ಪ್ರಧಾನಿ ಮೋದಿ ಹೇಳಿಕೆ ಹುದ್ದೆಯ ಘನತೆಗೆ ವಿರುದ್ಧ: ಅಶ್ವಿನ್ ಕುಮಾರ್ ರೈ

Update: 2024-04-24 07:56 GMT

ಮಂಗಳೂರು, ಎ. 24: ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳಿ ಅಧಿಕಾರ ಪಡೆದುಕೊಂಡಿದ್ದ ದೇಶದ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದ ವೇಳೆ ಸಮಾಜದ ವರ್ಗವೊಂದನ್ನು ನುಸುಳುಕೋರರು, ಹೆಚ್ಚು ಮಕ್ಕಳು ಇರುವವರು ಎಂದು ಹೇಳುವ ಮೂಲಕ ತಮ್ಮ ಹುದ್ದೆಯ ಘನತೆಗೆ ವಿರುದ್ಧವಾಗಿ ಮಾತನಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ, ಎಐಸಿಸಿ ಸಂವಹನ ಸಂಯೋಜಕ (ವಾರ್ರೂಂ) ಅಶ್ವಿನ್ ಕುಮಾರ್ ರೈ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಹುದ್ದೆ ದೇಶದ ಸಮಸ್ತ ಜನರ ಪ್ರತಿನಿಧಿಯದ್ದಾಗಿದೆ. ಆದರೆ ಪ್ರಧಾನಿ ಮೋದಿ ತಮ್ಮ ಹುದ್ದೆಯ ಘನತೆಯನ್ನು ಮರೆತು ರಾಜಸ್ತಾನದಲ್ಲಿ ಚುನಾವಣಾ ರ್ಯಾಲಿಗಳಲ್ಲಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ 2006ರಲ್ಲಿ ನೀಡಿರುವ ಹೇಳಿಕೆಯ ತುಣುಕೊಂದನ್ನು ಹಿಡಿದು ಟ್ರೋಲ್ ಗಳಂತೆ ಪ್ರಧಾನಿಯೊಬ್ಬರು ತಮ್ಮ ಚುನಾವಣಾ ಪ್ರಚಾರದಲ್ಲಿ ಭಾವನಾತ್ಮಕವಾಗಿ ಬಳಕೆ ಮಾಡುವ ಕೃತ್ಯ ಮಾಡುತ್ತಿದ್ದಾರೆ. ಆ ದಿನಗಳಲ್ಲಿ ಬಂದ ವರದಿಯನ್ನು ಆಧರಿಸಿ ಸಂಪತ್ತು ಪರಿಶಿಷ್ಟ ಜಾತಿ- ಪಂಗಡ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಆರ್ಥಿಕವಾಗಿ ಬಡವರಿಗೆ ಹಂಚಿಕೆ ಮಾಡಬೇಕೆಂಬ ಅಭಿಪ್ರಾಯವನ್ನು ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದರು. ಅದರಲ್ಲಿ ಆಯ್ದ ಒಂದು ವಾಕ್ಯ ಎತ್ತಿಕೊಂಡು ಅದು ಕಾಂಗ್ರೆಸ್ ಪ್ರಣಾಳಿಕೆ ಎಂದು ಸುಳ್ಳು ಹೇಳಿ ಜನರಿಗೆ ತಪ್ಪು ಸಂದೇಶ ನೀಡುತ್ತಿರುವುದು ಎಷ್ಟು ಸರಿ? ಎಲ್ಲ ಬಡವರೂ ಆರ್ಥಿಕವಾಗಿ ಸಮಾನತೆಯನ್ನು ಪಡೆಯಬೇಕು ಎಂಬುದು ಗಾಂಧಿ ವಾದ. ಈ ಸಾಮಾಜಿಕ ನ್ಯಾಯ, ಸಮಾಜವಾದ ಬಿಜೆಪಿಗೆ ಬೇಕಿಲ್ಲವೇ ಎಂದವರು ಪ್ರಶ್ನಿಸಿದರು.

ಕಾಂಗ್ರೆಸ್ ನವರು ಮಹಿಳೆಯರ ಮಂಗಳಸೂತ್ರ ಕಿತ್ತು ಹಾಕಲಿದ್ದಾರೆ ಎಂಬ ಪ್ರಧಾನಿ ಹೇಳಿಕೆಯಂತೆ, 60 ವರ್ಷಗಳಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಎಷ್ಟು ಮಹಿಳೆಯರ ಮಂಗಳಸೂತ್ರ ಕಿತ್ತು ನೀಡಿದೆ ಎಂಬುದನ್ನು ಹೇಳಲಿ ಎಂದವರು ಸವಾಲೆಸೆದರು.

ಸುದ್ದಿಗೋಷ್ಠಿಯಲ್ಲಿ ಮಹಾಬಲ ಮಾರ್ಲ, ಶುಭೋದಯ ಆಳ್ವ, ನಝೀರ್ ಬಜಾಲ್ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News