ಮಂಗಳೂರು| ಮುಡಾ ಆಯುಕ್ತೆಗೆ ಕೊಲೆ ಬೆದರಿಕೆ: ಪ್ರಕರಣ ದಾಖಲು

ಮಂಗಳೂರು, ಎ.1: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತೆ ನೂರ್ ಝಹರಾ ಖಾನಮ್‌ರಿಗೆ ಜೀವ ಬೆದರಿಕೆ ಹಾಕಿರುವ ಆರೋಪದಡಿ ಇಬ್ಬರ ವಿರುದ್ಧ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜ.7ರಂದು ಮುಡಾ ಕಚೇರಿಯಲ್ಲಿ ದಲ್ಲಾಲಿಯೊಬ್ಬ ಕಡತ ತಿದ್ದಿರುವ ಘಟನೆ ನಡೆದ ಬಳಿಕ ಮುಡಾ ಕಚೇರಿ ಯೊಳಗೆ ಸಾರ್ವಜನಿಕರ ಏಕ ನಿವೇಶನ ಇತ್ಯಾದಿ ಕೆಲಸಗಳಿಗೆ ಮಧ್ಯವರ್ತಿಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದಕ್ಕೆ ವಿರುದ್ಧವಾಗಿ ‘ಆರೋಪಿಗಳಾದ ವಹಾಬ್ ಮತ್ತು ಸಾಬಿತ್ ವಾಟ್ಸಾಪ್ ಗ್ರೂಪ್ ತಯಾರಿಸಿ ಉಳಿದ ಮಧ್ಯವರ್ತಿಗಳನ್ನು ಅದಕ್ಕೆ ಸೇರಿಸಿ ನನ್ನ ಬಗ್ಗೆ ಅವಮಾನಕರ ಸಂದೇಶಗಳನ್ನು ಕಳುಹಿಸಿದ್ದಾರೆ. ಜತೆಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕುವುದು, ಆಗಾಗ ಕಚೇರಿಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸುವುದು, ಸಾರ್ವಜನಿಕ ಶಾಂತಿ ಕದಡಲು ಯತ್ನಿಸಿದ್ದಾರೆ. ಅಲ್ಲದೆ ವಾಮಾಚಾರ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ’ ಎಂದು ಆಯುಕ್ತೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.