‘ಸಾಮರಸ್ಯದ ಪ್ರತಿಮೆಗಳು’ ಕೃತಿ ಅನಾವರಣ

ಮಂಗಳೂರು: ಹಿಂದೂ ದೇವಾಲಯ, ಭಜನಾ ಮಂದಿರ ಸಹಿತ ಧಾರ್ಮಿಕ ಕೇಂದ್ರಗಳಲ್ಲಿ ಸಮಾಜದ ಎಲ್ಲ ಜಾತಿಯ ಜನರು ಒಂದಾಗಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ಈ ವಾತಾವರಣ ಸಮಾಜದ ಎಲ್ಲ ಹಿಂದೂ ಮನೆಗಳಲ್ಲಿ ಕಾಣಿಸಿಕೊಳ್ಳಬೇಕು. ಸಮಾಜದಲ್ಲಿ ಸಾಮರಸ್ಯ ಗಟ್ಟಿಯಾದರೆ ಧರ್ಮ ಉಳಿಯುತ್ತದೆ. ಇಲ್ಲದಿದ್ದರೆ ಧರ್ಮಕ್ಕೆ ಅಪಾಯ ಖಚಿತ ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತಿ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸಾಮರಸ್ಯ ವೇದಿಕೆ ಮಂಗಳೂರು ನಗರದ ಕೆನರಾ ಕಾಲೇಜು ಆವರಣದಲ್ಲಿ ರವಿವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ‘ಸಾಮರಸ್ಯದ ಪ್ರತಿಮೆಗಳು’ ಕೃತಿ ಅನಾವರಣಗೊಳಿಸಿ ಅವರು ಮಾತನಾಡಿದರು.
ಹಿಂದಿನ ಕಾಲದಲ್ಲಿ ಇದ್ದ ಕೆಲ ಸಮಾಜ ಬಾಂಧವರ ಬೌದ್ಧಿಕ ಮಟ್ಟ, ಶಿಕ್ಷಣದ ಕೊರತೆ ಯಿಂದ ಕಾಣಿಸಿ ಕೊಂಡ ವಿಕೃತಿ ಕೆಲವು ಕಡೆ ಮುಂದುವರಿಯುತ್ತಿರಬಹುದು. ಇಂದು ಜಗತ್ತೇ ಬದಲಾಗಿದೆ. ವಿಶಾಲ ಚಿಂತನೆ ಜನರು ಹೆಚ್ಚುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟರು.
*ಮೂಲ ತೆಲುಗು : ಅಖಿಲ ಭಾರತ ಸಾಮಾಜಿಕ ಸಾಮರಸ್ಯ ಸಂಯೋಜಕ್ ಶ್ಯಾಮಪ್ರಸಾದ್ ಅವರು ತೆಲುಗಿನ ಕೃತಿ ‘ಸಾಮರಸ್ಯದ ಪ್ರತಿಮೆಗಳು’ ಕೃತಿಯನ್ನು ಕನ್ನಡಕ್ಕೆ ಜನಮೇಜಯ ಉಮರ್ಜಿ ಅನುವಾದ ಮಾಡಿದ್ದಾರೆ.
ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಕಿಶೋರ್ ಮಕ್ವಾನ ಮುಖ್ಯ ಅತಿಥಿಯಾಗಿದ್ದರು.
ಪುಸ್ತಕದ ಮೂಲ ಲೇಖಕ ಶ್ಯಾಮಪ್ರಸಾದ್ ಹಾಗೂ ಅನುವಾದಕ ಜನಮೇಜಯ ಉಮರ್ಜಿ ಉಪಸ್ಥಿತರಿದ್ದರು. ಸಾಮರಸ್ಯ ವೇದಿಕೆ ಮಂಗಳೂರು ಸಂಚಾಲಕ ಜಯಪ್ರಕಾಶ್ ಸ್ವಾಗತಿಸಿದರು. ಸಾಮರಸ್ಯ ವೇದಿಕೆ ದಾವಣಗೆರೆ ರುದ್ರಯ್ಯ ಉಪಸ್ಥಿತರಿದ್ದರು.
ಅಸ್ಪ್ರಶ್ಯತೆಯಿಂದ ದೇಶಕ್ಕೆ ನಷ್ಟ. ದಲಿತರಿಗೆ ಮಾತ್ರವಲ್ಲದೆ, ಸವರ್ಣೀಯರಿಗೆ ಕೂಡ ನಷ್ಟವಾಗಿದೆ. ಒಂದು ಕಾಲದಲ್ಲಿ ಆಯುಧಗಳನ್ನು ಹಿಡಿಯುವ ಅಧಿಕಾರ ಕೂಡ ಎಲ್ಲರಿಗೆ ಇರಲಿಲ್ಲ ಎಂದು ಮುಖ್ಯ ಅತಿಥಿ ಪರಿಶಿಷ್ಟ ಜಾತಿಗಳ ರಾಷ್ಟ್ರೀಯ ಆಯೋಗ ಅಧ್ಯಕ್ಷ ಕಿಶೋರ್ ಮಕ್ವಾನ ಹೇಳಿದರು.
ಅಂಬೇಡ್ಕರ್ ಹಿಂದೂ ವಿರೋಧಿಯಾಗಿರಲಿಲ್ಲ. ಬದಲಾಗಿ ಹಿಂದೂ ಧರ್ಮ ಸಂಘಟನೆ ರಾಷ್ಟ್ರೀಯ ಕಾರ್ಯ ಎಂದು ಅವರು ನಂಬಿದ್ದರು. ಸಮಾಜದಲ್ಲಿರುವ ಅಸ್ಪ್ರಶ್ಯತೆಯ ಮಾನಸಿಕ ವಿಕೃತಿಯನ್ನು ದೂರ ಮಾಡುವ ಆವಶ್ಯಕತೆ ಇದೆ. ಸಾಮಾಜಿಕ ಸಾಮರಸ್ಯ ಇಲ್ಲದಿದ್ದರೆ ದೇಶಕ್ಕೆ ಭವಿಷ್ಯವಿಲ್ಲ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.