ಮಂಗಳೂರು| ಕನಿಷ್ಠ ಸೌಲಭ್ಯವನ್ನೂ ಒದಗಿಸದೆ ಬಹಳ ಸಮಸ್ಯೆ : ಹಜ್ ಕಮಿಟಿಯ ‌ಮೂಲಕ ತೆರಳಿದ ಯಾತ್ರಿಕರಿಂದ ಮತ್ತೆ ಆರೋಪ

Update: 2024-06-17 17:46 GMT

ಸಾಂದರ್ಭಿಕ ಚಿತ್ರ (PTI)

ಮಂಗಳೂರು: ಹಜ್ ಕಮಿಟಿಯ ‌ಮೂಲಕ ಹಜ್ ಗೆ ತೆರಳಿದ ಯಾತ್ರಿಗಳು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ಸೂಕ್ತ ಸ್ಪಂದನ ಸಿಗುತ್ತಿಲ್ಲ ಎಂಬ ಆರೋಪ ಮತ್ತೆ ಕೇಳಿ ಬಂದಿದೆ.

ಮೊದಲು ಮಕ್ಕಾದಲ್ಲಿ ಸರಿಯಾದ ವಾಸ್ತವ್ಯ ವ್ಯವಸ್ಥೆ ಮಾಡದ ದೂರು ಕೇಳಿ ಬಂದಿತ್ತು. ಈಗ ಮಿನಾದಲ್ಲೂ ಬಹಳ ಸೂಕ್ತ ವ್ಯವಸ್ಥೆ ಮಾಡದೆ ಬಹಳ ಸಮಸ್ಯೆ ಆಗಿರುವ ದೂರು ಬಂದಿದೆ.

ನಿಗದಿತ ಮೊತ್ತ ಪಾವತಿಸಿ ಹಜ್ ಯಾತ್ರೆ ಕೈಗೊಂಡರೂ ಹಜ್ ಕರ್ಮವು ತೃಪ್ತಿದಾಯಕವಾಗಿಲ್ಲ.‌ ಸರಕಾರದ ಉಚಿತ ಕೋಟಾ ಮೂಲಕ ಹಜ್ ಯಾತ್ರೆಗೈಯುವ ಅವಕಾಶ ಪಡೆದವರು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಹಜ್ ಯಾತ್ರಿಕರು ದೂರಿದ್ದಾರೆ.

ನನ್ನ ಮಗಳು ಅಮಾತುಲ್ ಅಹದ್ ಮತ್ತು ಅಳಿಯ ಮುಹಮ್ಮದ್ ಹಿಶಾಮ್ ಇರ್ಷಾದ್ ಮೇ 22ರಂದು ಬೆಂಗಳೂರಿನಿಂದ ಹಜ್‌ ಯಾತ್ರೆಗೈದಿದ್ದರು. ಅವರಿಗೆ ಮಕ್ಕಾ, ಮದೀನಾದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿತ್ತು. ಅದರ ದುಪ್ಪಟ್ಟು ಸಮಸ್ಯೆ ಮೀನಾದಲ್ಲಿ ಆಗಿದೆ. ಅಝೀಝಿಯಾದಿಂದ ಮೀನಾಕ್ಕೆ ತೆರಳಲು ಸರಿಯಾದ ಬಸ್ ವ್ಯವಸ್ಥೆ ಇರಲಿಲ್ಲ. ಜೂ.14ರಂದು ಸಂಜೆ 3:30ಕ್ಕೆ ಸಿದ್ಧರಾಗಿ ನಿಲ್ಲುವಂತೆ ಸೂಚಿಸಲಾಗಿತ್ತು. ಆದರೆ ಬಸ್ ಬಂದು ಯಾತ್ರಾರ್ಥಿಗಳನ್ನು ಮರುದಿನ ಕರೆದುಕೊಂಡು ಹೋಗಲಾಗಿತ್ತು. ದುಲ್‌ಹಜ್ಜ್ 8ರಂದು ಬೆಳಗ್ಗೆ ತಲುಪಬೇಕಾದ ಬಸ್ ಮಧ್ಯಾಹ್ನದ ಬಳಿಕ ತಲುಪಿತ್ತು. ಮೀನಾದಲ್ಲಿ ಟೆಂಟ್‌ನೊಳಗೆ ಸಕಾಲಕ್ಕೆ ಪ್ರವೇಶ ಸಿಕ್ಕಿರಲಿಲ್ಲ. ಹೆಚ್ಚಿನ ಕಾಲ ಬಸ್ಸಿನಲ್ಲೇ ವಿನಾಕಾರಣ ಅಲೆದಾಡಿಸಲಾಗಿತ್ತು ಎಂದು ಮೂಡುಬಿದಿರೆಯ ಮುಮ್ತಾಜ್ ಎಂಬವರು ಆರೋಪಿಸಿದ್ದಾರೆ‌.

ಸರಕಾರ ನಿಗದಿಪಡಿಸಿದ‌ ಮೊತ್ತ ಪಾವತಿಸಿ ಯಾತ್ರೆ ಕೈಗೊಂಡರೂ ಕೂಡ ಯಾವ ವ್ಯವಸ್ಥೆಯನ್ನೂ ಮಾಡಲಿಲ್ಲ. ಮೆಟ್ರೊ ಬಸ್ ನ ಪಾಸ್ ನೀಡಿಲ್ಲ. ಕುಡಿಯಲು, ಸ್ನಾನ ಮಾಡಲು ನೀರು ಪೂರೈಸಿಲ್ಲ. ಸರಿಯಾದ ಆಹಾರದ ವ್ಯವಸ್ಥೆ ಕೂಡ ಇರಲಿಲ್ಲ. ಪುತ್ರಿ ಎಡವಿ ಬಿದ್ದ ಕಾರಣ ಕಾಲಿಗೆ ಗಾಯವಾಗಿತ್ತು. ಅದಕ್ಕೆ ಚಿಕಿತ್ಸೆಯ ವ್ಯವಸ್ಥೆಯೂ ಇರಲಿಲ್ಲ. ಒಂದು ದಿನ ಮಗಳು ಕಾಲಿನ ಗಾಯದ ನಡುವೆಯೂ 25 ಕಿ.ಮೀ ನಡೆದದ್ದೂ ಇದೆ‌. ಅಷ್ಟೇ ಅಲ್ಲದೆ ತಂಗಲು ವ್ಯವಸ್ಥೆ ಇಲ್ಲದ ಕಾರಣ ಅಳಿಯ ಬೀದಿಯಲ್ಲೇ ಕಾಲ ಕಳೆಯುವಂತಾಗಿತ್ತು. ಮಗಳ ಸಂಕಷ್ಟ ಕಂಡ ಮಹಾರಾಷ್ಟ್ರ ಮೂಲದ ಯಾತ್ರಿಗಳು ಅವರ ಕ್ಯಾಂಪ್ ನಲ್ಲಿ ಆಸರೆ ನೀಡಿದರು ಎಂದು ಮುಮ್ತಾಜ್ ಘಟನೆಯ ಬಗ್ಗೆ ವಿವರಿಸಿದ್ದಾರೆ.

ನನ್ನ ಮಗಳು ಮತ್ತು ಅಳಿಯನಲ್ಲದೆ ಇತರ 40 ಮಂದಿಯೂ ಇಂತಹ ಸಮಸ್ಯೆ ಎದುರಿಸಿದ್ದಾರೆ‌. ಭಾರತದ ಹಲವು ಯಾತ್ರಿಕರು ‌ಇಂತಹ ಸಮಸ್ಯೆ ಎದುರಿಸಿದ್ದಾರೆ.‌ ತಮಗಾಗುವ ಸಮಸ್ಯೆ, ಅನ್ಯಾಯದ ವಿರುದ್ಧ ಸಂಬಂಧಪಟ್ಟವರ ಗಮನ ಸೆಳೆದರೆ ಪ್ರಯೋಜನವಾಗುತ್ತಿಲ್ಲ. ಇಲ್ಲಸಲ್ಲದ ನೆಪಹೇಳಿ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಸರಕಾರ ನಿಗದಿಪಡಿಸಿದ ಮೊತ್ತ ಪಾವತಿಸಿದರೂ ಯಾವ ಸೌಲಭ್ಯಗಳನ್ನೂ ನೀಡಿಲ್ಲ . ಹಜ್ ಯಾತ್ರೆಯು ತೃಪ್ತಿದಾಯಕವಾಗಿರಲಿಲ್ಲ. ಅಸರ್ಮಕ ವ್ಯವಸ್ಥೆಯಿಂದ ಮೊಬೈಲ್‌ ಚಾರ್ಜ್ ಮಾಡಲು‌ ಆಗಲಿಲ್ಲ. ಹಾಗಾಗಿ ಸಕಾಲಕ್ಕೆ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ.‌ ಜುಲೈ 4ಕ್ಕೆ ಜಿದ್ದಾದಿಂದ ಮರಳಿ ಬರಲಿದ್ದಾರೆ. ಆವರೆಗಿನ ವ್ಯವಸ್ಥೆಯ ಬಗ್ಗೆ ಯಾರಿಗೂ ಖಚಿತ ಭರವಸೆಯಿಲ್ಲ. ಹಜ್ ಕರ್ಮದ ವಿಧಿವಿಧಾನ ‌ಮಾಡಿದರೂ ತೃಪ್ತಿದಾಯಕವಾಗಿಲ್ಲ. ಸಂಪೂರ್ಣ ಮೊತ್ತ ಪಾವತಿಸಿದರೂ ಸರಕಾರದ ಬಿಟ್ಟಿ ಭಾಗ್ಯ ಎಂಬಂತಾಗಿದೆ. ಸರಕಾರ ಇನ್ನಾದರೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಮಸ್ಯೆಗಳನ್ನು ಎದುರಿಸುತ್ತಿರುವ ಹಜ್ ಯಾತ್ರಿಕರ ಪರವಾಗಿ ಮುಮ್ತಾಜ್ ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News