ನಗರೀಕರಣದಿಂದ ಮಾನವೀಯ ಮೌಲ್ಯಗಳಿಗೆ ಧಕ್ಕೆ: ಪ್ರೊ. ಪಿ.ಎಲ್.ಧರ್ಮ

Update: 2024-10-22 18:43 GMT

ಮಂಗಳೂರು: ನಗರೀಕರಣದಿಂದಾಗಿ ಜನರ ನಡುವೆ ಪರಸ್ಪರ ವಿಶ್ವಾಸ ,ಮಾನವೀಯ ಮೌಲ್ಯಗಳಿಗೆ ಧಕ್ಕೆಯಾಗುತ್ತಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ. ಪಿ.ಎಲ್. ಧರ್ಮ ಹೇಳಿದ್ದಾರೆ.

ನಗರದ ರೋಶನಿ ನಿಲಯದ ಮರಿಯಾ ಪೈವಾ ಸಭಾಂಗಣದಲ್ಲಿ ಮಂಗಳವಾರ ಸ್ಕೂಲ್ ಆಫ್ ಸೋಶಿಯಲ್ ವರ್ಕ್, ಮಂಗಳೂರು ಸಮಾಜಶಾಸ್ತ್ರ - ಅರ್ಥಶಾಸ್ತ್ರ ವೇದಿಕೆ ಮತ್ತು ಮಂಗಳೂರು ಸಮಾಜಶಾಸ್ತ್ರ ಸಂಘ (ಎಂಎಸ್‌ಎ) ಆಶ್ರಯದಲ್ಲಿ ಆರಂಭಗೊಂಡ ‘ಭಾರತದಲ್ಲಿ ಅಂತರ್ಗತ ನಗರೀಕರಣ:ಅಂಚೀಕೃತ ಸಮುದಾಯಗಳ ಸವಾಲುಗಳು ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ನಗರೀಕರಣದಿಂದಾಗಿ ಮಂಗಳೂರಿನಲ್ಲಿ ಭತ್ತದ ಗದ್ದೆಗಳು ಮಾಯವಾಗಿದೆ. ಕೃಷಿ ಭೂಮಿಯು ಪರಿವರ್ತನೆಗೊಂಡು ಕೈಗಾರಿಕೆ, ದೊಡ್ಡ ಕಟ್ಟಡಗಳು ತಲೆ ಎತ್ತಿವೆ. ಇದರಿಂದಾಗಿ ಕಸ ವಿಲೇವಾರಿ, ಡ್ರೈನೇಜ್ ಸೇರಿದಂತೆ ನಗರದಲ್ಲಿ ನಾನಾ ಸಮಸ್ಯೆ ಎದುರಿಸುತ್ತಿದೆ. ಹತ್ತು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರು ದೊರೆಯುತ್ತಿದ್ದ ಬಾವಿಯಲ್ಲಿ ಕೊಳಚೆ ನೀರು ಸೇರಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.

ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವ ನಗರಾಡಳಿತ ಸಂಸ್ಥೆ ಒಳಚರಂಡಿ ವ್ಯವಸ್ಥೆಯ ಕಡೆಗೆ ಗಮನ ನೀಡುತ್ತಿಲ್ಲ. ರಸ್ತೆಯ ಪಕ್ಕದಲ್ಲಿ ನೀರು ಹರಿದು ಹೋಗಲು ಚರಂಡಿಗಳಿಲ್ಲ. ಮಂಗಳೂರು ನಗರದ ಸಮಸ್ಯೆಗಳ ಬಗ್ಗೆ ಸಮಾಜ ಕಾರ್ಯ ವಿದ್ಯಾರ್ಥಿಗಳು ಅಧ್ಯಯನ ನಡೆಸಬೇಕಾಗಿದೆ ಎಂದರು.

ಧಾರವಾಡದ ಕರ್ನಾಟಕ ವಿವಿ ಸಮಾಜಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಡಾ ಸೋಮಶೇಖರಪ್ಪ ಸಿ.ಎ ಅವರು ದಿಕ್ಚೂಚಿ ಭಾಷಣ ಮಾಡಿದರು.

ಮಂಗಳೂರು ಸಮಾಜಶಾಸ್ತ್ರ ಸಂಘದ (ಎಂಎಸ್‌ಎ)ಅಧ್ಯಕ್ಷ ಡಾ ಗಿರಿಧರ್ ರಾವ್, ಕಾರ್ಯದರ್ಶಿ ಡಾ.ಕಿರಣ್ ಪ್ರಸಾದ್ ಬಿ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸರ್ವಿಸಸ್‌ನ ಅಧ್ಯಕ್ಷೆ ವಿದಾ ಸಿಕ್ವೇರಾ, ಉಪಸ್ಥಿತರಿದ್ದರು.

ಸಂತ ಅಲೋಶಿಯಸ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ರಿಚರ್ಡ್ ಪಾಯಸ್ ಸಂಪಾದಕರಾಗಿರುವ ಮಂಗಳೂರು ಸಮಾಜಶಾಸ್ತ್ರ ಸಂಘದ 32ನೇ ಸಂಚಿಕೆ ‘ಸಮಾಜ ಶೋಧನಾ’ವನ್ನು ಪ್ರೊ.ಪಿ.ಎಲ್. ಧರ್ಮ ಬಿಡುಗಡೆಗೊಳಿಸಿದರು.

ಸ್ಕೂಲ್ ಆಫ್ ಸೋಶಿಯಲ್ ವರ್ಕ್‌ನ ಪರೀಕ್ಷಾಂಗ ನಿಯಂತ್ರಕರಾದ ಪ್ರೊ. ಸಿಸಿಲಿಯಾ ಎಫ್ ಗೋವೆಯಸ್ ಮನೋವಿಜ್ಞಾನ ವಿಭಾಗದ ಮುಖ್ಯಸ್ಥೆ ಡಾ.ಸಾಂಡ್ರಾ ಸುನೀತಾ ಲೋಬೊ ಕಾರ್ಯಕ್ರಮ ನಿರೂಪಿಸಿದರು. ಡಾ. ರಾಜೇಂದ್ರ.ಕೆ ವಂದಿಸಿದರು.

24 ಪ್ರಬಂಧಗಳ ಮಂಡನೆ: ಎರಡು ತಾಂತ್ರಿಕ ಗೋಷ್ಠಿಗಳಲ್ಲಿ ವಿಷಯ ತಜ್ಞರು, ಸಂಶೋಧನಾ ವಿದ್ಯಾರ್ಥಿಗಳು, ಸೇರಿದಂತೆ 24 ಮಂದಿ ಪ್ರಬಂಧ ಮಂಡಿಸಿದರು. ಮೊದಲ ಗೋಷ್ಠಿಯ ಅಧ್ಯಕ್ಷತೆಯನ್ನು ಮಂಗಳೂರು ವಿವಿ ಸಮಾಜ ಶಾಸ್ತ್ರ ವಿಭಾಗದ ಪ್ರೊ. ವಿನಯ್ ರಜತ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಂಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ವೈ ರಾಘವೇಂದ್ರ ರಾವ್ ಅಧ್ಯಕ್ಷತೆಯಲ್ಲಿ ಎರಡನೇ ಗೋಷ್ಠಿ ನಡೆಯಿತು. ಎರಡನೇ ಗೋಷ್ಠಿಯಲ್ಲಿ ಅಜ್ಜರಕಾಡು ಜಿ.ಶಂಕರ್ ಜಿಡಬ್ಲ್ಯುಎಫ್‌ಜಿ ಕಾಲೇಜಿನ ಡಾ. ರಾಜೇಂದ್ರ ಕೆ ಮತ್ತು ಮಂಗಳೂರು ವಿವಿ ಕಾಲೇಜಿನ ಡಾ.ಗಾಯತ್ರಿ ಎನ್ ಗೋಷ್ಠಿಗಳನ್ನು ನಿರ್ವಹಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News