ಮನಪಾ ವ್ಯಾಪ್ತಿಯಲ್ಲಿ ಮಳೆ ಹಾನಿ: ಪಾಲಿಕೆ ಸದಸ್ಯರಿಂದ ಮಾಹಿತಿ ಪಡೆದು ವರದಿ ಸಲ್ಲಿಸಲು ನಿರ್ಧಾರ
ಮಂಗಳೂರು, ಜು. 28: ಮಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಮಳೆಹಾನಿ ಬಗ್ಗೆ ಅಧಿಕಾರಿಗಳು ಇನ್ನೂ ಸದಸ್ಯರಿಂದ ಮಾಹಿತಿ ಪಡೆಯದಿರುವ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿ ಸಂಗ್ರಹಿಸಿ ವರದಿ ತಯಾರಿಸಿ ಜಿಲ್ಲಾಡಳಿತಕ್ಕೆ ನೀಡಲು ಪಾಲಿಕೆ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಿರ್ಧರಿಸಲಾಯಿತು.
ಮೇಯರ್ ಜಯಾನಂದ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಪಕ್ಷ ನಾಯಕ ನವೀನ್ ಡಿಸೋಜಾ ಅವರು ವಿಷಯ ಪ್ರಸ್ತಾಪಿಸಿ, ಪ್ರತಿ ವರ್ಷ ಮಳೆ ಹಾನಿ ಬಗ್ಗೆ ಇಂಜಿನಿಯರ್‌ಗಳು ಆಯಾ ಸದಸ್ಯರಿಂದ ಮಾಹಿತಿ ಪಡೆದು ಪಟ್ಟಿ ಮಾಡುತ್ತಾರೆ. ಆದರೆ ಈ ಬಾರಿ ಯಾರೂ ಮಾಹಿತಿಯನ್ನೇ ಕೇಳಿಲ್ಲ ಎಂದರು.
ಈಗಾಗಲೇ ಪಾಲಿಕೆ ವ್ಯಾಪ್ತಿಯಲ್ಲಿ 9.4 ಕಿ.ಮೀ. ರಸ್ತೆ ಮಳೆಯಿಂದ ಹಾನಿಯಾಗಿರುವುದಾಗಿ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿರುವುದಾಗಿ ಹಿರಿಯ ಅಧಿಕಾರಿ ನರೇಶ್ ಶೆಣೈ ಸಭೆಯಲ್ಲಿ ಉತ್ತರಿಸಿದಾಗ, ನಮ್ಮ ವಾರ್ಡ್‌ನ ಮಳೆ ಹಾನಿ ಬಗ್ಗೆ ನನ್ನಿಂದ ಮಾಹಿತಿಯೇ ಪಡೆದಿಲ್ಲ ಎಂದು ನವೀನ್ ಡಿಸೋಜಾ ಅಸಮಾಧಾನ ವ್ಯಕ್ತಪಡಿಸಿದರು.
ವಿಪಕ್ಷ ನಾಯಕರು ಮಳೆ ಹಾನಿಗೆ ಪರಿಹಾರ ಒದಗಿಸಲು ಆಸಕ್ತರಾಗಿದ್ದಾರೆ. ಅವರದ್ದೇ ಸರಕಾರ ರಾಜ್ಯದಲ್ಲಿ ಇರುವುದರಿಂದ ಹಣ ಬಿಡುಗಡೆಯಾಗಲಿದೆ ಎಂದು ಸದಸ್ಯ ಸುಧೀರ್ ಶೆಟ್ಟಿ ಕಣ್ಣೂರು ನಗೆ ಚಟಾಕಿ ಹಾರಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ನವೀನ್ ಡಿಸೋಜಾ, ಕಳೆದ ಬಾರಿ ಪಟ್ಟಿ ಮಾಡಿ ಸರಕಾರಕ್ಕೆ ಸಲ್ಲಿಸಲಾಗಿತ್ತು. ಆದರೆ ಹಣ ಬಿಡುಗಡೆ ಮಾಡಿಸಿಲ್ಲ ಎಂದು ಪ್ರತಿಯಾಗಿ ಮಾತಿನ ಎದಿರೇಟು ನೀಡಿದರು.
ರಸ್ತೆ, ತಡೆಗೋಡೆಗಳಿಗೆ ಹಾನಿ, ಸೇತುವೆ, ಮೋರಿ, ಒಳಚರಂಡಿಗಳಿಗೆ ಮಳೆಯಿಂದ ಹಾನಿಯಾಗಿದ್ದಲ್ಲಿ ಸದಸ್ಯರಿಂದ ಇಂಜಿನಿಯರ್‌ಗಳು ಮಾಹಿತಿ ಸಂಗ್ರಹಿಸಿ ವರದಿಯನ್ನು ಸಲ್ಲಿಸುವುದಾಗಿ ಪಾಲಿಕೆಯ ಹಿರಿಯ ಅಧಿಕಾರಿ ನರೇಶ್ ಶೆಣೈ ಉತ್ತರಿಸಿದರು.
ಹಣ ನೀಡಲು ಮೂಡ ನಿರಾಕರಣೆ!
ನಗರದ ಸರ್ವಿಸ್ ಬಸ್ ನಿಲ್ದಾಣ ಅಭಿವೃದ್ಧಿಗೆ ಸಂಬಂಧಿಸಿ ಈ ಹಿಂದೆ ನಡೆದಿದ್ದ ಸಭಾ ನಡವಳಿಯಂತೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡ) ತನ್ನ ಪಾಲಿನ 1 ಕೋಟಿ ರೂ. ಹಣವನ್ನು ನೀಡಲು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ ಪಾಲಿಕೆಯ ಸಾಮಾನ್ಯ ನಿಧಿಯಿಂದ ಭರಿಸಲು ಪರಿಷತ್ತಿನ ಮಂಜೂರಾತಿಯೊಂದಿಗೆ ಅನುಮೋದನೆ ನೀಡಲಾಯಿತು.
ಸರ್ವಿಸ್ ಬಸ್ ನಿಲ್ದಾಣ ಅಭಿವೃದ್ಧಿಗಾಗಿ 2022ರ ಜನವರಿ 1ರಂದು ಜಿಲ್ಲಾಧಿಕಾರಿ ಅದ್ಯಕ್ಷತೆಯಲ್ಲಿ ಜರಗಿದ ಸ್ಮಾರ್ಟ್‌ಸಿಟಿ ಆಡ್ವೈಸರಿ ಫಾರಂ ಸಭೆಯಲ್ಲಿ 15ನೆ ಹಣಕಾಸು ಅಡಿ 1 ಕೋಟಿ ರೂ., ಸ್ಮಾರ್ಟ್ ಸಮಿಟಿಯಿಂದ 2.20 ಕೋಟಿ ರೂ. ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 1 ಕೋಟಿ ಸೇರಿ ಒಟ್ಟು 4.20 ಕೋಟಿ ರೂ. ವೆಚ್ಚದ ಕಾಮಗಾರಿಗೆ ಅನುಮೋದನೆ ನೀಡಲಾಗಿತ್ತು. ಗುತ್ತಿಗೆದಾರರು ಕಾಮಗಾರಿ ಪೂರ್ಣಗೊಳಿಸಿ ಬಿಲ್ ನೀಡಿದ್ದರು. ಆದರೆ ಈ ನಡುವೆ ಅನುದಾನ ಒದಗಿಲು ಸಾಧ್ಯವಿಲ್ಲ ಎಂದು ಮೂಡ ಆಯುಕ್ತರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಸಾಮಾನ್ಯ ನಿಧಿಯಿಂದ ಭರಿಸಲು ಪರಿಷತ್ತಿನ ಮಂಜೂರಾತಿಗಾಗಿ ಸಭೆಯಲ್ಲಿ ಕಾರ್ಯಸೂಚಿ ಮಂಡನೆಯಾಗಿತ್ತು.
ಸಭೆಯಲ್ಲಿ ವಿಪಕ್ಷ ಸದಸ್ಯರಾದ ವಿನಯರಾಜ್, ಪ್ರವೀಣ್‌ಚಂದ್ರ ಆಳ್ವ ಹಾಗೂ ಇತರರು ಆಕ್ಷೇಪಿಸಿ, ಮೂಡದಿಂದ ಹಣದ ದೃಢೀಕರಣವಿಲ್ಲದೆ ಅಧಿಕಾರಿಗಳು ಈ ಟೆಂಡರ್ ಕರೆದಿರುವುದು ಹೇಗೆ? ಈಗ ಹಣವನ್ನು ಹೇಗೆ ಹೊಂದಾಣಿಕೆ ಮಾಡುವುದು ಪ್ರಶ್ನಿಸಿದರು.
ಅನುದಾನದ ಲಭ್ಯತೆ ಹಾಗೂ ಹಿರಿತನದ ಆಧಾರದಲ್ಲಿ ಸಾಮಾನ್ಯ ನಿಧಿಯನ್ನು ಹೊಂದಾಣಿಕೆ ಮಾಡುವುದಾಗಿ ಪಾಲಿಕೆ ಆಯುಕ್ತ ಆನಂದ್ ಅವರು ಉತ್ತರಿಸಿದರು.
ಮಳೆಗಾಲದಲ್ಲೂ 3 ದಿನಗಳಿಗೊಮ್ಮೆ ನೀರು!
ಮಳೆಗಾಲದಲ್ಲೂ ನಮ್ಮ ಪ್ರದೇಶದಲ್ಲಿ ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಬರುತ್ತಿದೆ ಎಂದು ಸದಸ್ಯೆ ಸಂಶಾದ್ ಅಬೂಬಕರ್ ಸಭೆಯ ಗಮನ ಸೆಳೆದಾಗ, ಈ ಬಗ್ಗೆ ಕ್ರಮ ವಹಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ
ಪಾಲಿಕೆಯಲ್ಲಿ ಕಂದಾಯ ಸೇರಿದಂತೆ ಪ್ರಮುಖ ವಿಭಾಗಗಳಲ್ಲಿ ಶೇ. 25ರಷ್ಟು ಸಿಬ್ಬಂದಿಗಳಿಲ್ಲ. ಕಂದಾಯ ಇಲಾಖೆಯಲ್ಲಿ 45 ಬಿಲ್ ಕೆಲಕ್ಟರ್‌ಗಳ ಜಾಗದಲ್ಲಿ ಕೇವಲ 5 ಮಂದಿ, ಕಂದಾಯ ನಿರೀಕ್ಷಕರು 12 ಮಂದಿಯಲ್ಲಿ ಇರುವುದು 4 ಮಾತ್ರ. ಮೀಟರ್ ರೀಡರ್‌ಗಳು 6 ಮಂದಿಯಲ್ಲಿ ಒಬ್ಬರೂ ಇಲ್ಲ. ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲೂ ಸಿಬ್ಬಂದಿ ಕೊರತೆ ಇದೆ ಎಂದು ಶಶಿಧರ ಹೆಗ್ಡೆ ಹೇಳಿದಾಗ, ಈ ಬಗ್ಗೆ ಪಟ್ಟಿ ಮಾಡಿ ಸರಕಾರಕ್ಕೆ ಬರೆಯುವುದಾಗಿ ಮೇಯರ್ ತಿಳಿಸಿದರು.
ಈಗ ಇರುವ ಸಿಬ್ಬಂದಿ ಗೃಹಲಕ್ಷ್ಮೀ ನೋಂದಣಿಯಲ್ಲಿರುವ ಕಾರಣ ಸಮಸ್ಯೆಯಾಗಿದೆ ಎಂದು ಆಡಳಿತ ಪಕ್ಷದ ಸದಸ್ಯರು ಆಕ್ಷೇಪಿಸಿದಾಗ, ಸದಸ್ಯರ ನಡುವೆ ಪರ ವಿರೋಧ ಚರ್ಚೆಗೆ ಕಾರಣವಾಯಿತು.
3 ವರ್ಷದಿಂದ ಹೇಳುತ್ತಿದ್ದರೂ ಕೇಳುತ್ತಿಲ್ಲ!
ಮಹಾಕಾಳಿ ಪಡ್ಪು ಬಳಿ ಪೌರ ಕಾರ್ಮಿಕರ ಮನೆಗಳು ಬೀಳುವ ಸ್ಥಿತಿಯಲ್ಲಿದೆ. ಕಳೆದ ಮೂರು ವರ್ಷಗಳಿಂದ ನಾನು ಈ ಬಗ್ಗೆ ಪ್ರಸ್ತಾಪಿಸುತ್ತಿದ್ದರೂ ಯಾರೂ ಕ್ಯಾರೇ ಮಾಡುತ್ತಿಲ್ಲ ಎಂದು ಆಡಳಿತ ಪಕ್ಷದ ಸದಸ್ಯರೇ ಆದ ಶೈಲೇಶ್ ಅವರು ಮೇಯರ್‌ರನ್ನು ತರಾಟಗೆತ್ತಿಕೊಂಡರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಆನಂದ್ ಅವರು, ಖುದ್ದು ನಾನು ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಲ್ಲಿ 40 ಕುಟುಂಬಗಳಿವೆ. ಕೆವರಿಗೆ ನಿವೃತ್ತಿಯಾಗಿದೆ. ಬೇರೆ ಕಡೆ ಸ್ಥಳಾಂತರಿಸಲು ಮನವೊಲಿಸಲಾಗಿದೆ ಎಂದರು.
ಕುಡಿಯುವ ನೀರಿಗೆ ಒಳಚರಂಡಿ ನೀರು ಸೇರಿ ಅನಾರೋಗ್ಯ ಸಮಸ್ಯೆ
ಬಂದರು ವ್ಯಾಪ್ತಿಯಲ್ಲಿ ಅಸಮರ್ಪಕ ಯುಜಿಡಿ ಕಾಮಗಾರಿಯಿಂದಾಗಿ ಕುಡಿಯುವ ನೀರಿನ ಜತೆ ಒಳಚರಂಡಿ ಕಲುಷಿತ ನೀರು ಸೇರಿ ರೋಗಕ್ಕೆ ಕಾರಣವಾಗಿದೆ ಎಂದು ಸ್ಥಳೀಯ ಕಾರ್ಪೊರೇಟರ್ ಝೀನತ್ ಸಂಶುದ್ದೀನ್ ದೂರಿದರು. ಸದಸ್ಯ ಸುಧೀರ್ ಶೆಟ್ಟಿ ಮಾತನಾಡಿ, ಹಲವು ತಿಂಗಳಿನಿಂದ ಸ್ಮಾರ್ಟ್ ಸಿಟಿ ಕಾಮಗಾರಿಯೇ ನಿಂತಿದ್ದು, 2024ರೊಳಗೆ ಕಾಮಗಾರಿ ಮುಗಿಸಬೇಕಾಗಿದೆ ಎಂದರು. ಸಮಸ್ಯೆಯನ್ನು ತಕ್ಷಣ ಬಗೆಹರಿಸುವಂತೆ ಮೇಯರ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಕೆಲವೊಂದು ಅಪಾರ್ಟ್‌ಮೆಂಟ್, ಮನೆಯ ಮಳೆ ನೀರನ್ನು ಒಳಚರಂಡಿಗೆ ಸಂಪರ್ಕ ನೀಡಲಾಗಿದ್ದು, ಇದರಿಂದ ಒಳಚರಂಡಿ ಮಳೆ ಬಂದಾಗ ಉಕ್ಕಿ ಹರಿಯುತ್ತಿದೆ ಎಂಬ ಸದಸ್ಯರ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ಕೂಡಲೇ ಇದನ್ನು ಪತ್ತೆಹಚ್ಚಿ ಸಂಬಂಧಪಟ್ಟವರಿಗೆ 10ಸಾವಿರದಿಂದ 2ಲಕ್ಷದವರೆಗೆ ದಂಡ ಹಾಕಲು ಅವಕಾಶವಿದೆ. ದಂಡದ ಪ್ರಮಾಣ ಶೀಘ್ರವಾಗಿ ನಿರ್ಧರಿಸುವುದಾಗಿ ತಿಳಿಸಿದರು.
ಶ್ವೇತ ಪತ್ರ ಹೊರಡಿಸಲು ಆಗ್ರಹ
ನಗರ ತ್ಯಾಜ್ಯ ವಿಲೇವಾರಿಗೆ ಹೊಸ ಟೆಂಡರ್ ಕರೆಯಲಾಗಿದ್ದು, ಈ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಪ್ರತಿಪಕ್ಷ ನಾಯಕ ನವೀನ್ ಡಿಸೋಜ ಆಗ್ರಹಿಸಿದರು. ಇದಕ್ಕೆ ಆಯುಕ್ತ ಆನಂದ್ ತ್ಯಾಜ್ಯ ನಿರ್ವಹಣೆಗೆ ನಾಲ್ಕು ವಲಯಗಳಲ್ಲಿ ಟೆಂಡರ್ ಕರೆಯಲಾಗಿದೆ. ಅರ್ಜಿಗಳು ಬಂದಿದ್ದು, ದಾಖಲೆ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಗೆ ಕಳುಹಿಸಿ ಆರ್ಥಿಕ ಅನುಮೋದನೆ ಪಡೆಯಲಾಗುವುದು ಎಂದರು.
ಮನಪಾ ವ್ಯಾಪ್ತಿಯಲ್ಲಿ ಕೋಳಿ, ಮಾಂಸದಂಗಡಿಗಳ ತ್ಯಾಜ್ಯ ಹಾಗೂ ಸೀಯಾಳ ತ್ಯಾಜ್ಯಕ್ಕೆ ಪ್ರತ್ಯೇಕ ಟೆಂಡರ್ ಕರೆದರೆ ಮಹಾನಗರಪಾಲಿಕೆಗೂ ಆದಾಯವಾಗಲಿದೆೆ ಎಂದು ಸುಧೀರ್ ಶೆಟ್ಟಿ ಕಣ್ಣೂರು ಆಗ್ರಹಿಸಿದರು.
ಸಭೆಯಲ್ಲಿ ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲಾ ಕಾವ, ಹೇಮಲತಾ ರಘು ಸಾಲ್ಯಾನ್, ನಯನ ಆರ್. ಕೋಟ್ಯಾನ್, ಕಿಶೋರ್ ಕೊಟ್ಟಾರಿ ಉಪಸ್ಥಿತರಿದ್ದರು.
ಅನಧಿಕೃತ ಬೀದಿಬದಿ ವ್ಯಾಪಾರಸ್ಥರ ತೆರವಿಗೆ ಪೊಲೀಸ್ ಸಹಿತ ಟಾಸ್ಕ್‌ಫೋರ್ಸ್
ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಇಲ್ಲದೆ ಕಾನೂನು ಬಾಹಿರವಾಗಿ ರಸ್ತೆ ಬದಿ, ಫುಟ್ಪಾತ್‌ಗಳಲ್ಲಿ ಕಾರ್ಯಾಚರಿಸುವ ಬೀದಿ ಬದಿ ವ್ಯಾಪಾರಸ್ಥರು ಹಾಗೂ ವಲಸೆ ಕಾರ್ಮಿಕರನ್ನು ತೆರವುಗೊಳಿಸಲು ಪಾಲಿಕೆಯ ಟಾಸ್ಕ್ ಫೋರ್ಸ್ ಸಿಬ್ಬಂದಿ ಜತೆ ನಾಲ್ಕು ಜನ ಪ್ರತ್ಯೇಕ ಪೊಲೀಸರನ್ನು ನಿಯೋಜಿಸಲು ಪಾಲಿಕೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಪೌರ ಕಾರ್ಮಿಕರ ನೇಮಕಾತಿಯಲ್ಲಿ ಗೋಲ್‌ಮಾಲ್: ಆರೋಪ
ಮಹಾನಗರಪಾಲಿಕೆಯಲ್ಲಿ 101ಪೌರ ಕಾರ್ಮಿಕರನ್ನು ನೇರ ನೇಮಕಾತಿಯನ್ನು ಮಾಡಲಾಗಿದ್ದು, ಇದರಲ್ಲಿ ಗೋಲ್‌ಮಾಲ್ ನಡೆದಿದೆ. ಈ ಬಗ್ಗೆ ಲೋಕಾಯುಕ್ತ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದೆ. ಅದೂ ಆಗಿಲ್ಲ, ಆದ್ದರಿಂದ ಜಿಲ್ಲಾಧಿಕಾರಿ ಈ ಬಗ್ಗೆ ಪರಿಶೀಲನೆ ನಡೆಸಿ ಮರು ಆಯ್ಕೆ ಪ್ರಕ್ರಿಯೆ ನಡೆಸುವಂತಾಗಬೇಕು ವಿಪಕ್ಷ ನಾಯಕ ನವೀನ್ ಡಿಸೋಜ ಆಗ್ರಹಿಸಿದರು.
ವಾರದೊಳಗೆ ಕಾರ್ಪೋರೇಟರ್‌ಗಳ ಸಭೆ ಕರೆದು ಹಲವು ವರ್ಷಗಳಿಂದ ದುಡಿಯುತ್ತಿರುವ ಪೌರ ಕಾರ್ಮಿಕರಿಗೆ ಆದ್ಯತೆ ನೀಡೋಣ ಎಂದು ಮೇಯರ್ ಜಯಾನಂದ ಅಂಚನ್ ಹೇಳಿದರು.
ಪ್ರಮುಖ ನಿರ್ಣಯಗಳು
* ಕದ್ರಿ ಸರ್ಕ್ಯೂಟ್‌ಹೌಸ್‌ನಿಂದ ಬಿಜೈ ಚರ್ಚ್ ಸರ್ಕಲ್‌ವರೆಗಿನ ಮುಖ್ಯರಸ್ತೆಗೆ ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ರಸ್ತೆ ಎಂದು ನಾಮಕಾರಣ ಮಾಡುವ ಕುರಿತು ಕಾರ್ಯಸೂಚಿ ಮಂಡಿಸಲಾಗಿದ್ದು, ಅಂಗೀಕರಿಸಲಾಯಿತು.
* ಮಣ್ಣಗುಡ್ಡ ವಾರ್ಡ್‌ನಲ್ಲಿರುವ ಶ್ರೀ ನಾರಾಯಣಗುರು ವೃತ್ತದ ನಿರ್ವಹಣೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಕೋರಿದ್ದು, ಈ ಬಗ್ಗೆ ಪರಿಷತ್ ಅನುಮೋದನೆ ನೀಡಿತು.
* ಮಂಗಳೂರು ಮಹಾನಗರಪಾಲಿಕಾ ವ್ಯಾಪ್ತಿಯ ಏರ್‌ಪೋರ್ಟ್ ರಸ್ತೆಯ ಕೆಪಿಟಿ ಜಂಕ್ಷನ್‌ನಿಂದ ಮರಕಡ ಜಂಕ್ಷನ್‌ವರೆಗೆ, ಮೀಡಿಯನ್ ಮತ್ತು ಫುಟ್‌ಪಾತ್ ಕ್ಲರ್ಬ್‌ಗಳಿಗೆ ಬಣ್ಣ ಬಳಿಯಲು 70ಲಕ್ಷ ರೂ.ಗಳಿಗೆ ಸಾಮಾನ್ಯ ನಿಧಿಯಡಿ ಆಡಳಿತಾತ್ಮಕ ಮಂಜೂರಾತಿ ನೀಡಲಾಯಿತು.