ಬೈಕ್ ಢಿಕ್ಕಿ: ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತ್ಯು
Update: 2025-04-01 19:33 IST

ಮಂಗಳೂರು : ವಿಮಾನ ನಿಲ್ದಾಣ ರಸ್ತೆಯ ಐಟಿಐ ಕಾಲೇಜು ಬಳಿ ಸೋಮವಾರ ರಾತ್ರಿ ಸುಮಾರು 10:30ಕ್ಕೆ ರಸ್ತೆ ದಾಟುತ್ತಿದ್ದ ಪದ್ಮನಾಭ ನಾಯಕ್ (69) ಎಂಬವರಿಗೆ ಬೈಕ್ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನಗರದ ಶರ್ಬತ್ ಕಟ್ಟೆಯ ನಿವಾಸಿಯಾಗಿದ್ದ ಪದ್ಮನಾಭ ತನ್ನ ಮನೆಗೆ ತೆರಳಲು ಮುಖ್ಯ ರಸ್ತೆಯನ್ನು ದಾಟುತ್ತಿದ್ದಾಗ ಬೈಕ್ ಸವಾರ ಚರಣ್ ಶೆಟ್ಟಿ ಎಂಬಾತ ಅತೀ ವೇಗ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿ ಸಿದ ಪರಿಣಾಮ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡಿದ್ದ ಪದ್ಮನಾಭ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪದ್ಮನಾಭ ಮಂಗಳೂರು ಸರ್ಕೀಟ್ ಹೌಸ್‌ನ ಉದ್ಯೋಗಿಯಾಗಿ ನಿವೃತ್ತರಾಗಿದ್ದರು. ಘಟನೆಯಲ್ಲಿ ಬೈಕ್ ಸವಾರನಿಗೂ ಸಣ್ಣಪುಟ್ಟ ಗಾಯವಾಗಿದೆ. ಕದ್ರಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.