ಶೀಘ್ರವೇ ಭಾರತ 3ನೆ ಅತಿದೊಡ್ಡ ಆರ್ಥಿಕ ಶಕ್ತಿಯಾಗಲಿದೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ
ಮಂಗಳೂರು, ಜ.11: ನರೇಂದ್ರ ಮೋದಿ ಅವರು ದೇಶದ ಪ್ರಧಾನಿ ಆದ ಸಂದರ್ಭದಲ್ಲಿ ನಮ್ಮ ದೇಶದ ಆರ್ಥಿಕತೆ ದುರ್ಬಲವಾಗಿದ್ದು, ಅದನ್ನು ಬಲು ಎಚ್ಚರಿಕೆಯಿಂದ ನಿಭಾಯಿಸಬೇಕಾದ ಪರಿಸ್ಥಿತಿ ಇತ್ತು. ಇದೀಗ ನಾವು 10ನೇ ಸ್ಥಾನದಿಂದ ಐದಕ್ಕೇರಿದ್ದು, ಶೀಘ್ರವೇ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದ್ದೇವೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಭಾರತ್ ಫೌಂಡೇಶನ್ ವತಿಯಿಂದ ನಗರದ ಡಾ.ಟಿ.ಎಂ.ಎ.ಪೈ ಇಂಟರ್‌ನ್ಯಾಷನಲ್ ಕನ್ವೆನ್ಶನ್ ಸೆಂಟರ್‌ನಲ್ಲಿ ಆಯೋಜಿಸಲಾಗಿರುವ ಲಿಟ್ ಫೆಸ್ಟ್‌ನ (ಸಾಹಿತ್ಯ ಉತ್ಸವ) 7ನೇ ಆವೃತ್ತಿಯ ಪ್ರಥಮ ದಿನ ಶನಿವಾರ ಎನರ್ಜಿ ಫಾರ್ ಸರ್ವೈವಲ್, ಸೆಕ್ಯುರಿಟಿ ಆ್ಯಂಡ್ ಕ್ಲೈಮೆಟ್ ವಿಷಯ ಕುರಿತು ನಡೆದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
ಭಾರತದ ಇಂದನ ಬಳಕೆಯ ಮಾದರಿಗಳು ಅಭೂತಪೂರ್ವವಾಗಿವೆ. ದೇಶದಲ್ಲಿ ಸುಮಾರು 67 ಮಿಲಿಯನ್ ಜನರು ನಿಯಮಿತವಾಗಿ ಪೆಟ್ರೋಲ್, ಡೀಸೆಲ್ ಮತ್ತು ಬ್ಯಾಟರಿ ಸಾಧನಗಳನ್ನು ಬಳಸುತ್ತಾರೆ. ದೇಶದ ಕಚ್ಚಾ ತೈಲ ಬಳಕೆಯು 5 ಮಿಲಿಯನ್‌ನಿಂದ 5.4 ಶತಕೋಟಿ ಬ್ಯಾರೆಲ್‌ಗಳಿಗೆ ಏರಿಕೆಯಾಗಿದೆ. ಇದು ಶೀಘ್ರದಲ್ಲೇ ದಿನಕ್ಕೆ 6-7 ಮಿಲಿಯನ್ ಬ್ಯಾರೆಲ್‌ಗಳನ್ನು ತಲುಪಬಹುದು. ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ ಪ್ರಕಾರ ಜಾಗತಿಕ ಶಕ್ತಿಯ 25 ಶೇ. ರಷ್ಟು ಭಾರತ ಹೊಂದಿರುತ್ತದೆ ಎಂದರು.
ನಂದಕಿಶೋರ್ ಮುಖ್ಯ ಅತಿಥಿಯಾಗಿ ವಿಚಾರಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಲಿಟ್‌ಫೆಸ್ಟ್‌ನಲ್ಲಿ ಶನಿವಾರ ‘ಕನ್ನಡ ಸಾಹಿತ್ಯ ವಿಮರ್ಶೆ-ಒಂದು ಅಕಾಡೆಮಿಕ್ ಚರ್ಚೆ’ (ಜಿ.ಎಸ್.ಅಮೂರ ಶತಮಾನದ ನೆನಪು) ವಿಷಯದಲ್ಲಿ ಮಾತನಾಡಿದ ಡಾ.ಎನ್.ಎಸ್.ಗುಂಡೂರ, ಕಲಾಹೀನನಿಗೆ ಸಾಹಿತ್ಯ ಸುಗಂಧ ಬೆಸೆಯುವ ಕಾರ್ಯ ವಿಮರ್ಶೆಯಿಂದ ನಡೆಯಬೇಕಾಗಿದೆ ಎಂದರು.
ವಿಮರ್ಶೆಗೆ 100 ವರ್ಷಗಳ ಇತಿಹಾಸವಿದ್ದು, ಸಾಹಿತ್ಯವನ್ನು ಅಧ್ಯಯನ ಮಾಡುವ ಪ್ರಕಾರವೇ ವಿಮರ್ಶೆ. ಎಲ್ಲಾ ಸಾಹಿತ್ಯಕ್ಕೂ ಒಂದೇ ತೆರನಾದ ವಿಮರ್ಶೆ ಎಂಬ ಭಾವವಿದ್ದು, ಇದರಲ್ಲಿ ಬದಲಾವಣೆಯ ಅಗತ್ಯವಿದೆ ಎಂದರು.
ಡಾ.ಜಿ.ಬಿ.ಹರೀಶ ಮಾತನಾಡಿ, ಮೂಲ ಲೇಖಕನ ಆಶಯವನ್ನು ಧಾತುವಾಗಿರಿಸಿ ಮೂಲ ಕೃತಿಯ ರಸವನ್ನು ಹಿಂಡಿ ವಾಚಕರ ಮುಂದಿಡುವುದು ವಿಮರ್ಶೆ. ನಮ್ಮ ಕೃತಿ ವಿಮರ್ಶೆ ಆಗಿಲ್ಲ ಅಥವಾ ಆ ಕೃತಿಯ ವಿಮರ್ಶೆ ಅಧಿಕವಾಯಿತು ಎಂಬಿತ್ಯಾದಿ ಚರ್ಚೆ ಇರುವುದು ಸಹಜ. ಆದರೆ, ಒಂದು ಕೃತಿಯು ನಮ್ಮನ್ನು ಕೆಣಕುವ ಸಂದರ್ಭ ಬಂದಾಗ ಅಥವಾ ಅರ್ಥ ಆಗದಂತಹ ಸಂದರ್ಭ ಬಂದಾಗ ವಿಮರ್ಶೆ ಸಹಜವಾಗಿ ಹುಟ್ಟುತ್ತದೆ ಎಂದವರು ಹೇಳಿದರು.
ಡಾ.ಶ್ಯಾಮಸುಂದರ ಬಿದರ ಕುಂದಿ ಪ್ರತಿಕ್ರಿಯಿಸಿ, ಸೃಷ್ಟಿ ಮಾಡಿರುವುದರ ಬೆಳಕನ್ನು ಹೆಚ್ಚು ಮಾಡುವುದು ವಿಮರ್ಶೆ. ಕನ್ನಡದಲ್ಲಿ ವಿಮರ್ಶೆ ಅತ್ಯಂತ ಶಿಸ್ತಿನಿಂದ ಬೆಳೆದು ಬಂದಿದೆ ಎಂದರು. ಡಾ.ಕಾಖಂಡಕಿ ಹೆಚ್.ವಿ. ಸಂವಾದ ನಿರ್ವಹಿಸಿದರು.