ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಪ್ರಕರಣ ದಾಖಲು
ಮಂಗಳೂರು, ಡಿ.23: ಟ್ಯಾಂಕರ್ ವ್ಯವಹಾರಕ್ಕೆ ಸಂಬಂಧಿಸಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಡ್ಯಾರಿನ ಅಶೋಕ್ ಎಂಬಾತ ವಂಚಿಸಿರುವ ಬಗ್ಗೆ ಪ್ರವೀಣ್ ಕುತ್ತಾರ್ ಎಂಬವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.
ತಾನು ಟ್ಯಾಂಕರ್ ವ್ಯವಹಾರದ ಜೊತೆಗೆ ಕುತ್ತಾರಿನಲ್ಲಿ ಹೊಟೇಲ್ ಕೂಡ ನಡೆಸುತ್ತಿರುವೆ. ತನ್ನ ಬ್ಯಾಂಕ್ ವ್ಯವಹಾರ, ಹೊಸ ಟ್ಯಾಂಕರ್ ಖರೀದಿ, ಹಳೆ ಟ್ಯಾಂಕರ್ ಮಾರಾಟ ಇತ್ಯಾದಿ ವ್ಯವಹಾರಗಳನ್ನು ಅಶೋಕ್ ನೋಡಿಕೊಳ್ಳುತ್ತಿದ್ದ. 2 ತಿಂಗಳ ಹಿಂದೆ ತಾನು 9 ಟ್ಯಾಂಕರ್‌ಗಳ ದಾಖಲೆಗಳನ್ನು ಪರಿಶೀಲಿಸಿದಾಗ ಆರೋಪಿ ಅಶೋಕ್ 9 ಟ್ಯಾಂಕರ್‌ಗಳ ಎಲ್ಲ ದಾಖಲೆ ಪತ್ರಗಳನ್ನು ನಕಲಿಯಾಗಿ ಸೃಷ್ಟಿಸಿ ನಕಲಿ ಸಹಿ ಹಾಕಿಸಿಕೊಂಡು ನೈಜ ದಾಖಲೆಗಳೆಂದು ಆರ್‌ಟಿಒ ಕಚೇರಿಗೆ ಹಾಜರುಪಡಿಸಿ ಅವರ ಪತ್ನಿ, ಮಕ್ಕಳು ಮತ್ತು ಸಂಬಂಧಿಕರ ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ. ಅಲ್ಲದೆ ತಣ್ಣೀರುಬಾವಿಯಲ್ಲಿರುವ ನಯಾರಾ ತೈಲ ಕಂಪೆನಿಯಲ್ಲಿ ಪ್ರವೀಣ್ ಹೆಸರಿನಲ್ಲಿದ್ದ ಟ್ರಾನ್ಸ್‌ಪೋರ್ಟ್ ವ್ಯವಹಾರವನ್ನು ನಕಲಿ ಸಹಿ ಹಾಕಿಸಿಕೊಂಡು ಹೆಸರಿಗೆ ವರ್ಗಾಯಿಸಿಕೊಂಡಿದ್ದಾನೆ. ಆರೋಪಿ ಅಶೋಕ್‌ನೊಂದಿಗೆ ನಯಾರ ತೈಲ ಕಂಪೆನಿಯ ಅಧಿಕಾರಿಗಳು ಕೂಡ ಭಾಗಿಯಾಗಿದ್ದಾರೆ ಎಂದು ಪ್ರವೀಣ್ ದೂರಿನಲ್ಲಿ ತಿಳಿಸಿದ್ದಾರೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.