ಪುತ್ತೂರು: ಸಂಘ ಪರಿವಾರದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನ ಹಾಲಿ, ಮಾಜಿ ಶಾಸಕರು ಭಾಗಿ

Update: 2024-10-23 08:29 GMT

ಪುತ್ತೂರು: ವಿಶ್ವ ಹಿಂದೂ ಪರಿಷತ್ ನ ನೂತನ ಜಿಲ್ಲಾ ಕಾರ್ಯಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ಪುತ್ತೂರಿನ ವಿಹಿಂಪ ನಿವೇಶನದಲ್ಲಿ ನಡೆದಿದ್ದು, ಕಾರ್ಯಕ್ರಮದಲ್ಲಿ ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಭಾಗವಹಿಸಿದ್ದರು.

ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಅಶೋಕ್ ರೈಯವರನ್ನು ಸಂಘಟಕರು ಶಾಲು ಹೊದಿಸಿ ಗೌರವಿಸಿದರು.

ಶಾಸಕ ಅಶೋಕ್ ಕುಮಾರ್ ರೈ ಮತ್ತು ಮಾಜಿ ಶಾಸಕ ಶಕುಂತಳಾ ಶೆಟ್ಟಿಯವರು ಕಾಂಗ್ರೆಸ್ ಪಕ್ಷ ಸೇರಿ ಶಾಸಕರಾಗುವ ಮೊದಲು ಬಿಜೆಪಿಯಲ್ಲಿದ್ದರು.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸುಬ್ರಹ್ಮಣ್ಯ ನರಸಿಂಹ ಸಂಪುಟದ ಶ್ರೀ ವಿದ್ಯಾಪ್ರಸನ್ನ ಸ್ವಾಮೀಜಿ ನವರತ್ನ ಮತ್ತು ಅಕ್ಷತೆಯನ್ನು ಸಮರ್ಪಿಸಿ ಕೆಸರು ಕಲ್ಲು ಹಾಕುವ ಮೂಲಕ ನೂತನ ಕಾರ್ಯಾಲಯ ಕಾಮಗಾರಿಗೆ ಚಾಲನೆ ನೀಡಿದರು.

ವಿಹಿಂಪ ದಕ್ಷಿಣ ಪ್ರಾಂತದ ಕಾರ್ಯಾಧ್ಯಕ್ಷ ಎಂ.ಬಿ.ಪುರಾಣಿಕ್, ವಿಹಿಂಪ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ಮತ್ತು ಕರ್ನಾಟಕ ದಕ್ಷಿಣ ಪ್ರಾಂತ ಉಪಾಧ್ಯಕ್ಷ ಯು ಪೂವಪ್ಪ ಸ್ವಾಮೀಜಿ ಜೊತೆ ಕೆಸರುಕಲ್ಲು ಹಾಕುವಲ್ಲಿ ಜೊತೆ ಸೇರಿದರು. ಕಲ್ಲಾರ ಶ್ರೀ ಗುರು ರಾಘವೇಂದ್ರ ಮಠದ ಅರ್ಚಕ ವೇ ಮೂ ರಾಘವೇಂದ್ರ ಉಡುಪ ಭೂಮಿಪೂಜೆ ನೆರವೇರಿಸಿದರು.

ವಿಹಿಂಪ ನ ಶ್ರೀಧರ್ ತೆಂಕಿಲ, ಗ್ರಾಮಾಂತರ ಸಂಚಾಲಕ ರವಿ ಕೈತ್ತಡ್ಕ, ವಿಶಾಖ್ ರೈ, ಭರತ್ ಕುಮುಡೇಲು, ಜನಾರ್ದನ ಬೆಟ್ಟ ಅತಿಥಿಗಳನ್ನು ಗೌರವಿಸಿದರು.

ವಿಹಿಂಪ ಜಿಲ್ಲಾಧ್ಯಕ್ಷರು ಮತ್ತು ಕಟ್ಟಡ ಸಮಿತಿ ಕಾರ್ಯದರ್ಶಿ ಡಾ.ಕೃಷ್ಣಪ್ರಸನ್ನ ಸ್ವಾಗತಿಸಿದರು. ನವೀನ್ ನೆರಿಯ ವಂದಿಸಿದರು. ವಿಹಿಂಪ ಪುತ್ತೂರು ನಗರ ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಶಾಸಕ ಸಂಜೀವ ಮಠಂದೂರು ಮತ್ತಿತರರು ಉಪಸ್ಥಿತರಿದ್ದರು.

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News