ಸಿಐಟಿಯು ನೇತೃತ್ವದಲ್ಲಿ ಬೈಕಂಪಾಡಿಯ ಬೀದಿಬದಿ ವ್ಯಾಪಾರಿಗಳಿಂದ ಪ್ರತಿಭಟನೆ

Update: 2024-10-22 18:27 GMT

ಸುರತ್ಕಲ್‌: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ನಿವೇಶನದಲ್ಲಿ ವ್ಯಾಪಾರ ಮಾಡುತ್ತಿದ್ದ ಬಡಬೀದಿ ವ್ಯಾಪಾರಿಗಳ ಮೇಲೆ ಮಂಗಳೂರು ಮಹಾನಗರ ಪಾಲಿಕೆಯ ಸುರತ್ಕಲ್‌ ವಲಯ ಆಯುಕ್ತೆ ವಾಣಿ ಆಳ್ವ ಮತ್ತು ಮನಪಾ ಅಧಿಕಾರಿಗಳು ದಬ್ಬಾಳಿಕೆ ವಿರೋಧಿಸಿ , ಬೀದಿ ಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಎಸಗಿ ತೆರವುಗೊಳಿಸಿರುವುದನ್ನು ಖಂಡಿಸಿ ಸಿಐಟಿಯು ನೇತೃತ್ವದಲ್ಲಿ ಬೈಕಂಪಾಡಿಯ ಸಂತ್ರಸ್ತ ಬೀದಿಬದಿ ವ್ಯಾಪಾರಿಗಳು ಮಂಗಳವಾರ ಬೈಕಂಪಾಡಿಯಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಿಗಳ ಸಂಘದ ಗೌರವಧ್ಯಕ್ಷ ಬಿ.ಕೆ ಇಮ್ತಿಯಾಝ್‌, ಪಟಾಕಿಯ ಅಂಗಡಿಗಳಿಗೆ ಜಾಗ ನೀಡುವ ಸಲುವಾಗಿ ಅನೇಕ ವರ್ಷಗಳಿಂದ ಬೈಕಂಪಾಡಿಯ ಎಪಿಎಂಸಿ ಬಳಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಗುರುತಿನ ಚೀಟಿ ಹೊಂದಿರುವ ವ್ಯಾಪಾರಿಗಳನ್ನು ಏಕಾಏಕಿ ತೆರವು ಗೊಳಿಸಿರುವ ಅಮಾನುಷ, ಅಮಾನವೀಯ, ಕಾನೂನು ಬಾಹಿರ ದಬ್ಬಾಳಿಕೆಯನ್ನು ಖಂಡಿಸುವುದಾಗಿ ಎಂದರು.

ಬಡವರು, ಅನಕ್ಷರಸ್ತ ಬೀದಿಬದಿ ವ್ಯಾಪಾರಿಗಳ ಸಂರಕ್ಷಣಾ ನಿಯಮ, ಕಾಯ್ದೆಗಳು ಜಾರಿಯಲ್ಲಿದ್ದರೂ ವ್ಯಾಪಾರಿಗಳ ಮೇಲೆ ರಕ್ಷಣೆ ನೀಡಬೇಕಿರುವ ಅಧಿಕಾರಿಗಳೇ ಅಮಾನುಷವಾಗಿ ನಡೆದುಕೊಂಡು ದಬ್ಬಾಳಿಕೆ ಮಾಡುತ್ತಿದ್ದಾರೆ. ಸೋಮವಾರ ಮನಪಾ ತೆರವು ಮಾಡಿರುವ ವ್ಯಾಪಾರಿಗಳು ಅಧಿಕೃತ ಗುರುತಿನ ಚೀಟಿ ಹೊಂದಿದವರೇ ಆಗಿದ್ದಾರೆ ಎಂದು ಮನಪಾ ಸುರತ್ಕಲ್‌ವಲಯ ಆಯುಕ್ತೆ ವಾಣಿ ಆಳ್ವ ಅವರಿಗೆ ಮನವರಿಕೆ ಮಾಡಿದರೂ ಅವರು ಕೇಳಲು ತಯಾರಾಗದೇ ವ್ಯಾಪಾರಿಗಳ ಜೊತೆ ಕ್ರೂರ ತೀತಿಯಲ್ಲಿ ವರ್ತಿಸಿದ್ದಾರೆ ಎಂದು ಆರೋಪಿಸಿದರು.

‌ಈ ನಿವೇಶನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ್ದು, ಈ ನಿವೇಶನವನ್ನು ಪಟಾಕಿ ಮಾರಾಟಗಾರರಿಗೆ ಹರಾಜು ಹಾಕಲು ನಿಮಗೆ ನೈತಿಕತೆಯೇ ಇಲ್ಲ. ಆದರೂ ಬಡವರನ್ನು ಬೀದಿಪಾಲು ಮಾಡಿ ಇಂದು ಹರಾಜು ಮಾಡಿದ್ದೀರಿ. ಈ ಭೂಮಿಯ ಅಡಿಯಲ್ಲಿ ಎಂಆರ್‌ಪಿಎಲ್‌, ಬಿಪಿಸಿಎಲ್‌, ಎಚ್‌ಪಿಸಿಎಲ್‌ನ ಗ್ಯಾಸ್‌ ಮತ್ತು ಪೆಟ್ರೋಲ್‌ನ ಪೈಪ್‌ಗಳು ಹಾದು ಹೋಗಿವೆ. ಹೀಗಿರುವಾಗ ಯಾವ ಮಾನದಂಡದಲ್ಲಿ ಇಲ್ಲಿ ಪಟಾಕಿ ಅಂಗಡಿ ತೆರಯಲು ಅವಕಾಶ ನೀಡುತ್ತಿದ್ದೀರಿ ಎಂದು ಪ್ರಶ್ನೆ ಮಾಡಿದ ಇಮ್ತಿಯಾಝ್‌, ಇದು ಅಪಾಯಕಾರಿ ಮತ್ತು ಪಟಾಕಿ ವ್ಯಾಪಾರಕ್ಕೆ ಸುರತಕ್ಷಿತವಲ್ಲದ ಜಾಗ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಬೈಕಂಪಾಡಿಯ ವ್ಯಾಪಾರಿಗಳಷ್ಟೇ ಭಾಗವಹಿಸಿ ಸಾಂಕೇತಿಕವಾಗಿ ಪ್ರತಿಭಟನೆಯನ್ನು ನಡೆಸಿದ್ದೇವೆ. ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ನಿವೇಶನದಲ್ಲಿ ವ್ಯಾಪಾರ ಮಾಡುತ್ತಿದ್ದ ಮನಪಾ ಗುರುತಿಸಿರುವ ಅಧಿಕೃತ ಬೀದಿಬದಿ ವ್ಯಾಪಾರಿಗಳಿಗೆ ಇಲ್ಲಿ ನಿರಂತರ ವ್ಯಾಪಾರಕ್ಕೆ ಅವಕಾಶ ನೀಡಬೇಕು. ಪಾಲಿಕೆ ಭರವಸೆ ನೀಡಿದಂತೆ ಬೀದಿಬದಿ ವ್ಯಾಪಾರಿಗಳ ವಲಯ ನಿರ್ಮಾಣ ಕೊಡುವವರಗೆ ಬೀದಿಬದಿ ವ್ಯಾಪಾರಿಗಳ ಮೇಲೆ ದೌರ್ಜನ್ಯ ಎಸಗಿದರೆ ನೋದಾಯಿತ 667ಮಂದಿ ವ್ಯಾಪಾರಿಗಳು ತಮ್ಮ ಕುಟುಂಬ ಸಮೇತರಾಗಿ ಮಂಗಳುರು ಮತ್ತು ಸುರತ್ಕಲ್‌ ವಲಯ ಕಚೇರಿಯ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಇಮ್ತಿಯಾಝ್‌ ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ದ.ಕ. ಜಿಲ್ಲಾ ಬೀಬಿಬದಿ ವ್ಯಾಪಾರಸ್ಥರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಶ್‌ ಆರ್.‌ ಎಸ್.‌, ಉಪಾಧ್ಯಕ್ಷ ಶಿವಪ್ಪ, ಯಶೋದರ ಬೈಕಂಪಾಡಿ, ಹನೀಫ್‌ ಸುರತ್ಕಲ್‌, ಹರೀಶ್‌ ಬೈಕಂಪಾಡಿ, ನಝರ್‌ ಬೈಕಂಪಾಡಿ ಹಾಗೂ ವ್ಯಾಪಾರಿಗಳು ಉಪಸ್ಥಿತರಿದ್ದರು.

ಎಲ್ಲರೂ ಪಟಾಕಿ ಸಿಡಿಸಿ ದೀಪ ಬೆಳಗಿಸಿ ಸಂಭ್ರಮಿಸಬೇಕಿದ್ದ ದೀಪಾವಳಿ ಹಬ್ಬವನ್ನು ಬೀದಿಬದಿ ವ್ಯಾಪಾರಿಗಳು ಕತ್ತಲೆಯಲ್ಲಿ ಆಚರಿಸುವಂತೆ ಸುರತ್ಕಲ್‌ ಉಪ ಆಯುಕ್ತರು ಮತ್ತು ಮನಪಾ ಅಧಿಕಾರಿಗಳು ಮಾಡುತ್ತಿದ್ದಾರೆ. ಪಟಾಕಿ ಮಾರಾಟ ಮಾಡುವುದುಕ್ಕೆ ನಮ್ಮ ವಿರೋಧವಿಲ್ಲ. ಅದಕ್ಕಾಗಿ ಬಡ ಬೀದಿಬದಿಯ ವ್ಯಾಪಾರಿಗಳ ಮೇಲೆ ದೌರ್ಜನ್ಯ ಎಸಗಿ ಅವರ ಹೊಟ್ಟೆಗೆ ಹೊಡೆಯುತ್ತಿರುವುದಕ್ಕೆ ನಮ್ಮ ವಿರೋಧವಿದೆ. ಮನಪಾ ಸ್ಪಷ್ಟವಾಗಿ ಕಾನೂನುಗಳನ್ನು ಉಲ್ಲಂಘಿಸಿ ಪಟಾಕಿ ವ್ಯಾಪಾರಕ್ಕೆ ಅವಕಾಶ ನೀಡುತ್ತಿರುವುದನ್ನು ಖಂಡಿಸುತ್ತೇವೆ.

- ಬಿ.ಕೆ. ಇಮ್ತಿಯಾಝ್‌, ಗೌರವಾಧ್ಯಕ್ಷರು, ದ.ಕ. ಜಿಲ್ಲಾ ಬೀಬಿಬದಿ ವ್ಯಾಪಾರಸ್ಥರ ಸಂಘ

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News