ಪಿಡಿಒ ಉಗ್ಗಪ್ಪ ಮೂಲ್ಯರಿಗೆ ‘ಸ್ವಚ್ಛತೆಯೇ ಸೇವೆ’ ಪುರಸ್ಕಾರ

Update: 2024-10-02 17:53 GMT

ಮಂಗಳೂರು, ಅ.2: ಕಾರ್ಯದರ್ಶಿ ಹುದ್ದೆಯಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ) ಆಗಿ ಭಡ್ತಿಗೊಂಡು, ಕಲ್ಲಮುಂಡ್ಕೂರು ಹಾಗೂ ಪಡುಮಾರ್ನಾಡು ಪಂಚಾಯತ್‌ನಲ್ಲಿ ಪಿಡಿಒ ಆಗಿ ಕಾರ್ಯನಿರ್ವಹಿಸಿ, ಪ್ರಸ್ತುತ ಪಡುಪೆರಾರ ಪಂಚಾಯತ್‌ನಲ್ಲಿ ಪಿಡಿಒ ಆಗಿರುವ ಉಗ್ಗಪ್ಪ ಮೂಲ್ಯ ಅವರು ಅ. 2ರ ಗಾಂಧಿ ಜಯಂತಿಯಂದು ಕೇಂದ್ರ ಸರ್ಕಾರದ ‘ಸ್ವಚ್ಛತೆಯೇ ಸೇವೆ’ ಅಭಿಯಾನ ಪ್ರಶಸ್ತಿ ಸ್ವೀಕರಿಸಿದರು.

ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಲಶಕ್ತಿ ಸಚಿವಾಲಯ ಹಾಗೂ ಕೇಂದ್ರ ನಗರ ವಸತಿ ವ್ಯವಹಾರ ಗಳ ಸಚಿವಾಲಯವು ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 2ರವರೆಗೆ ‘ಸ್ವಚ್ಛತಾ ಹೀ ಸೇವಾ’ ಅಭಿಯಾನ ಹಮ್ಮಿಕೊಂಡಿದ್ದು, ಅತ್ಯುತ್ತಮ ಸೇವೆಗೈದ ದಕ್ಷಿಣ ಕನ್ನಡ ಜಿಲ್ಲೆಯ 9 ಪಂಚಾಯತ್‌ಗಳ ಪಿಡಿಒಗಳು(ಇವರಲ್ಲಿ ಒಬ್ಬರು ಮೇಲ್ವಿಚಾರಕಿ) ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.

ಅ. 2ರಂದು ಮಂಗಳೂರಿನ ಪುರಭವನದ ಗಾಂಧಿ ಪ್ರತಿಮೆಯ ಬಳಿ ದ.ಕ.ಜಿ.ಪಂ. ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಿಡಿಒ ಉಗ್ಗಪ್ಪ ಮೂಲ್ಯ ಅವರು ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಹಾಗೂ ದ.ಕ.ಜಿ.ಪಂ. ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಆನಂದ್ ಕೆ ಅವರಿಂದ ಪ್ರಶಸ್ತಿ ಸ್ವೀಕರಿಸಿದರು.

ಸಮಾರಂಭದಲ್ಲಿ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 20 ಗ್ರಾಮ ಪಂಚಾಯತ್‌ಗಳಿದ್ದು, ಪಡುಪೆರಾರ ಪಿಡಿಒಗೆ ಲಭಿಸಿರುವ ಏಕೈಕ ಪ್ರಶಸ್ತಿ ಇದಾಗಿದೆ.

ಪಡುಪೆರಾರ ಪಂಚಾಯತ್‌ನಲ್ಲಿ 2021ರಿಂದ ಪಿಡಿಒ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮೂಲ್ಯ ಅವರು, ಈ ಮಧ್ಯೆ ವರ್ಗಗೊಂಡು ಪಡುಮಾರ್ನಾಡಿನಲ್ಲಿ 8 ತಿಂಗಳು ಪಿಡಿಒ ಆಗಿದ್ದರು. ಗ್ರಾಮ ಮಟ್ಟದಲ್ಲಿ ಮೂಲಭೂತ ಸೇವೆಗಳಿಗೆ ಆದ್ಯತೆ ನೀಡಿರುವ ಇವರು, ಗ್ರಾಮದ ಸ್ವಚ್ಛತೆಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಮೊದಲ ಅವಧಿಗೆ ಪಡುಪೆರಾರ ಪಿಡಿಒ ಆಗಿದ್ದಾಗ, ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ರಸ್ತೆಯೊಂದರ ಬದಿಯಲ್ಲಿ ಮನೆ ತ್ಯಾಜ್ಯ ಸುರಿಯುತ್ತಿದ್ದ ಆರೋಪಿಗೆ ಸಾವಿರ ರೂ ದಂಡ ಹೇರಿ, ತ್ಯಾಜ್ಯ ವಿಷಯದಲ್ಲಿ ಇತರ ಪಂಚಾಯತ್ ಆಡಳಿತಗಳು ಕಣ್ಣು ತೆರೆಯುವಂತೆ ಮಾಡಿದ್ದರು. 

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News