ಮಂಗಳೂರು: ಅಪಘಾತದ ಗಾಯಾಳುವನ್ನು ಸ್ಕೂಟರ್ ನಲ್ಲಿ ಆಸ್ಪತ್ರೆಗೆ ದಾಖಲಿಸಿದ ಮಹಿಳಾ ಕಾನ್ ಸ್ಟೇಬಲ್
Update: 2024-10-23 08:36 GMT
ಮಂಗಳೂರು: ನಗರದಲ್ಲಿ ಇಂದು ಮುಂಜಾವ ಸಂಭವಿಸಿದ ರಸ್ತೆ ಅಪಘಾತವೊಂದರಲ್ಲಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೊಬ್ಬರನ್ನು ಮಹಿಳಾ ಕಾನ್ಸ್ ಟೇಬಲ್ ತನ್ನ ಸ್ಕೂಟಿಯಲ್ಲೇ ಆಸ್ಪತ್ರೆಗೆ ದಾಖಲಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.
ಇಂದು ಮುಂಜಾವ ಸುಮಾರು 3:40ರ ಸುಮಾರಿಗೆ ನಗರದ ಕೆಪಿಟಿ ಬಳಿ ಪಿಕ್ ಅಪ್ ವಾಹನ ಮತ್ತು ಕಂಟೈನರ್ ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಕ್ಲೀನರ್ ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ಪಡೆದ ಕದ್ರಿ ಠಾಣೆಯ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಮನ್ಶಿದಾ ಬಾನು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ತನ್ನ ಸ್ಕೂಟಿಯಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ವಿಚಾರವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಕಮಿಷನರೇಟ್ ಅಧಿಕೃತ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕಾನ್ಸ್ಟೇಬಲ್ ಮನ್ಶಿದಾ ಬಾನು ಅವರ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.