ಯನ್ನು ಅಭಿಯಾನದ ಅಂಗವಾಗಿ ಉಳ್ಳಾಲ ನಗರಸಭೆ ಮೈದಾನದಲ್ಲಿ ಸೀರತ್ ಸಮಾವೇಶ ಜರುಗಿತು.

ಮುಖ್ಯ ಭಾಷಣಗಾರರಾಗಿ ಕುಟುಂಬ ಸಂಬಂಧ, ಪರಲೋಕ ಜೀವನ ಮತ್ತು ಪ್ರವಾದಿ ಮುಹಮ್ಮದ್ (ಸ) ಎಂಬ ವಿಷಯ ದಲ್ಲಿ ಮಾತನಾಡಿದ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅವರು ಸ್ತ್ರೀ ಸ್ವಾತಂತ್ರ್ಯದ ಕಹಳೆಯನ್ನು ಊದಿದ ಪ್ರವಾದಿ ಮುಹಮ್ಮದ್ ಪ್ರತಿಯೊಬ್ಬರಿಗೂ ಜ್ಞಾನಾರ್ಜನೆಯನ್ನು ಕಡ್ಡಾಯಗೊಳಿಸಿದರು. ಇಂದಿನ ಆಧುನಿಕ ಯುಗದ ಯುವತಿಯರು ಕೇವಲ ಲೌಕಿಕ ವಿದ್ಯಾಭ್ಯಾಸ ಪಡೆದು ಧಾರ್ಮಿಕತೆಯನ್ನು ಉಪೇಕ್ಷಿಸುವುದು ಆಮೂಲಕ ಸಮುದಾಯದ ಗೌರವಕ್ಕೆ ಚ್ಯುತಿ ತರುವುದು ಒಂದು ದುರಂತಮಯ ಬೆಳವಣಿಗೆ ಎಂದರು.

ಪರಲೋಕ ವಿಶ್ವಾಸ ಮೂಲಮಂತ್ರವಾಗಿರುವ ಇಸ್ಲಾಮ್ ಧರ್ಮದ ಅನುಯಾಯಿಗಳು ಲೌಕಿಕತೆಯ ಆಡಂಭರದಲ್ಲಿ ಮೈಮರೆತಿರುವುದು ಶೋಚನೀಯ. ಪ್ರತಿಯೊಂದು ಕಾರ್ಯವನ್ನೂ ಧಾರ್ಮಿಕ ಪ್ರಜ್ಞೆಯೊಂದಿಗೆ ನಿರ್ವಹಿಸಿದರೆ ಅಲ್ಲಾಹನ ಅನುಗ್ರಹಕ್ಕೆ ಪಾತ್ರರಾಗಬಹುದು ಎಂದು ಅಭಿಪ್ರಾಯಪಟ್ಟರು.

ಉಳ್ಳಾಲದ ಉದ್ಯಮಿ ಯು. ಕೆ. ಸಿದ್ದೀಕ್ ಅತಿಥಿಯಾಗಿ ಭಾಗವಹಿಸಿದ್ದರು. ಉಳ್ಳಾಲ ಶಾಖೆಯ ಹಿರಿಯ ಸದಸ್ಯ ಫಝಲ್ ಮುಹಮ್ಮದ್ ಸ್ವಾಗತಿಸಿದರು, ಸಿರಾಜ್ ಹಸನ್ ಕಿರ್‌ಅತ್ ಪಠಿಸಿದರು. ಅಭಿಯಾನ ಸಂಚಾಲಕ ವಕಾಝ್ ಅರ್ಶಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಳ್ಳಾಲ ಶಾಖೆಯ ಉಸ್ತುವಾರಿ ಮುಹಮ್ಮದ್ ಸೈಫುದ್ದೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಪ್ರತಿಭೋತ್ಸವದ ವಿಜೇತರಿಗೆ ಪ್ರಶಸ್ತಿ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News