ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನೆಂದು ಪ್ರಧಾನಿ ಮೋದಿ ಉತ್ತರಿಸಲಿ: ರಮಾನಾಥ ರೈ

Update: 2024-04-13 09:45 GMT

ಮಂಗಳೂರು, ಎ. 13: ದೇಶದ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ಮಂಗಳೂರಿನಲ್ಲಿ ರೋಡ್ ಶೋ ನಡೆಸಲಿದ್ದು, ದ.ಕ. ಜಿಲ್ಲೆಯಲ್ಲಿ ಬಿಜೆಪಿ ಸಂಸದರ ಕೊಡುಗೆ ಏನು ಎಂಬ ಬಗ್ಗೆ ಉತ್ತರಿಸಬೇಕು ಎಂದು ಮಾಜಿ ಸಚಿವ ರಮನಾಥ ರೈ ಬಿಜೆಪಿ ನಾಯಕರಿಗೆ ಸವಾಲೆಸೆದಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ತಮ್ಮ ಅವಧಿಯಲ್ಲಿ ಅಭಿವೃದ್ಧಿ ವಿಚಾರದಲ್ಲಿ ಯಾವ ಸಾಧನೆ ಮಾಡಿದೆ ಎಂಬುದನ್ನು ಹೇಳಬೇಕು. ಸಾಮಾಜಿಕ ಸಾಮರಸ್ಯಕ್ಕೆ ತೊಂದರೆ ನೀಡುವ ಕೆಲಸ ಜೊತೆ ಅವರಿಗೆ ವೋಟು ಹೇಗೆ ಬರುತ್ತೆ ಅನ್ನುವ ನೆಲೆಯಲ್ಲಿ ಜನರ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾತ್ರ ಬಿಜೆಪಿ ಅವಧಿಯಲ್ಲಿ ಆಗಿದೆ ಎಂದು ಆರೋಪಿಸಿದರು.

ಕಾಂಗ್ರೆಸ್ ಸಂಸದರ ಅವಧಿಯಲ್ಲಿ ಆಗಿರುವ ವಿಮಾನ ನಿಲ್ದಾಣವನ್ನು ಅದಾನಿಗೆ ಮಾರಾಟ ಮಾಡಲಾಗಿದೆ. ಇಲ್ಲಿ ಹುಟ್ಟಿ ಬೆಳೆದ ವಿಜಯ ಬ್ಯಾಂಕ್, ಕಾರ್ಪೊರೇಶನ್ ಬ್ಯಾಂಕ್‌ಗಳು ಎಲ್ಲಿಗೆ ಹೋಗಿವೆ ಎಂಬುದನ್ನೂ ಬಿಜೆಪಿಯವರು ತಿಳಿಸಬೇಕು ಎಂದರು.

ಜಿಲ್ಲೆಯಲ್ಲಿ ಅಭಿವೃದ್ಧಿ ಆಗಿದ್ದು ಕಾಂಗ್ರೆಸ್ ಅವಧಿಯಲ್ಲಿ ಮಾತ್ರ. ಜನ ಮತ್ತೆ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಬೇಕು. ದ.ಕ. ಜಿಲ್ಲೆಯ ಅಭಿವೃದ್ಧಿ ಆಗಿರುವುದು ಬೆನಗಲ್ ಶಿವರಾಯರಿಂದ ಹಿಡಿದು ಜನಾರ್ದನ ಪೂಜಾರಿವರಿಗಿನ ಲೋಕಸಭಾ ಸದಸ್ಯರ ಅವಧಿಯಲ್ಲಿ. ಕಳೆದ ಮೂರು ದಶಕಗಳಿಂದ ಜಿಲ್ಲೆಯ ಅಭಿವೃದ್ಧಿಗೆ ತೊಡಕಾಗಿದ್ದು, ಮತ್ತೆ ಅಭಿವೃದ್ಧಿ ಶಕೆ ನಮ್ಮ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರಿಂದ ಆಗಲಿದೆ ಎಂದು ರಮಾನಾಥ ರೈ ಹೇಳಿದರು.

ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನಿಸುವವರು ಕಳೆದ 10 ವರ್ಷಗಳಲ್ಲಿ ಕೇಂದ್ರದಲ್ಲಿರುವ ಬಿಜೆಪಿ ಏನು ಸಾಧನೆ ಮಾಡಿದೆ ಎಂದು ಹೇಳಲಿ. ಕಪ್ಪು ಹಣ ತರುತ್ತೇವೆ ಎಂದವರು ತಂದಿದ್ದಾರೆಯೇ? ಪ್ರಣಾಳಿಕೆಯಲ್ಲಿ ಘೋಷಿರುವಂತೆ ಉದ್ಯೋಗ ನೀಡಿದಾರೆಯೇ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಯಾವತ್ತೂ ಜನಪರ, ಬಡವರ ಪರ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. ಭೂ ಸುಧಾರಣೆ ಕಾಯ್ದೆಯ ಹೆಚ್ಚು ಫಲಾನುಭವಿಗಳು ದಕ ಜಿಲ್ಲೆಯವರು. 20 ಅಂಶ ಕಾರ್ಯಕ್ರಮ ಸಂಪೂರ್ಣ ಆಗಿ ಅನುಷ್ಟಾನ ಆಗಿರುವುದು ದಕ ಜಿಲ್ಲೆಯಲ್ಲಿ. ಋಣ ಪರಿಹಾರ ಕಾಯ್ದೆ ಮಾಡಿ ವಿವಿಧ ನಿಗಮಗಳ ಮೂಲಕ ನ್ಯಾಯ ಒದಗಿಸುವ ಕಾರ್ಯ, ಬ್ಯಾಂಕ್ ರಾಷ್ಟ್ರೀಕರಣ ಕಾರ್ಯ ಕಾಂಗ್ರೆಸ್‌ನಿಂದ ಆಗಿದೆ. ಆದರೆ ಕೇಂದ್ರವು ರಾಜ್ಯಕ್ಕೆ ನೀಡಬೇಕಾದ ತೆರಿಗೆ ಪಾಲು ನೀಡುತ್ತಿಲ್ಲ. ಬರ ಪರಿಹಾರಕ್ಕೆ ಮುಂದಾಗಿಲ್ಲ ಎಂದವರು ಆರೋಪಿಸಿದರು.

ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ನಿರಾಕರಣೆ ವಿಷಯದಲ್ಲಿ ಪ್ರಧಾನಿಯವರು ಬಯಸಿದ್ದರೆ ಅವಕಾಶ ಸಿಗುತ್ತಿತ್ತು. ಆದರೆ ಆ ಕಾರ್ಯ ಮಾಡದೆ ಇದೀಗ ನಾರಾಯಣ ಗುರುಗಳ ಮೂರ್ತಿಗೆ ಹಾರಾರ್ಪಣೆಗೆ ಮುಂದಾಗಿದ್ದಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಒಂದು ವರ್ಷದಿಂದ ಆಭಿವೃದ್ಧಿ ಆಗಿಲ್ಲ ಎಂದು ಆರೋಪ ಇದೆಯಲ್ಲ ಎಂಬ ಪ್ರಶ್ನೆಗೆ, ಒಂದು ವರ್ಷದಲ್ಲಿ ಸಾಕಷ್ಟು ಕೆಲಸ ಆಗಿದೆ. ಇನ್ನೂ ಅವಕಾಶ ಇದೆ. ಆದರೆ ನಾವು ಜಿಲ್ಲೆಗೆ ಬೆಂಕಿ ಕೊಡುತ್ತೇವೆ ಎಂಬ ಕೋಮು ಪ್ರಚೋದಕ, ಕೊರಗಜ್ಜನಿಗೆ ನ್ಯಾಯ ಕೊಡಿಸುವ ಅತೀ ಬುದ್ದಿವಂತಿಕೆಯ ಮಾತನ್ನು ನಾವು ಆಡಿಲ್ಲ ಎಂದರು.

ಸುದ್ದಿಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಹರೀಶ್ ಕುಮಾರ್, ಇಬ್ರಾಹೀಂ ಕೋಡಿಜಾಲ್, ಅಶ್ರಫ್, ಶಶಿಧರ ಹೆಗ್ಡೆ, ಳಾವೆಚ್ ಪಿಂಟೋ, ವಿನಯರಾಜ್, ಶುಭೋದಯ ಆಳ್ವ, ಹರಿನಾಥ್, ಪ್ರಥ್ವಿರಾಜ್, ನವೀನ್ ಡಿಸೋದಾ, ಅಶೋಕ್ ಡಿ.ಕೆ. ಮೊದಲಾದವರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News