ಪುತ್ತೂರು : ಹಣದ ಬೇಡಿಕೆಯಿಟ್ಟು ಕೊಲೆ ಬೆದರಿಕೆ; ಪ್ರಕರಣ ದಾಖಲು

Update: 2023-10-09 17:49 GMT

ಪುತ್ತೂರು : ಪುತ್ತೂರಿನ ವಕೀಲರೊಬ್ಬರ ಮೊಬೈಲಿಗೆ ತಾನು ಭೂಗತ ಲೋಕದ ಪಾತಕಿ ಎಂದು ಪರಿಚಯಿಸಿಕೊಂಡು ದುಬೈನಿಂದ ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ಕಳುಹಿಸಿ ಕೊಡುವ ರೌಡಿ ಗ್ಯಾಂಗಿನ ಸದಸ್ಯರಲ್ಲಿ  25 ಲಕ್ಷ ರೂ. ನೀಡುವಂತೆ ಇಲ್ಲದಿದ್ದರೆ ಕೊಲೆ ಮಾಡಲು ಬಾಸ್ ಆದೇಶ ನೀಡಿದ್ದಾರೆ ಎಂದು ಬೆದರಿಕೆಯೊಡ್ಡಿದ ಘಟನೆ ನಡೆದಿದ್ದು, ಈ ಕುರಿತು ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪುತ್ತೂರಿನ ನಗರದ ಪುತ್ತೂರು ಸೆಂಟರ್ ಕಟ್ಟಡದಲ್ಲಿ ಕಚೇರಿ ಹೊಂದಿ ವಕೀಲರಾಗಿ ಕೆಲಸ ಮಾಡುತ್ತಿರುವ ಪ್ರಶಾಂತ್ ಪಿ. ರೈ ಎಂಬವರಿಗೆ ತಾನು ಭೂಗತ ಲೋಕದ ಪಾತಕಿ ಜಗ್ಗು ಶೆಟ್ಟಿ ಯಾನೆ ಜಗದೀಶ್ ಶೆಟ್ಟಿ ಎಂದು ಹೇಳಿ ದುಬೈನಿಂದ ಕರೆ ಮಾಡಿದ ವ್ಯಕ್ತಿ ಕೊಲೆ ಬೆದರಿಕೆಯೊಡ್ಡಿರುವುದಾಗಿ ಆರೋಪಿಸಲಾಗಿದೆ.

ಕಳೆದ ಮೇ.2ರಂದು ರಾತ್ರಿ ತನ್ನ ಮೊಬೈಲಿಗೆ ಕರೆ ಮಾಡಿದ್ದ ವ್ಯಕ್ತಿ ತನ್ನನ್ನು ಭೂಗತ ಲೋಕದ ಪಾತಕಿ ಜಗ್ಗು ಶೆಟ್ಟಿ ಯಾನೆ ಜಗದೀಶ್ ಶೆಟ್ಟಿ ಎಂದು ಪರಿಚಯಿಸಿಕೊಂಡು, ನೀನು ಪುತ್ತೂರಿನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿ ತುಂಬಾ ಹಣ ಗಳಿಸಿದ್ದಿಯ. ಆ ಹಣದಿಂದ ಜಮೀನು, ಕಟ್ಟಡಗಳು ಹಾಗೂ ಸ್ವತ್ತುಗಳನ್ನು ಹೊಂದಿದ್ದಿಯ ಎಂದು ಪ್ರಶ್ನಿಸಿದ್ದ. ಈ ವಿಚಾರ ನಿನಗ್ಯಾಕೆ ಎಂದು ಪ್ರಶ್ನಿಸಿದಾಗ ಆತ ಬೆದರಿಕೆಯೊಡ್ಡಿ ನನಗೆ ರೂ.25 ಲಕ್ಷ ಹಣವನ್ನು ನಾನು ಕಳುಹಿಸಿಕೊಡುವ ರೌಡಿ ಗ್ಯಾಂಗಿನ ಸದಸ್ಯರಲ್ಲಿ ನೀಡಬೇಕು ಎಂದು ಬೆದರಿಕೆಯೊಡ್ಡಿದ್ದ.

ಈ ಬೆದರಿಕೆ ಕರೆಯನ್ನು ತಾನು ನಿರ್ಲಕ್ಷಿಸಿದ್ದೆ. ಆದರೆ ಆ ಬಳಿಕ ಜುಲೈ6ರಂದು ಸಂಜೆ ತಾನು ತನ್ನಿಬ್ಬರು ಕಕ್ಷಿದಾರ ರೊಂದಿಗೆ ನ್ಯಾಯಾಲಯದ ಕಡೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಳಿಗೆ ಬಂದು ತಮ್ಮನ್ನು ಬಾಸ್ ಜಗ್ಗು ಶೆಟ್ಟಿ ಅವರು ಕಳುಹಿಸಿಕೊಟ್ಟಿದ್ದಾರೆ. ನಮ್ಮಲ್ಲಿ ರೂ.25 ಲಕ್ಷ ಹಣ ನೀಡಬೇಕು. ತಪ್ಪಿದಲ್ಲಿ ನಿಮ್ಮನ್ನು ಕೊಲೆ ಮಾಡಲು ಬಾಸ್ ಆದೇಶ ನೀಡಿದ್ದಾರೆ ಎಂದು ಬೆದರಿಕೆಯೊಡ್ಡಿ ಅಲ್ಲಿಂದ ಕಣ್ಮರೆಯಾಗಿದ್ದಾರೆ. ಆಗಸ್ಟ್ ತಿಂಗಳಲ್ಲಿಯೂ ಕೆಲವು ಅನುಮಾನಾಸ್ಪದ ವ್ಯಕ್ತಿಗಳು ತನ್ನ ಕಚೇರಿ ಬಳಿ ಸುತ್ತಾಡುವುದು ಕಂಡು ಬಂದಿದೆ ಎಂದು ವಕೀಲ ಪ್ರಶಾಂತ್ ರೈ ಅವರು ಪುತ್ತೂರು ನ್ಯಾಯಾಲಯಕ್ಕೆ ನೀಡಿದ ಖಾಸಗಿ ದೂರಿನಲ್ಲಿ ಆರೋಪಿಸಿದ್ದಾರೆ.

ಇದೀಗ ನ್ಯಾಯಾಲಯದ ಆದೇಶದಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News