ರಾಹುಲ್ ಗಾಂಧಿ ಹಿಂದೂ ಧರ್ಮದ ಘನತೆ ಎತ್ತಿಹಿಡಿದಿದ್ದಾರೆ: ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ
ಮಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಸಂಸತ್ತಿನಲ್ಲಿ ಮಾಡಿದ ಭಾಷಣವನ್ನು ಖ್ಯಾತ ಸಾಹಿತಿಗಳು, ಚಿಂತಕರು ದೇಶದ ಸಂವಿಧಾನದಲ್ಲಿ ನಂಬಿಕೆಯಿಟ್ಟಿರುವ ಪ್ರತಿಯೊಬ್ಬರೂ ಕೊಂಡಾಡಿದ್ದಾರೆ. ಜ್ಯೋತಿರ್ಮಠದ 46ನೇ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಕೂಡಾ ರಾಹುಲ್‌ರ ಭಾಷಣವನ್ನು ಬೆಂಬಲಿಸಿದ್ದಾರೆ. ಬಿಜೆಪಿಯವರು ಹೇಳುವಂತೆ ರಾಹುಲ್‌ರ ಭಾಷಣ ಹಿಂದೂ ಧರ್ಮದ ವಿರುದ್ಧವಾಗಿಲ್ಲ ಎಂದು ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಪ್ರತಿಪಾದಿಸಿದ್ದಾರೆ.
ಹಿಂದೂ ಧರ್ಮದಲ್ಲಿ ದ್ವೇಷ ಮತ್ತು ಹಿಂಸೆಗೆ ಆಸ್ಪದವಿಲ್ಲ. ಹಿಂದೂ ಧರ್ಮ ಪ್ರೀತಿ, ಸ್ನೇಹ, ಸೌಹಾರ್ದ ಮತ್ತು ಪರಸ್ಪರ ಅನ್ಯೋನ್ಯತೆಯನ್ನು ಬೋಧಿಸುತ್ತದೆ. ಬಿಜೆಪಿಯರು ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಸ್ವಾರ್ಥಕ್ಕಾಗಿ ಧರ್ಮವನ್ನು ಬಳಸಿ ಹಿಂದೂ ಧರ್ಮಕ್ಕೆ ಅಪಚಾರ ಮಾಡುತ್ತಿದ್ದಾರೆ. ದ್ವೇಷದ ರಾಜಕೀಯದ ಮೂಲಕ ಜನರನ್ನು ವಿಭಜಿಸುತ್ತಿದ್ದಾರೆ. ಇದರಿಂದಾಗಿ ಇಡೀ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂಬುದಾಗಿ ರಾಹುಲ್ ಗಾಂಧಿ ಪ್ರಬುದ್ಧತೆಯ ಮಾತುಗಳನ್ನಾಡಿದ್ದಾರೆ ಎಂದು ವಿಜಯ ಕುಮಾರ್ ಶೆಟ್ಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಗರು ರಾಹುಲ್ ಗಾಂಧಿಯ ಜನಪ್ರಿಯತೆಯನ್ನು ಕುಗ್ಗಿಸಲು ಹಸಿ ಸುಳ್ಳುಗಳ ಮೂಲಕ ಅಪಪ್ರಚಾರ ಮಾಡುತ್ತಿರುವುದು ನಾಚಿಕೆಗೇಡು. ಇದನ್ನು ಎಲ್ಲರೂ ಖಂಡಿಸಬೇಕಾಗಿದೆ. ರಾಹುಲ್ ಗಾಂಧಿ ಹಿಂದೂ ಧರ್ಮದ ಘನತೆಯನ್ನು ವಿಶ್ವ ಮಟ್ಟದಲ್ಲಿ ಹೆಚ್ಚಿಸಿದ್ದಾರೆ ಎಂದು ತಿಳಿಸಿದ್ದಾರೆ.