ಪಾಣೆಮಂಗಳೂರು: ಒಂದೇ ದಿನದಲ್ಲಿ ಮುರಿದುಬಿದ್ದ ಘನವಾಹನ ಸಂಚಾರ ನಿಷೇಧಕ್ಕೆ ಅಳವಡಿಸಲಾದ ಕಬ್ಬಿಣದ ಕಮಾನು
ಬಂಟ್ವಾಳ : ಶತಮಾನದ ಹಳೆಯದಾದ ಪಾಣೆಮಂಗಳೂರು ಉಕ್ಕಿನ (ನೇತ್ರಾವತಿ) ಸೇತುವೆಯಲ್ಲಿ ಘನಗಾತ್ರದ ವಾಹನ ಗಳು ಸಂಚಾರ ಮಾಡದಂತೆ ತಡೆಯಲು ಅಳವಡಿಸಲಾದ ಕಬ್ಬಿಣದ ಕಮಾನು ಒಂದೇ ದಿನದಲ್ಲಿ ಮುರಿದು ಬಿದ್ದಿದೆ.
ಬಂಟ್ವಾಳ ಪುರಸಭಾ ಇಲಾಖೆಯ ವತಿಯಿಂದ ಶುಕ್ರವಾರ ಸೇತುವೆಯ ಎರಡು ಭಾಗದಲ್ಲಿ ಸೀಮಿತ ಎತ್ತರದಲ್ಲಿ ಅಡ್ಡವಾಗಿ ಕಬ್ಬಿಣದ ರಾಡ್ ಅಳವಡಿಸಲಾಗಿದ್ದು ಘನಗಾತ್ರದ ಲಾರಿ, ಬಸ್ ಗಳು ಓಡಾಟ ನಡೆಸದಂತೆ ತಡೆ ಹಿಡಿಯಲಾಗಿತ್ತು. ಆದರೆ ಶನಿವಾರ ಬೆಳಿಗ್ಗೆ ಗೂಡ್ಸ್ ಟೆಂಪೋ ಕಮಾನಿಗೆ ಗುದ್ದಿದ್ದು ಕಮಾನು ಮುರಿದು ಬಿದ್ದಿದೆ.
ಸೇತುವೆಯಲ್ಲಿ ಬಿರುಕಿನ ಬಗ್ಗೆ ಸ್ಥಳೀಯರ ದೂರಿನಂತೆ ಮಾಧ್ಯಮಗಳು ವರದಿ ಮಾಡಿದ್ದವು. ಘಟನೆ ನಡೆದ ಒಂದು ವಾರಗಳ ಬಳಿಕ ಕಮಾನು ಹಾಕುವ ಕಾಮಗಾರಿ ಶುಕ್ರವಾರ ಪೂರ್ಣಗೊಂಡಿದ್ದು ಶನಿವಾರ ಮುರಿದು ಬಿದ್ದಿದೆ.
ಸೇತುವೆ ಪ್ರವೇಶಕ್ಕೆ ಮೊದಲು ಘನಗಾತ್ರದ ವಾಹನಗಳ ನಿರ್ಬಂಧ ಮಾಡಲಾಗಿರುವ ಬಗ್ಗೆ ಯಾವುದೇ ಸೂಚನಾ ಫಲಕಗಳನ್ನು ಹಾಕದ ಹಿನ್ನೆಲೆಯಲ್ಲಿ ಅರಿವಿಲ್ಲದೆ ಗೂಡ್ಸ್ ಟೆಂಪೋ ವೊಂದು ಸೇತುವೆಯಲ್ಲಿ ಸಂಚರಿಸಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಅದೃಷ್ಟವಶಾತ್ ರಾಡ್ ಬೀಳುವ ವೇಳೆ ಹಿಂಬದಿಯಿಂದ ವಾಹನವಿಲ್ಲದ ಕಾರಣಕ್ಕಾಗಿ ಯಾವುದೇ ಪ್ರಾಣಹಾನಿ ನಡೆದಿಲ್ಲ.
ಕಾಮಗಾರಿ ಅವೈಜ್ಞಾನಿಕವಾಗಿದ್ದು, ಸಮರ್ಪಕವಾಗಿ ನಡೆಸಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.
ವಾಹನದ ಮೇಲ್ಬಾಗ ಡಿಕ್ಕಿಯಾದ ಪರಿಣಾಮ ರಾಡ್ ಕೆಳಗುರುಳಿದೆ. ಬಳಿಕ ಕೆಲವೊತ್ತು ಸಂಚಾರಕ್ಕೆ ಅಡ್ಡಿಯಾಗಿತ್ತು. ಸ್ಥಳೀಯರು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟ ಬಳಿಕ ಮತ್ತೆ ರಾಡ್ ನ್ನು ಮೇಲಕ್ಕೆ ಸಿಕ್ಕಿಸಿದ್ದಾರೆ. ಮತ್ತೆ ಘನಗಾತ್ರದ ವಾಹನಗಳು ಗೊತ್ತಿಲ್ಲದೆ ಸೇತುವೆಯಲ್ಲಿ ಸಂಚಾರ ಮಾಡಿ ಕಬ್ಬಿಣದ ರಾಡ್ ಮತ್ತೆ ಬೀಳುವ ಸ್ಥಿತಿಯಲ್ಲಿ ಇರುವುದು ಅಪಾಯಕಾರಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.