ನಾಟೆಕಲ್ ನಲ್ಲಿ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರು‌ ಕಂಗಾಲು

Update: 2023-11-13 13:01 GMT

ಕೊಣಾಜೆ; ದೇರಳಕಟ್ಟೆ ತೊಕ್ಕೊಟ್ಟು ಮಾರ್ಗವಾಗಿ ಮುಡಿಪು ಕಡೆಗೆ ಸಂಚರಿಸುವಾಗ ಸಿಗುವ ಮುಖ್ಯ ಕೇಂದ್ರವೇ ನಾಟೆಕಲ್. ಮಂಜನಾಡಿ, ಕೊಣಾಜೆ, ಕೋಟೆಕಾರು ಹೀಗೆ ವಿವಿಧ ಪ್ರದೇಶಗಳಿಗೆ ಹೋಗುವ ಪ್ರಯಾಣಿಕರಿಗೆ ನಾಟೆಕಲ್ ಕೇಂದ್ರ ಬಿಂದು. ಅಭಿವೃದ್ಧಿ ಹೊಂದುತ್ತಿರುವ ಈ ಪ್ರದೇಶದಲ್ಲಿ ಪ್ರಯಾಣಿಕರಿಗೆ ಒಂದು ಸುಸಜ್ಜಿತವಾದ ಬಸ್ ತಂಗುದಾಣವಿಲ್ಲದೆ‌ ಜನರು‌ ಕಂಗಾಲಾಗಿದ್ದಾರೆ.

ನಾಟೆಕಲ್ ಪ್ರದೇಶದಲ್ಲಿ ಉಳ್ಳಾಲ ತಾಲೂಕು ಕಚೇರಿ ಆರಂಭಗೊಂಡಿದೆ ಜೊತೆಗೆ ಅನೇಕ ಶೈಕ್ಷಣಿಕ ಸಂಸ್ಥೆಗಳು, ವೈದ್ಯಕೀಯ ಕಾಲೇಜು ಆಸ್ಪತ್ರೆಗಳು ಕಂಪೆನಿಗಳು ವ್ಯಾಪಾರ ಕೇಂದ್ರಗಳಿದ್ದು, ನಾಟೆಕಲ್ ಜಂಕ್ಷನ್ ಜನಜಂಗುಳಿಯ ಪ್ರದೇಶವಾಗಿ ಮಾರ್ಪಟ್ಟಿದೆ.

ಜಂಕ್ಷನ್ ಅಭಿವೃದ್ಧಿ; ನಾಟೆಕಲ್ ಭಾಗದಲ್ಲಿ ಇತ್ತೀಚಿನ ಎರಡು ವರ್ಷದಲ್ಲಿ ಅನೇಕ ಬದಲಾವಣೆಗಳಾಗಿದ್ದು, ನಾಟೆಕಲ್ ಕೇಂದ್ರ ಭಾಗದ ರಸ್ತೆ ಅಗಲೀಕರಣ ಗೊಂಡಿದೆ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ನಿರ್ಮಿಸಲಾಗಿದೆ. ಮುಖ್ಯ ಸರ್ಕಲ್ ನಲ್ಲಿ‌ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವತಿಯಿಂದ ಹೊಸ ವಿನ್ಯಾಸದ ಸರ್ಕಲ್ ನಿರ್ಮಾಣವಾಗುತ್ತಿದೆ.

ಹಳೆ ತಂಗುದಾಣವನ್ನು ಕೆಡವಲಾಗಿತ್ತು: ನಾಟೆಕಲ್ ಪ್ರದೇಶದಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಲಯನ್ಸ್ ಕ್ಲಬ್ ಮಂಗಳ ಗಂಗೋತ್ರಿಯವರು ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಿದ್ದರು. ಇದು ಪ್ರಯಾಣಿಕರಿಗೆ ತುಂಬಾ ಅನುಕೂಲವಾಗು ತ್ತಿತ್ತು. ಆದರೆ ರಸ್ತೆ ಅಗಲೀಕರಣದ ವೇಳೆ ಈ ಹಳೆ ಬಸ್ ತಂಗುದಾಣವನ್ನು ಕೆಡವಲಾಗಿತ್ತು.

ಬಿಸಿಲು ಮಳೆಗೆ ಪ್ರಯಾಣಿಕರ ಸಂಕಷ್ಠ;

ಕೊಣಾಜೆ ಹಾಗೂ ಮಂಜನಾಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುವ ಭಾಗದಲ್ಲಿ ಹಾಗೂ ಮಂಗಳೂರಿನಿಂದ ಕೊಣಾಜೆ ಕಡೆಗೆ ಹೋಗುವ ಭಾಗದಲ್ಲಿ ಸೇರಿದಂತೆ ಎರಡು ಕಡೆಯೂ ಸುಸಜ್ಜಿತ‌ ಬಸ್ ತಂಗುದಾಣವಿಲ್ಲದೆ ಪ್ರಯಾಣಿಕರು ಬಿಸಿಲು ಮಳೆಗೆ ಸಂಕಷ್ಟ ಎದುರಿಸುವಂತಾಗಿದೆ.

ಬಸ್ ನಿಲ್ದಾಣವಿಲ್ಲದೆ‌ ಪ್ರಯಾಣಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಕಂಡು ಬೇಸತ್ತ ನಾಟೆಕಲ್ ನ ಅಟೋ ಚಾಲಕರು ಒಟ್ಟು ಸೇರಿ ಎರಡು ಭಾಗದಲ್ಲೂ ತಗಡು ಶೀಟು ಹಾಕಿ ನೆರಳಿಗಾಗಿ ತಾತ್ಕಾಲಿಕ ಬಸ್ ತಂಗುದಾಣವನ್ನು ನಿರ್ಮಿಸಿ ಸ್ವಲ್ಪ ಅನುಕೂಲತೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಆದರೆ ಗಾಳಿ ಮಳೆಗೆ ಪ್ರಯಾಣಿಕರು ತೊಂದರೆ ಎದುರಿಸುತ್ತಿದ್ದಾರೆ.

ಅಲ್ಲದೆ ಬಸ್ ತಂಗುದಾಣದೊಂದಿಗೆ ಇಲ್ಲಿಯ ಇನ್ನೊಂದು ಪ್ರಮುಖ ಸಮಸ್ಯೆಯೆಂದರೆ ರಸ್ತೆ ಅಗಲೀಕರಣದ ಬಳಿಕ ಈ ನಾಟೆಕಲ್ ತಿರುವು ಪ್ರದೇಶದಲ್ಲಿ ವಾಹನ ಅವಘಡಗಳ ಸಂಖ್ಯೆ‌ ಹೆಚ್ಚಾಗಿದೆ. ಮಂಜನಾಡಿ ಕಡೆಯಿಂದ ಬರುವ ರಸ್ತೆಗೆ ಸಣ್ಣ ಗಾತ್ರದ ಹಂಪ್ಸ್ ನಿರ್ಮಾಣ ಮಾಡಲಾಗಿದ್ದರೂ ಅದು ಉಪಯೋಗಕ್ಕೆ ಬರುತ್ತಿಲ್ಲ. ಆದ್ದರಿಂದ ಇಲ್ಲಿ‌ ಅಪಘಾತವನ್ನು ತಡೆ ಯಲು ಸುಸಜ್ಜಿತವಾದ ಹಂಪ್ಸ್ ನಿರ್ಮಾಣವಾಗಬೇಕು ಎಂಬುದು‌ ಈ ಭಾಗದ ಜನರ ಬೇಡಿಕೆಯಾಗಿದೆ.

ಆದಷ್ಟು ಶೀಘ್ರವಾಗಿ ಇಲ್ಲಿಯ ಎರಡು ಭಾಗಗಳಲ್ಲಿಯೂ ಸುಸಜ್ಜಿತ ಬಸ್ ತಂಗುದಾಣ ನಿರ್ಮಾಣ ಆಗಬೇಕೆಂಬುದು ಈ ಭಾಗದ ಪ್ರಯಾಣಿಕರ ಆಗ್ರಹವಾಗಿದೆ.

"ನಾಟೆಕಲ್ ಅಭಿವೃದ್ಧಿ ಹೊಂದಿದ ಪ್ರದೇಶವಾದರೂ ಬಸ್ ತಂಗುದಾಣದ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ತುಂಬಾ ತೊಂದರೆ ಎದುರಿಸುತ್ತಿದ್ದಾರೆ. ರಿಕ್ಷಾ ಚಾಲಕರು ಇದನ್ನು ಗಮನಿಸಿ ತಾತ್ಕಾಲಿಕ ಶೆಡ್ ನಿರ್ಮಿಸಿ ಕೊಟ್ಟಿದ್ದು, ಆದಷ್ಡು ಶೀಘ್ರ ವಾಗಿ ಸರ್ಕಾರದ ವತಿಯಿಂದ ಸುಸಜ್ಜಿತ ಬಸ್ಸು ತಂಗುದಾಣ‌ ನಿರ್ಮಾಣವಾಗಲಿ"

- ಹಮೀದ್ ಅಧ್ಯಕ್ಷರು, ರಿಕ್ಷಾ ಚಾಲಕ ಮಾಲಕರ ಸಂಘ ನಾಟೆಕಲ್ 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News