ಮುಲ್ಕಿ| ಮನೆಯೊಳಗೆ ಅಡಗಿ ಕುಳಿತ ಚಿರತೆ; ಅರಣ್ಯಾಧಿಕಾರಿಗಳ ಕಾರ್ಯಾಚರಣೆಯಿಂದ ಸೆರೆ

Update: 2024-10-22 15:01 GMT

ಮುಲ್ಕಿ: ನಗರದ ಅಕ್ಕಸಾಲಿಗಾರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಅಡುಗೆ ಕೋಣೆಯೊಳಗೆ ಏಕಾಏಕಿ ಚಿರತೆ ನುಗ್ಗಿದ್ದು ಮೂಡಬಿದ್ರೆ ವಲಯದ ಅರಣ್ಯ ಅಧಿಕಾರಿಗಳ ಸಕಾಲಿಕ ಕಾರ್ಯಾಚರಣೆಯಿಂದ ಚಿರತೆಯನ್ನು ಸೆರೆ ಹಿಡಿಯಲಾಗಿದೆ.

ಮುಲ್ಕಿ ಅಕ್ಕಸಾಲಿಗಾರ ಕೇರಿ ಬಳಿಯ ಸದಾನಂದ ಕೋಟ್ಯಾನ್ ಎಂಬವರ ಮನೆಯ ಎದುರು ಭಾಗದ ಅಡುಗೆ ಕೋಣೆಗೆ ಶನಿವಾರ ರಾತ್ರಿ 9:30 ಸುಮಾರಿಗೆ ಸುಮಾರು ಒಂದು ವರ್ಷ ಪ್ರಾಯದ ಚಿರತೆ ನುಗ್ಗಿದೆ. ಈ ಸಂದರ್ಭ ಸದಾನಂದ ಕೋಟ್ಯಾನ್ ರವರ ನಾಯಿ ಬೊಗಳಲು ಶುರು ಮಾಡಿದ್ದು ಸದಾನಂದ ಕೋಟ್ಯಾನ್ ಚಿರತೆ ನೋಡಿ ಕಂಗಾಲಾಗಿದ್ದಾರೆ.

ಕೂಡಲೇ ಸ್ಥಳೀಯರಾದ ಭಾಸ್ಕರ್ ಕಾಂಚನ್ ಮತ್ತಿತರರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದಾರೆ

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹಿಡಿಯಲು ಮುಂದಾಗಿ ಅಡುಗೆಮನೆಯ ಎದುರು ಬಾಗಿಲಿಗೆ ಮುಂದಾಗಿ ಬೋನ್ ಅಳವಡಿಸಿದ್ದರೂ ಸುಮಾರು ಹೊತ್ತು ಕಳೆದರೂ ಚಿರತೆಯ ಪತ್ತೆ ಇರಲಿಲ್ಲ. ಈ ನಡುವೆ ಚಿರತೆಯನ್ನು ನೋಡಲು ಜನರು ದಂಡು ನೆರೆದಿದ್ದು ಅವರನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿತ್ತು. ಬಳಿಕ ಮಧ್ಯರಾತ್ರಿ ಸುಮಾರು 2:30 ಗಂಟೆಗೆ ಚಿರತೆ ಬೋನ್ ಒಳಗೆ ಬಿದ್ದು ಸೆರೆಯಾಗಿದ್ದು ಸ್ಥಳೀಯರು ನಿಟ್ಟುಸಿರುಪಡುವಂತಾಯಿತು.

ಕಾರ್ಯಾಚರಣೆಯಲ್ಲಿ ಮುಲ್ಕಿ ನ.ಪಂ.ಅಧ್ಯಕ್ಷ ಸತೀಶ್ ಅಂಚನ್, ಸದಸ್ಯರಾದ ಬಾಲಚಂದ್ರ ಕಾಮತ್, ಸುಭಾಷ್ ಶೆಟ್ಟಿ, ಸ್ಥಳೀಯರಾದ ಅಶ್ವತ್ ಮಟ್ಟು, ನಿತಿನ್ ಬಪ್ಪನಾಡು, ಅರಣ್ಯ ಇಲಾಖೆ ಅಧಿಕಾರಿಗಳಾದ ಮಂಜುನಾಥ, ನಾಗೇಶ್ ಬಿಲ್ಲವ, ಬೀಟ್ ಫಾರೆಸ್ಟ್ ನ ಶಂಕರ, ಚಂದ್ರಶೇಖರ್, ಮಿಥುನ್, ಮುಲ್ಕಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಶ್ರಮಿಸಿದರು.

ಮುಲ್ಕಿ ಆಸುಪಾಸಿನಲ್ಲಿ ಇನ್ನಷ್ಟು ಚಿರತೆಗಳು ಇರುವ ಸಾಧ್ಯತೆಯಿದ್ದು ಈ ಬಗ್ಗೆ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರಾದ ಭಾಸ್ಕರ್ ಕಾಂಚನ್ ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News