ಪುತ್ತೂರು: ನ.17ರಂದು ಜಮಾಅತೆ ಇಸ್ಲಾಮೀ ಹಿಂದ್ ಸೀರತ್ ಅಭಿಯಾನ ಸಮಾರೋಪ

Update: 2023-10-13 13:04 GMT

ಪುತ್ತೂರು: ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ಮಾಸದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ಪ್ರತೀ ವರ್ಷ ಸೀರತ್ ಅಭಿಯಾನ ನಡೆಸಲಾಗುತ್ತಿದ್ದು, ಈ ವರ್ಷವೂ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸೀರತ್ ಅಭಿಯಾನ ನಡೆಯುತ್ತಿದೆ. ನವೆಂಬರ್ 17ರಂದು ಸಂಜೆ ಪುತ್ತೂರು ಪುರಭವನದಲ್ಲಿ ಅಭಿಯಾನದ ಸಮಾರೋಪ ನಡೆಯಲಿದೆ ಎಂದು ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯ ಉಪ ಸಂಚಾಲಕ ಅಮೀನ್ ಹಸನ್ ಮತ್ತು ಸನ್ಮಾರ್ಗ ಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ ತಿಳಿಸಿದ್ದಾರೆ.

ಅವರು ಶುಕ್ರವಾರ ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ ನಗರದ ಅಶ್ಮಿ ಕಂಫರ್ಟ್ ಸಭಾಂಗಣದಲ್ಲಿ ನಡೆದ ಪತ್ರಕರ್ತರೊಂದಿಗೆ ವಿಚಾರ ವಿನಿಮಯ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದರು.

ನ.17ರಂದು ಸಂಜೆ 6.30ರಿಂದ ರಾತ್ರಿ 8.30ರ ತನಕ ನಡೆಯುವ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ್, ಸ್ವಾಮಿ ವಿವೇಕಾನಂದ, ಬ್ರಹ್ಮಶ್ರೀ ನಾರಾಯಣ ಗುರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಮುಂತಾದ ಮಾನವತಾವಾದಿಗಳ ಆದರ್ಶ, ಚಿಂತನೆಗಳ ಬಗ್ಗೆ ಆಯಾ ವರ್ಗದ ವಿದ್ವಾಂಸರು ಉಪನ್ಯಾಸ ನೀಡಲಿದ್ದಾರೆ. ಸುಮಾರು 800ರಿಂದ 1 ಸಾವಿರದಷ್ಟು ಆಸಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಖುರ್ಆ‌ನ್ ಸಂದೇಶದ ಸಾರವನ್ನು ಜಾತಿ, ಮತ ಬೇಧವಿಲ್ಲದೆ ಎಲ್ಲಾ ಕನ್ನಡಿಗರೂ ಸುಲಭವಾಗಿ ಅರಿತುಕೊಳ್ಳಬೇಕು ಎಂಬ ನಿಟ್ಟಿನಲ್ಲಿ ಪವಿತ್ರ ಖುರ್‍ಆನ್ ಗ್ರಂಥವನ್ನು ಅರೇಬಿಕ್ ಭಾಷೆಯಿಂದ ಕನ್ನಡಕ್ಕೆ ತರ್ಜುಮೆ ಮಾಡುವ ಕಾರ್ಯ ಕಳೆದ 50 ವರ್ಷಗಳಿಂದ ನಡೆಸಲಾಗುತ್ತಿದೆ ಎಂದರು.

ಜಮಾಅತೆ ಇಸ್ಲಾಮೀ ಹಿಂದ್ ವತಿಯಿಂದ `ಸಮಾನತೆಯ ಸಮಾಜ ಶಿಲ್ಪಿ ಅಭಿಯಾನ' ಎಂಬ ಹೆಸರಿನಲ್ಲಿ ಈ ಅಭಿಯಾನ ನಡೆಯುತ್ತಿದೆ. ಅಭಿಯಾನದಲ್ಲಿ ಪ್ರವಾದಿ ಪೈಗಂಬರರ ಜೀವನ ಸಂದೇಶವನ್ನು ಜನ ಮಾನಸದಲ್ಲಿ ಬಿತ್ತುವುದರ ಜೊತೆಗೆ ಸರ್ವ ಧರ್ಮಗಳ ಸಾಮರಸ್ಯ ಸಂದೇಶ ಮೂಡಿಸುವುದು. ಸಮಾನತೆಯ ಸಮಾಜ ನಿರ್ಮಾಣದ ಚಿಂತನೆ ಮೂಡಿಸು ವುದು ಈ ಅಭಿಯಾನದ ಉದ್ದೇಶವಾಗಿದೆ. ಪ್ರವಾದಿಯವರು ಸಮಾನತೆಯನ್ನು ಸಮಾಜದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿದ್ದರು ಮುಂದೆ ಜಾಗತಿಕವಾಗಿ ಅದು ಇರುವಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದರು. ಪ್ರವಾದಿ ಪೈಗಂಬರರ ಕಾಲದಲ್ಲಿ ಅಸಮಾನತೆಯ ಸ್ವರೂಪ ಬಹಳವಾಗಿತ್ತು. ತನ್ನ ಪ್ರವಾದಿತ್ವದ ಅವಧಿಯ 23 ವರ್ಷಗಳಲ್ಲಿ ಅದನ್ನು ಬದಲಾಯಿಸಿ ಸಮಾನತೆಯನ್ನು ಸಾಧಿಸುವ ಕಾರ್ಯ ಮಾಡಿದ್ದರು ಎಂದರು.

ಮುಸ್ಲಿಮರಲ್ಲಿ ದೇಶಪ್ರೇಮವಿಲ್ಲ ಎಂಬ ಅಪಪ್ರಚಾರವೊಂದು ನಡೆಯುತ್ತಿದೆ. ಇದರಲ್ಲಿ ಎಳ್ಳಿನಷ್ಟೂ ಸತ್ಯಾಂಶವಿಲ್ಲ. ಭಾರತದಲ್ಲಿ ಹುಟ್ಟಿ, ಇಲ್ಲಿನ ನೆಲ, ಜಲ, ಗಾಳಿಯಿಂದಾಗಿ ಬದುಕುತ್ತಿರುವ ನಾವು ಈ ತಾಯಿ ನೆಲವನ್ನು ಅಪಾರವಾಗಿ ಪ್ರೀತಿಸುತ್ತೇವೆ. ಮುಸ್ಲಿಮ್ ಸಮಾಜದ ಬಗ್ಗೆ ಅನೇಕ ರೀತಿಯ ಅಪನಂಬಿಕೆಗಳನ್ನು ಹುಟ್ಟು ಹಾಕಲಾಗಿದೆ. ಇದನ್ನು ಇಲ್ಲವಾಗಿಸುವ ಅಗತ್ಯವಿದೆ. ದೇಶನಿಷ್ಠೆ ಇಸ್ಲಾಮಿನ ಭಾಗವಾಗಿದೆ. ಹಿಂದೂಗಳಿಗೆ ಕಾಶಿ ಹೇಗೆ ಪವಿತ್ರ ಕ್ಷೇತ್ರವೋ ಹಾಗೆಯೇ ಮಕ್ಕಾ ಮುಸ್ಲಿಮರಿಗೆ ಪವಿತ್ರ ಕ್ಷೇತ್ರ. ಆ ಕಾರಣಕ್ಕೆ ನಾವು ಮಕ್ಕಾ ಮೇಲೆ ಗೌರವ ಇಟ್ಟಿದ್ದೇವೆ. ನಮ್ಮ ಹಿರಿಯರೆಲ್ಲರೂ ಭಾರತೀಯರು. ನಾವು ಮುಸ್ಲಿಮರಾದರೂ ಇನ್ನೊಂದು ಮುಸ್ಲಿಮ್ ದೇಶಕ್ಕೆ ಹೋಗಲು ನಮಗೆ ಪಾಸ್‍ಪೋರ್ಟ್ ಇಲ್ಲದೆ ಅವಕಾಶ ನೀಡುವುದಿಲ್ಲ. ಜಗತ್ತಿನಲ್ಲಿ ನಾವು ಭಾರತೀಯರೆಂದೇ ಕರೆಸಿಕೊಳ್ಳುತ್ತೇವೆ. ಧರ್ಮ ಜಿಜ್ಞಾಸೆ ಉಂಟಾದಾಗ ಧಾರ್ಮಿಕ ಪಂಡಿತರ ಮಾತುಗಳನ್ನು ಆಲಿಸಬೇಕು. ಸಮಾನತೆ, ವಿಧವಾ ವಿವಾಹ, ಮಹಿಳಾ ಸಮಾನತೆ, ಮದ್ಯಸೇವನೆ ರಹಿತ ಸಮಾಜ ಇವೆಲ್ಲವೂ ಪ್ರವಾದಿಯವರ ಸಂದೇಶಗಳಾಗಿವೆ. ಪ್ರವಾದಿಯಾದ ಬಳಿಕದ 23 ವರ್ಷದಲ್ಲಿ ಅವರು ದೇವ ಮತ್ತು ಪರಲೋಕದ ಸಂಬಂಧದ ವಿಚಾರ ಮುಂದಿಟ್ಟುಕೊಂಡು ಸಮಾನತೆಯ ಸಮಾಜವನ್ನು ಕಟ್ಟಿದ್ದರು ಎಂದರು.

ಇಸ್ಲಾಮ್‍ನ ನೈಜ ಸಂದೇಶವನ್ನು ಪಾಲಿಸುವುದು, ಅಲ್ಲಾಹನ ಆರಾಧನೆ ಮತ್ತು ಪ್ರವಾದಿ ಅನುಸರಣೆ ಜಮಾಅತೆ ಇಸ್ಲಾಮೀ ಹಿಂದ್ ಸಂಘಟನೆಯ ಧ್ಯೇಯವಾಗಿದೆ. ಈ ಸಂಘಟನೆಯ ಅಡಿಯಲ್ಲಿ ಶಾಂತಿ ಪ್ರಕಾಶನ ಸಂಸ್ಥೆ ಕಾರ್ಯಾ ಚರಿಸುತ್ತಿದೆ. ಶಾಂತಿ ಪ್ರಕಾಶನವು ಪ್ರವಾದಿ ಜೀವನ ಸಂದೇಶದ ಸಾಹಿತ್ಯಗಳನ್ನು ಬಿತ್ತರಿಸುತ್ತಿದೆ. ಈ ವರ್ಷದ ಅಭಿಯಾನದಲ್ಲಿ ಯೋಗೇಶ್ ಮಾಸ್ಟರ್ ಅವರ `ನನ್ನ ಅರಿವಿನ ಪ್ರವಾದಿ' ಎಂಬ ಕೃತಿಯನ್ನು ಹಂಚಲಾಗುತ್ತಿದೆ ಎಂದು ಜಮಾಅತೇ ಇಸ್ಲಾಮೀ ಹಿಂದ್ ಪುತ್ತೂರು ತಾಲೂಕು ಕಾರ್ಯದರ್ಶಿ ರಿಯಾಝ್ ಹಾರೂನ್ ತಿಳಿಸಿದರು.

ಜಮಾಅತೇ ಇಸ್ಲಾಮೀ ಹಿಂದ್ ಉಪ್ಪಿನಂಗಡಿ ಶಾಖೆಯ ಅಧ್ಯಕ್ಷ ಅಬ್ದುಲ್ ಹಸೀಬ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News