ಮಂಗಳೂರು ಸಾಹಿತ್ಯ ಹಬ್ಬ ಉದ್ಘಾಟನೆ| ಸಾಹಿತ್ಯ ಉತ್ಸವ ಹೊಸ ತಿಳಿವುಗಳಿಗೆ ಪ್ರೇರಣೆಯಾಗಲಿ: ಡಾ.ಎಸ್.ಎಲ್. ಭೈರಪ್ಪ

Update: 2025-01-11 12:37 GMT

ಮಂಗಳೂರು, ಜ.೧೧: ಸಾಹಿತ್ಯ ಉತ್ಸವದ ಕಾರ್ಯಗಳು ಯಾಂತ್ರಿಕವಾಗಿರದೆ ಹೊಸ ತಿಳಿವುಗಳಿಗೆ ಪ್ರೇರಣೆ ನೀಡುವ ಜತೆಗೆ, ಯುವ ಮನಸ್ಸುಗಳನ್ನು ರಾಷ್ಟ್ರ ಹಿತ ಚಿಂತನೆಗೆ ಹಚ್ಚುವಂತಾಗಲಿ ಎಂದು ಹಿರಿಯ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಅಭಿಪ್ರಾಯಿಸಿದ್ದಾರೆ.

ಭಾರತ್ ಫೌಂಡೇಶನ್ ವತಿಯಿಂದ ನಗರದ ಟಿಎಂಎ ಪೈ ಇಂಟರ್‌ನ್ಯಾಷನಲ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ಮಂಗಳೂರು ಸಾಹಿತ್ಯ ಹಬ್ಬವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ವರ್ಷಕ್ಕೊಮ್ಮೆ ದೇಶದ ಮೂಲೆಗಳಿಂದ ಸಾಧಕರು, ಪ್ರತಿಭಾನ್ವಿತರು, ಸಾಹಿತಿಗಳು, ಕಲಾವಿದರಿಗೆ ವೇದಿಕೆ ಕಲ್ಪಿಸಿ ಸಾಹಿತ್ಯ ಹಬ್ಬ ಮಾಡುವುದು ಸಾಹಸದ ಕೆಲಸ. ಆದರೆ ಇಲ್ಲಿ ಚರ್ಚಿಸುವ ವಿಷಯಗಳು ತಲುಪಬೇಕಾದವರಿಗೆ ತಲುಪುತ್ತಿ ದೆಯೇ, ನಿರೀಕ್ಷೆಗಳು ಈಡೇರುತ್ತಿವೆಯೇ ಎಂಬುದು ಮುಖ್ಯವಾಗಿರುತ್ತದೆ. ಹಾಗಾಗಿ ಸಾಹಿತ್ಯ ಉತ್ಸವಗಳು ಯಾಂತ್ರಿಕ ವಾದರೆ ಹೊಸ ವಿಚಾರ ಮಾತನಾಡಲು ಸಾಧ್ಯವಾಗದು. ಸಮಾಜಕ್ಕೆ ಹೊಸತನ ನೀಡಲಾಗದು. ಹಾಗಾಗಿ ಈ ಉತ್ಸವ ತನ್ನ ಗುರಿಯನ್ನು ತಲುಪುವ ಹೊಣೆಗಾರಿಕೆ ಆಯೋಜಕರ ಮೇಲಿದ್ದು, ಅದನ್ನು ಈಡೇರಿಸುವ ಭರವಸೆ ತಮಗಿದೆ ಎಂದರು.

ಮಂಗಳೂರಿನಲ್ಲಿ ಯಾವುದೇ ಕೆಲಸದಲ್ಲೂ ಶಿಸ್ತು ಪ್ರಮುಖ. ಭಾಷಣ ಮಾಡುವಾಗ ಮಾತುಗಳು ಎಲ್ಲೋ ಹೋಗಿ ಬಿಡುತ್ತವೆ. ಅದಕ್ಕಾಗಿ ಬರೆದುಕೊಂಡು ಬಂದು ಓದುವಂತೆ ಆಯೋಜಕರು ತಿಳಿಸಿದ್ದಾರೆ ಎಂದು ಹೇಳುತ್ತಾ ತಮ್ಮ ಭಾಷಣದ ಮಾತುಗಳನ್ನು ಅವರು ಓದಿದರು.

2017ಲ್ಲಿ ಈ ಉತ್ಸವದಲ್ಲಿ ಭಾಗವಹಿಸಿದ್ದೆ. ಇಲ್ಲಿ ಏನೇ ಮಾಡಿದರೂ ಅಚ್ಚುಕಟ್ಟು ದೂರದೃಷ್ಟಿ ಇರುತ್ತದೆ. ಹಾಗಾಗಿಯೇ ಇಲ್ಲಿನವರು ಹೊಟೇಲ್ ಉದ್ಯಮ, ಶೈಕ್ಷಣಿಕವಾಗಿ, ವೈದ್ಯಕೀಯ ಕ್ಷೇತ್ರದಲ್ಲಿ ದೇಶಕ್ಕೆ ಮಾದರಿ. ಈ ಭೂಮಿ ಅನೇಕ ವೈದ್ಯರು ಶಿಕ್ಷಕರ ಜತೆ ಶಿವರಾಮ ಕಾರಂತ, ಪಂಜೆ ಮಂಗೇಶರಾಯರು, ಗೋವಿಂದ ಪೈ, ವ್ಯಾಸರಾಯ ಬಲ್ಲಾಳ, ಸೇಡಿಯಾಪು ಕೃಷ್ಣಭಟ್, ಯಶವಂತ ಚಿತ್ತಾಲರಂತಹ ಖ್ಯಾತ ಸಾಹಿತಿಗಳನ್ನು ನೀಡಿದೆ. ಶಿವರಾಮ ಕಾರಂತರು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಹಿಂತಿರುಗಿಸಿದ್ದನ್ನು ಮರೆಯಾಲಾದೀತೇ ಎಂದು ಡಾ.ಭೈರಪ್ಪ ಹೇಳಿದರು.

ಮಿಥಿಕ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ. ರವಿ ಸಮನ್ವಯಕಾರರಾಗಿ ಭಾಗವಹಿಸಿದ್ದರು.

ಭಾರತ್ ಫೌಂಡೇಶನ್‌ನ ಟ್ರಸ್ಟಿ ಸುನಿಲ್ ಕುಲಕರ್ಣಿ ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಸಾಹಿತಿ ನಾ. ಡಿಸೋಜಾರಿಗೆ ವೀಡಿಯೋ ನುಡಿಚಿತ್ರ ಮೂಲಕ ನಮನ ಸಲ್ಲಿಸಲಾಯಿತು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News