ಶ್ರಮ ಜೀವಿಗಳಿಗೆ ಒಂದೇ ರೀತಿಯ ವೇತನ ನೀಡಿ: ಮಹಾಂತೇಶ್

Update: 2024-10-27 16:58 GMT

ಮಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರೇ ನೀವು ಒಂದು ದೇಶ ಒಂದು ಚುನಾವಣೆಯನ್ನು ಪಕ್ಕಕ್ಕಿಡಿ. ತಾಕತ್ತಿದ್ದರೆ ಜನರನ್ನು ಬೆಲೆ ಏರಿಕೆಯಿಂದ ಕಾಪಾಡಿ. ಶ್ರಮ ಜೀವಿಗಳಿಗೆ ಒಂದೇ ರೀತಿಯ ವೇತನ ನೀಡಿ ಎಂದು ಭಾರತ ಕಮ್ಯೂನಿಸ್ಟ್ ಪಕ್ಷದ (ಸಿಪಿಎಂ) ರಾಜ್ಯ ಸಮಿತಿ ಸದಸ್ಯ ಕೆ.ಮಹಾಂತೇಶ್ ಹೇಳಿದ್ದಾರೆ.

ನಗರದ ಕೊಟ್ಟಾರದಲ್ಲಿ ರವಿವಾರ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಎಂ) ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಸಮ್ಮೇಳನದಲ್ಲಿ ಪ್ರಮುಖ ಭಾಷಣ ಮಾಡಿದರು.

ಒಂದೇ ದೇಶ ಒಂದೇ ಚುನಾವಣೆ ದೇಶಕ್ಕೆ ದೊಡ್ಡ ಹೊರೆ. ಒಂದೇ ಬಾರಿಗೆ ಚುನಾವಣೆ ಹೇಗೆ ಸಾಧ್ಯ. ಮಂಗಳೂರಿನ ಜನರ ಸ್ಥಳೀಯ ಸಮಸ್ಯೆ ಬೇರೆ, ಲಕ್ನೋ ಜನರ ಸ್ಥಳೀಯ ಸಮಸ್ಯೆ ಬೇರೆ ಅಲ್ಲವೇ ಎಂದು ಪ್ರಶ್ನಿಸಿದರು.

ನಾನು ಈ ಪ್ರದೇಶದಲ್ಲೇ ಅದೆಷ್ಟೋ ಕೂಲಿ ಕಾರ್ಮಿಕರನ್ನು ನೋಡಿದೆ. ತಮ್ಮ ಊರಿನಲ್ಲಿ ಉದ್ಯೋಗ ಇಲ್ಲದೆ ಇಲ್ಲಿ ಬಂದು ದುಡಿಯುತ್ತಿದ್ದಾರೆ. ಆದರೆ ಅವರಿಗೆ ಮನೆ ಇಲ್ಲ. ಇಲ್ಲೇ ಮೈದಾನದಲ್ಲಿ ಮಲಗುತ್ತಾರೆ. ದುಡಿದು ಊರಿಗೆ ಹಣ ಕಳಿಸುತ್ತಾರೆ. ಅವರಿಗೆ ಯಾವ ಸುರಕ್ಷತೆಯೂ ಇಲ್ಲ. ಹೀಗೆ ಬೆಂಗಳೂರು, ಇತರೆ ನಗರಗಳಲ್ಲಿಯೂ ಕಾರ್ಮಿಕರ ಸ್ಥಿತಿ ಹೀಗೆಯೇ ಇದೆ ಎಂದರು.

ಇತ್ತೀಚೆಗೆ ಗುಜರಾತ್ ನಲ್ಲಿ ನಕಲಿ ಜಡ್ಜ್ ಒಬ್ಬರನ್ನು ಬಂಧಿಸಿದರು. ಅಲ್ಲೇ ನಕಲಿ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಕೂಡಾ ಅದೇ ರಾಜ್ಯದವರು. ಮೋದಿ ಟೀ ಮಾರಿದ್ದರು ಎಂದು ಹೇಳುತ್ತಾರೆ, ಆದರೆ ಅವರು ಟೀ ಮಾರಿದ ರೈಲ್ವೆ ಸ್ಟೇಷನ್ ಇಲ್ಲ. ಮೋದಿ ಡಿಗ್ರಿ ಪಡೆದ ಕಾಲೇಜು ಇಲ್ಲ, ಅವರ ಸ್ನೇಹಿತರು ಕೂಡಾ ಇಲ್ಲ.. ನಾವು ನಕಲಿಗಳ ದೇಶದಲ್ಲಿ ಇದ್ದೇವೆ ಎಂದು ಕುಟುಕಿದರು.

ಈಗ ಲಕ್ಷಾಂತರ ರೂಪಾಯಿ ಹಣ ಕೊಟ್ಟು ವಿಧ್ಯಾಭ್ಯಾಸ ಮಾಡಿದರೂ ಉದ್ಯೋಗ ಸಿಗಲ್ಲ. ಉದ್ಯೋಗ ಸಿಕ್ಕರೂ ಅದು ರಾತ್ರಿ ಪಾಳಿಯ ಕೆಲಸ ಆಗಿರುತ್ತದೆ. ನಾವು ನಮ್ಮ ಮಕ್ಕಳಿಗೆ ನೈಟ್ ಶಿಫ್ಟ್ ಎಂದು ಹೆಮ್ಮೆಯಿಂದ ಹೇಳುತ್ತೇವೆ. ಆದರೆ ಅದರಿಂದ ಆಗುವ ಆರೋಗ್ಯ ಸಮಸ್ಯೆ ನಮಗೆ ತಿಳಿದಿಲ್ಲ. ನಿದ್ದೆ ಇಲ್ಲದೆ, ಸರಿಯಾಗಿ ಆಹಾರ ಸೇವಿಸದೇ ಹೃದಯಾಘಾತ ಸಣ್ಣ ವಯಸ್ಸಿನವರಿಗೂ ಆಗುತ್ತಿದೆ ಎಂದರು.

ನಮ್ಮದು ಪ್ರಜಪ್ರಭುತ್ವ ಪಕ್ಷ. ಇಲ್ಲಿ ಎಲ್ಲವೂ ಪ್ರಜಾಸತ್ತಾತ್ಮಕ ರೀತಿಯಲ್ಲಿ ನಡೆಯುತ್ತದೆ. ಬಂಡವಾಳಶಾಹಿ ಪಕ್ಷಗಳಂತೆ ನಮ್ಮ ಪಕ್ಷವಲ್ಲ. ಬಿಜೆಪಿಯಿಂದ ಕಾಂಗ್ರೆಸ್, ಕಾಂಗ್ರೆಸ್ ನಿಂದ ಬಿಜೆಪಿಗೆ ಹಾರಿ ಟೆಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧಿಸು ತ್ತಾರೆ. ಅಂತಹ ಆಯ್ಕೆ ನಮ್ಮಲ್ಲಿಲ್ಲ. ಇಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಪಕ್ಷದ ಬೋರ್ಡು ಮಾತ್ರ ಬೇರೆ ಇದೆ. ನೀತಿ ಯಲ್ಲಿ ವ್ಯತ್ಯಾಸವಿಲ್ಲ. ನಾವು ಅನಿವಾರ್ಯವಾಗಿ ಜನರನ್ನು ವಿಭಜಿಸುವ ಬಿಜೆಪಿಯನ್ನು ಸೋಲಿಸಲು ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದೆವು. ಹಾಗಂತ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿ ಗಳನ್ನು ಬೆಂಬಲಿಸುತ್ತೇವೆ ಎಂದಲ್ಲ. ನಾವು ಅದರ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಮೃತದೇಹ ಬಂಧನ ಮಾಡುವ ಊರು: ಈ ಸಂದರ್ಭದಲ್ಲೇ ಮಾತನಾಡಿದ ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಸುನೀಲ್ ಕುಮಾರ್ ಬಜಾಲ್, ದೇಶದಲ್ಲಿ ಮೃತದೇಹವನ್ನು ಕೂಡಾ ಬಂಧನ ಮಾಡುವ ಊರು ಇದ್ದರೆ ಅದು ಮಂಗಳೂರು ಆಗಿದೆ. ಇಲ್ಲಿ ನಾಯಿಕೊಡೆಗಳಂತೆ ಅಲ್ಲಲ್ಲಿ ತಲೆ ಎತ್ತಿರುವ ಆಸ್ಪತ್ರೆಗಳು ಲಕ್ಷಾಂತರ ರೂಪಾಯಿ ದರೋಡೆ ಮಾಡುತ್ತೀವೆ ಎಂದು ದೂರಿದರು.

ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಸದಸ್ಯರು ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವೇದಿಕೆಯಲ್ಲಿ ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ ಯಾದವ್ ಶೆಟ್ಟಿ, ಪದ್ಮಾವತಿ ಶೆಟ್ಟಿ, ನೂತನ ಮಂಗಳೂರು ನಗರ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಸಿಪಿಎಂ ಮಂಗಳೂರು ದಕ್ಷಿಣ ಸಮಿತಿ ಸದಸ್ಯ ಯೋಗೀಶ್ ಜಪ್ಪಿನಮೊಗರು ಸ್ವಾಗತಿಸಿದರು. ಸಿಪಿಎಂ ಮಂಗಳೂರು ಸಮಿತಿ ಸದಸ್ಯ ಸಂತೋಷ್ ಬಜಾಲ್ ಕಾರ್ಯಕ್ರಮ ನಿರ್ವಹಿಸಿದರು.








Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News