ಕ್ರಿಸ್ಮಸ್ ಸಂಭ್ರಮಕ್ಕೆ ಕರಾವಳಿ ಸಜ್ಜು

Update: 2024-12-23 15:48 GMT

ಮಂಗಳೂರು, ಡಿ.23: ಕ್ರಿಸ್ಮಸ್ ಸಂಭ್ರಮಕ್ಕೆ ಕರಾವಳಿ ಸಜ್ಜಾಗಿದ್ದು, ಡಿ.24ರಂದು ರಾತ್ರಿ ಕ್ರಿಸ್ಮಸ್ ಸಂಭ್ರಮಾಚರಣೆಗೆ ಚಾಲನೆ ಸಿಗಲಿದೆ. ಬೆತ್ಲೆಹೇಮ್ ನಗರದಲ್ಲಿ ನಡುರಾತ್ರಿಯ ವೇಳೆ ಕ್ರಿಸ್ತರ ಜನನವಾದ ಸನ್ನಿವೇಶವನ್ನು ಸ್ಮರಿಸಿ ಡಿ.24ರ ರಾತ್ರಿ ಜಾಗತಿಕವಾಗಿ ಕ್ರಿಸ್ಮಸ್ ಜಾಗರಣೆ ನಡೆಯಲಿದೆ.

ಸಂಜೆ 7ರಿಂದ ಚರ್ಚ್‌ಗಳಲ್ಲಿ ಕ್ಯಾರೋಲ್ ಗಾಯನ, ವಿಶೇಷ ಬಲಿಪೂಜೆ, ಜಾಗತಿಕ ಶಾಂತಿಗಾಗಿ ಪ್ರಾರ್ಥನೆ ನಡೆಯುತ್ತವೆ. ಬಲಿಪೂಜೆಯ ಬಳಿಕ ಹಬ್ಬದ ಶುಭಾಶಯಗಳನ್ನು ಪರಸ್ಪರ ವಿನಿಮಯ ಮಾಡುವುದರೊಂದಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.

*ಮಂಗಳೂರು ನಗರ ಸಹಿತ ಜಿಲ್ಲೆಯ ಪ್ರಮುಖ ಪಟ್ಟಣ ಪ್ರದೇಶಗಳಲ್ಲಿ ಅಂಗಡಿ, ಬೇಕರಿಗಳ ಮುಂಭಾಗದಲ್ಲಿ ಸೋಮ ವಾರ ಜನಸಂದಣಿ ಹೆಚ್ಚಿತ್ತು. ಮಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಹಲವು ಚರ್ಚ್‌ಗಳಲ್ಲಿ, ಕ್ರೈಸ್ತರ ಮನೆಗಳಲ್ಲಿ ತಯಾರಿಗಳು ಬಿರುಸು ಪಡೆದಿದೆ.

ಹಬ್ಬದ ಹಿನ್ನೆಲೆಯಲ್ಲಿ ನಗರದ ಕೆಥೋಲಿಕ್ ಹಾಗೂ ಪ್ರೊಟೆಸ್ಟೆಂಟ್‌ನ ವಿವಿಧ ಚರ್ಚ್‌ಗಳನ್ನು ವಿದ್ಯುದ್ದೀಪದ ಅಲಂಕಾರ ಮಾಡಲಾಗಿದೆ. ಗೋದಲಿ, ನಕ್ಷತ್ರಗಳೊಂದಿಗೆ ಅಲಂಕರಿಸಲಾಗಿದೆ. ಕೆಥೋಲಿಕ್ ಚರ್ಚ್‌ಗಳಾದ ನಗರದ ರೊಸಾರಿಯೋ ಕ್ಯಾಥೆಡ್ರಲ್, ಮಿಲಾಗ್ರಿಸ್, ಕೊರ್ಡೆಲ್, ಬೆಂದೂರ್‌ವೆಲ್, ಅಶೋಕನಗರ, ಬೊಂದೆಲ್, ವಾಮಂಜೂರು, ಪಾಲ್ದನೆ, ಕುಲಶೇಖರ, ಫಳ್ನೀರ್, ಕಾಸಿಯಾ, ಕೂಳೂರು, ಬಿಜೈ, ಬಜಾಲ್, ಶಕ್ತಿನಗರ, ಬಿಕರ್ನಕಟ್ಟೆ ಸಹಿತ ವಿವಿಧ ಚರ್ಚ್‌ಗಳನ್ನು ವಿದ್ಯುತ್‌ದೀಪಗಳಿಂದ ಅಲಂಕರಿಸಲಾಗಿದೆ. ಪ್ರೊಟೆಸ್ಟೆಂಟ್ ಧರ್ಮಪ್ರಾಂತದ ಬಲ್ಮಠ ಸಿಎಸ್‌ಐ ಶಾಂತಿ ಕ್ಯಾಥೆಡ್ರಲ್, ಹೆಬಿಕ್ ಮೆಮೋರಿಯಲ್ ಚರ್ಚ್ ಗೋರಿಗುಡ್ಡ, ಕಾಂತಿ ಚರ್ಚ್ ಜಪ್ಪು, ಕೋಡಿಕ್ಕಲ್ ಕ್ರಿಸ್ಟ್ ಚರ್ಚ್‌ಗಳು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿವೆ.

ಕ್ರೈಸ್ತರ ಮನೆ, ಚರ್ಚ್‌ಗಳಲ್ಲಿ ಕ್ರಿಸ್ಮಸ್‌ನ ಆಕರ್ಷಕ ಗೋದಲಿ (ಕ್ರಿಬ್)ಗಳನ್ನು ರಚಿಸಲಾಗಿದೆ. ಬಹುತೇಕ ಕ್ರೈಸ್ತರ ಮನೆಗಳ ಮುಂದೆ ಗೋದಲಿಗಳು, ನಕ್ಷತ್ರಗಳು ಕಾಣಲು ಸಿಗುತ್ತಿದೆ. ಮುನ್ನ ದಿನದಂದು ಸಂಪೂರ್ಣವಾಗಿ ಸಿದ್ಧಪಡಿಸಲಾಗಿದೆ. ಅಲಂಕಾರಿಕ ವಸ್ತುಗಳಿಂದ ಜೋಡಿಸಲಾಗಿದೆ.

ಗೋದಲಿ (ಕ್ರಿಬ್‌ಸೆಟ್), ಮನೆ, ಮನೆಯ ಆವರಣ, ಚರ್ಚ್‌ಗಳನ್ನು ಅಲಂಕರಿಸುವ ನಕ್ಷತ್ರಗಳು, ಘಂಟೆ(ಬೆಲ್)ಗಳ ಸಾಲು, ಕ್ರಿಸ್ಮಸ್ ಟ್ರೀ, ಸಾಂತಾಕ್ಲಾಸ್ ವೇಷಭೂಷಣ, ವಿವಿಧ ವಿಗ್ರಹಗಳು, ಕ್ಯಾಂಡಲ್ ಸೆಟ್, ಸ್ಪೆಷಲ್ ಬೆಲ್‌ಗಳು, ಲೈಟಿಂಗ್ಸ್ ಇತ್ಯಾದಿಗಳ ಮಾರಾಟ ಅಧಿಕ ಪ್ರಮಾಣದಲ್ಲಾಗಿವೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News