ಗೀತಾಂಜಲಿ ಲಕ್ಷಾಂತರ ಮಂದಿಗೆ ಸ್ಫೂರ್ತಿ ತುಂಬಿದ ಕೃತಿ : ಶಾಂತಾರಾಮ ಶೆಟ್ಟಿ ಅಭಿಪ್ರಾಯ

ಮಂಗಳೂರು: ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ ದೇಶದ ಲಕ್ಷಾಂತರ ಮಂದಿಗೆ ಸ್ಫೂರ್ತಿ ತುಂಬಿದ ಕೃತಿ ಆಗಿದೆ ಎಂದು ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಪ್ರೊ.ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ನಗರದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ರವೀಂದ್ರನಾಥ ಟ್ಯಾಗೋರರ ಗೀತಾಂಜಲಿ ಕಾವ್ಯದ ಕನ್ನಡಾನುವಾದ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು ಶ್ರೇಷ್ಠ ಕಾವ್ಯವಾಗಿದೆ ಎಂದು ನುಡಿದರು.
ಗೀತಾಂಜಲಿಯ ಸಾಲುಗಳ ಸಾರವು ಕುವೆಂಪು ಮತ್ತು ಡಿವಿಜಿ ಅವರ ಕೃತಿಗಳಲ್ಲಿ ಫ್ರತಿಫಲನಗೊಂಡಿದೆ ಎಂದರು.
ಟ್ಯಾಗೋರರು ಶಾಲೆಯಲ್ಲಿ ಔಪಚಾರಿಕ ಶಿಕ್ಷಣ ಪಡೆದವರಲ್ಲ. ಆದರೂ ಸಾಹಿತ್ಯದಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. ಮನುಷ್ಯನ ಆಂತರ್ಯದಲ್ಲಿ ಹುದುಗಿರುವ ಪ್ರತಿಭೆಯನ್ನು ಬಯಲಿಗೆಳೆಯಲು ಶಿಕ್ಷಣ ಪ್ರೇರಣೆ ಮತ್ತು ಕಾರಣ ಆಗಬೇಕು ಎಂದು ಶಾಂತಾರಾಮ ಶೆಟ್ಟಿ ಹೇಳಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಎಲ್.ಧರ್ಮ ಮಾತನಾಡಿ ಟ್ಯಾಗೋರರ ನೆನಪಾ ದಾಗ ಪ್ರೀತಿಯ ಕುರಿತ ಚಿಲುಮೆ ಚಿಮ್ಮುತ್ತದೆ. ಪ್ರಾಣಿ-ಪಕ್ಷಿಗಳ ಮೇಲೆ ಪ್ರೀತಿ ಇದೆ ಎಂದು ಗೂಡುಗಳಲ್ಲಿ ಮತ್ತು ಉದ್ಯಾನಗಳಲ್ಲಿ ಬಂಧಿಸಿಡಲಾಗುತ್ತದೆ. ಅದು ನಿಜವಾದ ಪ್ರೀತಿಯಲ್ಲ. ಹಾಗೆ ಮಾಡುವುದು ನಮ್ಮ ಇಷ್ಟವನ್ನು ಹೇರುವ ಕ್ರಿಯೆ ಎಂದು ಅವರು ಹೇಳಿದರು.
ರಾಮಕೃಷ್ಣ ಕ್ರೆಡಿಟ್ ಕೊ ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಕೆ. ಜಯರಾಮ ರೈ ಮಾತನಾಡಿ ಶುಭ ಹಾರೈಸಿದರು. ಅನುವಾದಕ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಚ್ಚಿದಾನಂದ ಶೆಟ್ಟಿ ಅವರ ಪತ್ನಿ ದೇವಕಿ ಎಸ್.ಶೆಟ್ಟಿ, ನಿವೃತ್ತ ಪ್ರಾಧ್ಯಾಪಕ ಚೇರ್ಕಾಡಿ ರಘುರಾಮ ಶೆಟ್ಟಿ, ಪ್ರೊ.ದೇವರಾಜ್ ಹಾಗೂ ಪ್ರೊ ಶಂಕರ ಶೆಟ್ಟಿ ಉಪಸ್ಥಿತರಿದ್ದರು.