ಸರಕಾರಿ ಶಾಲೆ ಉಳಿಸಲು ದ.ಕ. ಜಿಲ್ಲಾಡಳಿತದಿಂದ ವಿನೂತನ ಹೆಜ್ಜೆ

Update: 2024-12-23 12:55 GMT

ಮಂಗಳೂರು, ಡಿ.23: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಕಾರಿ ಶಾಲೆಗಳನ್ನು ಉಳಿಸುವ ದೃಷ್ಟಿಯಿಂದ ಹೊಸ ಹೆಜ್ಜೆ ಇರಿಸಿರುವ ದ.ಕ. ಜಿಲ್ಲಾಡಳಿತ, ದೇಶದ ವಿವಿಧ ಭಾಗ ಹಾಗೂ ವಿದೇಶಗಳಲ್ಲಿರುವ ಜಿಲ್ಲೆಯವರಿಂದ ಸಹಾಯಹಸ್ತ ಬಯಸುವ ‘ ನಮಗಾಗಿ (ನಿಮ್ಮ ಸಹಾಯ-ನಮ್ಮ ಬೆಳಕಿಗೆ)’ ಎಂಬ ಪೋರ್ಟಲ್ ಆರಂಭಿಸಿದೆ.

ನಗರದ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಈ ವಿಶೇಷ ಯೋಜನೆಯ ಪೋರ್ಟಲನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ದ.ಕ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತ್‌ನ ಈ ಯೋಜನೆಯು ಸರಕಾರಿ ಶಾಲೆಗಳ ಅಭಿವೃದ್ಧಿ ಹಾಗೂ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಕೂಡಿದೆ. ಸರಕಾರಿ ಶಾಲೆಯ ಉಳಿವಿಗಾಗಿ ಸಾರ್ವಜನಿಕರಿಂದ ಸಹಕಾರ ದ ಪೋರ್ಟಲ್ ಇದಾಗಿದ್ದು, ಶಾಲೆಗಳಿಗೆ ಬೆಂಚು, ಡೆಸ್ಕ್, ಟೇಬಲ್, ಕಂಪ್ಯೂಟರ್, ಕ್ಲಾಸ್ ರೂಂ, ಲ್ಯಾಬೋರೇಟರಿ ರೂಂ, ಕಂಪೌಂಡ್ ಹಾಲ್, ಶೌಚಾಲಯ, ಅಡುಗೆ ರೂಮು, ಅಡಿಟೋರಿಯಂ ಕಟ್ಟಡ ಸೇರಿದಂತೆ ಇನ್ನಿತರ ಮೂಲಸೌಕರ್ಯಕ್ಕಾಗಿ https://cf.dakshinakannada.org/ ಪೋರ್ಟಲ್ ಮೂಲಕ ದೇಣಿಗೆ ನೀಡಬಹುದಾಗಿದೆ.

ಪೋರ್ಟಲ್‌ನಲ್ಲಿ ಶಾಲೆಗಳ ಮಾಹಿತಿ

ಪೋರ್ಟಲ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 350ಕ್ಕೂ ಅಧಿಕ ಸರಕಾರಿ ಶಾಲೆಯ ಹೆಸರು ಹಾಗೂ ಮಾಹಿತಿಗಳನ್ನು ಹಾಕಲಾ ಗಿದೆ. ಇವುಗಳಲ್ಲಿ ಯಾವ ಸರಕಾರಿ ಶಾಲೆಗೆ ಯಾವ ಮೂಲ ಸೌಕರ್ಯದ ಅವಶ್ಯಕತೆಯಿದೆ ಎಂಬುವುದರ ಬಗ್ಗೆ ಉಲ್ಲೇಖಿ ಸಲಾಗಿದೆ. ದಾನಿಗಳು ಸಹಾಯ ನೀಡುವ ಶಾಲೆಯ ಬಗ್ಗೆ ಪೋರ್ಟಲ್ ಮೂಲಕ ಸಂಪರ್ಕ ಮಾಡಿದಾಗ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಸಿಗಲಿದೆ. ಆ ಅಧಿಕಾರಿ ಪರಿಶೀಲಿಸಿ ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರ ಮೊಬೈಲ್ ನಂಬರ್‌ನ್ನು ದಾನಿಗಳಿಗೆ ನೀಡುತ್ತಾರೆ. ಅವರು ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಆ ಶಾಲೆಗೆ ಬೇಕಾದ ಸೊತ್ತುಗಳ ಒದಗಿ ಸುವ ವ್ಯವಸ್ಥೆ ಮಾಡಲಿದ್ದಾರೆ.

ನಿಮ್ಮ ಒಂದು ಸಹಾಯವೂ ಕೇವಲ ಕಟ್ಟಡ, ಮೂಲ ಸೌಕರ್ಯ ಮಾತ್ರವಲ್ಲದೆ ಮಕ್ಕಳ ಭವಿಷ್ಯವನ್ನು ಕಟ್ಟಲು ಸಾಧ್ಯವಾ ಗಲಿದೆ. ಈ ಯೋಜನೆ ಸಂಪೂರ್ಣ ಪಾರದರ್ಶಕವಾಗಿದ್ದು, ವೆಬ್‌ಪೋರ್ಟಲ್‌ನಲ್ಲೇ ಸಂಪೂರ್ಣ ಮಾಹಿತಿ ಸಿಗಲಿದೆ. ದಾನಿಗಳು ನೀಡುವ ಒಂದು ಕೊಡುಗೆಯೂ ಮುಂದಿನ ಸುದೃಢ ಸಮಾಜ ನಿರ್ಮಾಣಕ್ಕೆ ಕೊಡುಗೆಯಾಗಲಿದೆ. ಮುಂದಿನ ಪೀಳಿಗೆಗೆ ಪ್ರಗತಿಯನ್ನು ಪ್ರೇರೇಪಿಸುವ ಕೆಲಸ ಈ ಮೂಲಕ ಆಗಲಿದೆ ಎನ್ನುತ್ತಾರೆ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಆನಂದ್. ಪೋರ್ಟಲ್‌ನ್ನು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ. ಈ ಸಂದರ್ಭ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಓ ಡಾ. ಆನಂದ್, ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್, ಪೊಲೀಸ್ ಆಧೀಕ್ಷಕ ಯತೀಶ್ ಉಪಸ್ಥಿತರಿದ್ದರು.

ಸುನೀಲ್ ಶೆಟ್ಟಿ, ಪ್ರಕಾಶ್ ರೈಯಿಂದ ಪ್ರಮೋಶನ್

ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಶಾಲೆಗಳ ಉಳಿವು ಮತ್ತು ಪ್ರೋತ್ಸಾಹದ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಂಡ ಯೋಜನೆಗೆ ಬಾಲಿವುಡ್ ನಟ, ಕರಾವಳಿ ಮೂಲದ ಸುನೀಲ್ ಶೆಟ್ಟಿ ಮತ್ತು ನಟ ಪ್ರಕಾಶ್ ರೈ ಅವರು ಪ್ರಮೋಷನ್ ನೀಡಿದ್ದಾರೆ. ‘ಸರಕಾರಿ ಶಾಲೆಗಳ ಅಭಿವೃದ್ಧಿಗೆ ನಾವು ಸಹಕರಿಸುತ್ತೇವೆ, ನೀವೂ ಕೈಜೋಡಿಸಿ’ ಎಂದು ಜಿಲ್ಲೆಯ ಜನತೆಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News