ದ.ಕ. ಜಿಲ್ಲಾ ಮೀನುಗಾರರ ಮುಖಂಡರಿಂದ ಸಚಿವರಿಗೆ ಮನವಿ

Update: 2023-11-22 13:00 GMT

ಮಂಗಳೂರು: ದ.ಕ. ಜಿಲ್ಲ್ಲೆಯ ಮೀನುಗಾರರು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ, ಮಂಗಳೂರು ಟ್ರಾಲ್‌ಬೋಟ್ ಹಾಗೂ ಪರ್ಸೀನ್ ಮೀನುಗಾರರ ಸಂಘದ ನೇತೃತ್ವದಲ್ಲಿ ಮೀನುಗಾರ ಮುಖಂಡರು ಬುಧವಾರ ಬೆಂಗಳೂರಿನಲ್ಲಿ ಮೀನುಗಾರಿಕಾ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಮೀನುಗಾರರ ಮುಖಂಡರಾದ ಚೇತನ್ ಬೆಂಗ್ರೆ, ಮೋಹನ್ ಬೆಂಗ್ರೆ, ರಾಜೇಶ್ ಉಳ್ಳಾಲ್, ಅನಿಲ್ ಕುಮಾರ್, ಮನೋಹರ್ ಬೋಳೂರು, ಹರಿಶ್ಚಂದ್ರ ಮೆಂಡನ್, ಜಗದೀಶ್ ಬಂಗೇರ, ಶಿವಾನಂದ ಬೋಳಾರ್ ಅವರನ್ನು ಒಳಗೊಂಡ ನಿಯೋಗ ಬುಧವಾರ ಮೀನುಗಾರಿಕಾ ಸಚಿವ ಮಾಂಕಳ ವೈದ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.

ಮೀನುಗಾರರ ಪ್ರಮುಖ ಬೇಡಿಕೆಗಳು

*ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಪ್ರಸ್ತುತ 1500ಕ್ಕೂ ಅಧಿಕ ಮೀನುಗಾರಿಕಾ ಬೋಟುಗಳಿದ್ದು, ಬಂದರಿನಲ್ಲಿ ಜಾಗದ ಕೊರತೆ ಎದುರಾಗಿದೆ. ಪ್ರತಿ ವರ್ಷ ಹೂಳೆತ್ತುವ ಕಾರ್ಯವನ್ನು ಸರಕಾರ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದ್ದು, ಮಂಗಳೂರು ಹಳೆ ಬಂದರು ಮತ್ತು ಮೀನುಗಾರಿಕಾ ಬಂದರಿಗೆ ದಶಕದ ಇತಿಹಾಸವಿದ್ದರೂ ಹೂಳೆತ್ತುವ ಸಮಸ್ಯೆಯು ನಿರಂತರವಾಗಿ ಉದ್ಭವವಾಗುತ್ತಿದೆ. ಇದಕ್ಕಾಗಿ ಅಲೆತಡೆಗೋಡೆಗಳ ಅಧ್ಯಯನ ಅಗತ್ಯವಿದೆ ಎಂದು ತಿಳಿಸಲಾಗಿದೆ. *ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಪ್ರತಿ ದಿನ 100 ಕೋಟಿ ರೂ.ಗಳಿಗೆ ಅಧಿಕ ವ್ಯವಹಾ ನಡೆಯುತ್ತಿದೆ. ಆದರೆ ಮೀನುಗಾರರ ರಕ್ಷಣೆ, ಮಹಿಳಾ ಮೀನುಗಾರರ ಸುರಕ್ಷತೆ, ಕಳ್ಳತನ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ಸಿಸಿಟಿವಿ ವ್ಯವಸ್ಥೆ, ಪೊಲೀಸ್‌ಸಿಬ್ಬಂದಿ ನಿಯೋಜಿಸಲು ಆದೇಶ ನೀಡಬೇಕು.

*ರಖಂ ಹಾಗೂ ಕಮಿಷನ್ ಮೀನು ಮಾರಾಟ ಮಂಗಳೂರು ಮೀನುಗಾರಿಕಾ ಬಂದರಿನ ಒಳಭಾಗದಲ್ಲೇ ನಡೆಯುತ್ತಿರು ವುದರಿಂದ ಬೇರೆ ರಾಜ್ಯಗಳಿಂದ ಬರುವ ನೂರಾರು ವಾಹನಗಳಿಂದ ದಟ್ಟಣೆ ಉಂಟಾಗಿ ದೈನಂದಿನ ಚಟುವಟಿಕೆಗೆ ತೊಡಕಾಗುತ್ತಿದೆ. ಇದನ್ನು ಬಂದರಿನಿಂದ ದೂರಕ್ಕೆ ಸ್ಥಳಾಂತರಿಸಬೇಕು.

* 2023ನೆ ಸಾಲಿನಿಂದ ಮೀನುಗಾರಿಕಾ ಇಲಾಖೆಯ ಅಭಿವೃದ್ಧಿ ಹಾಗೂ ನಿರ್ವಹಣಾ ಕಾಮಗಾರಿಯನ್ನು ಕರ್ನಾಟಕ ಜಲ ಸಾರಿಗೆ ಮಂಡಳಿ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ಮೀನುಗಾರಿಕಾ ಇಲಾಖೆಯ ಕಾಮಗಾರಿಗಳಿಗೆ ಮಂಡಳಿಯಿಂದ ಹೆಚ್ಚುವರಿಯಾಗಿ ಶೇ. 12 ಸೆಂಟೇಜ್ ಚಾರ್ಜ್ ವಸೂಲಿ ಮಾಡುತ್ತಿರುವುದು ಗಮನಕ್ಕೆಬಂದಿದ್ದು, ಇದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಕಡಿತವಾಗುತ್ತಿದೆ. ಮಂಡಳಿ ವಿಧಿಸುತ್ತಿರುವ ಈ ಚಾರ್ಜ್‌ಗೆ ಕಡಿವಾಣ ಹಾಕಲು ಆದೇಶ ನೀಡಬೇಕು.

*ಮಂಗಳೂರು ಮೀನುಗಾರಿಕಾ ಬಂದರಿನ ಬಹುತೇಕ ಸ್ಥಳವನ್ನು ಮೀನು ಬಾಕ್ಸ್ ಇರಿಸಲು ಬಳಸಲಾಗುತ್ತಿದೆ. ಇದರಿಂದ ವಾಹನಗಳ ಪಾರ್ಕಿಂಗ್, ಓಡಾಟಕ್ಕೆ ತೊಂದರೆಯಾಗುತ್ತಿದೆ. ಇದಕ್ಕಾಗಿ ಮಲ್ಟಿಲೆವಲ್ ಫಿಶ್ ಬಾಕ್ಸ್ ಸ್ಟೋರೇಜ್ ವ್ಯವಸ್ಥೆ ಸರಕಾರದಿಂದ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News