ಸಜೀಪ: ಯುವ ಕಲಾವಿದ ಆತ್ಮಹತ್ಯೆ

Update: 2023-08-14 07:32 GMT

ಬಂಟ್ವಾಳ : ಯುವ ಕಲಾವಿದನೋರ್ವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಸಜೀಪ ಮೂಡ ಗ್ರಾಮದ ಮಿತ್ತಮಜಲು ಎಂಬಲ್ಲಿ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಮಿತ್ತಮಜಲು ನಿವಾಸಿ ಚಿತ್ರ ಕಲಾವಿದ ಸಾಗರ್ ಆಚಾರ್ಯ ಎಂದು ಗುರುತಿಸಲಾಗಿದೆ. ಸೋಮವಾರ ಬೆಳಿಗ್ಗೆ ಸುಮಾರು 8.30 ರ ವೇಳೆ ಮನೆಯಂಗಳದಲ್ಲಿ ಇರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಅನಾರೋಗ್ಯದ ಕಾರಣ ಜೀವನದಲ್ಲಿ ಮನನೊಂದು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಶಂಕಿಸಲಾಗಿದೆ. ಸಾಗರ್ ಕಳೆದ ಎರಡು ವರ್ಷಗಳ ಹಿಂದೆ ಬಿಸಿರೋಡಿನ ಸಿ.ಡಿ.ಪಿ.ಒ. ಕಚೇರಿಯಲ್ಲಿ ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುತ್ತಿದ್ದ ಈತನಿಗೆ ಮೊದಲೇ ಇದ್ದ ಕಿಡ್ನಿ ಸಮಸ್ಯೆ ಉಲ್ಬಣಗೊಂಡಿತು. ಹಾಗಾಗಿ ಈತ ಕೆಲಸ ಬಿಟ್ಟು ಮನೆಯಲ್ಲೇ ಇದ್ದ. ಎರಡೂ ಕಿಡ್ನಿಗಳು ವೈಫಲ್ಯ ಕಂಡ ಹಿನ್ನೆಲೆಯಲ್ಲಿ ಈತನ ತಂದೆಯ ಒಂದು ಕಿಡ್ನಿಯನ್ನು ನೀಡಲಾಗಿತ್ತು.

ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಲಾಗುತ್ತಿತ್ತು. ಮರದ ಕೆಲಸ ಮಾಡುತ್ತಿದ್ದ ಈತನ ತಂದೆ ಮಗನಿಗೆ ಕಿಡ್ನಿ ದಾನ ಮಾಡಿದ ಬಳಿಕ ಕೆಲಸ ಮಾಡಲು ಸ್ವಲ್ಪ ಕಷ್ಟದ ಸ್ಥಿತಿ ಉಂಟಾಗಿತ್ತು. ಈ ನಡುವೆ ಮನೆಯಲ್ಲಿ ತಾಯಿಗೂ ಸ್ವಲ್ಪ ಅನಾರೋಗ್ಯದ ಸಮಸ್ಯೆ ಉಂಟಾಗಿತ್ತು. ಮನೆಯಲ್ಲಿ ಎಲ್ಲರೂ ಅನಾರೋಗ್ಯ ಪೀಡಿತರಾಗಿ, ಸರಿಯಾದ ಉದ್ಯೋಗವೂ ಇಲ್ಲದೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಬಗ್ಗೆ ಮನನೊಂದಿರುವ ಬಗ್ಗೆ ಸ್ನೇಹಿತರ ಬಳಿ ಹೇಳಿಕೊಂಡಿದ್ದ ಎಂದು ಹೇಳಲಾಗಿದೆ.

ಸುಮಾರು 30 ಅಡಿ ಆಳದಲ್ಲಿರುವ ಬಾವಿಯಿಂದ ಸಾಗರ್ ಅವರ ಮೃತದೇಹವನ್ನು ಬಂಟ್ವಾಳ ಅಗ್ನಿಶಾಮಕ ದಳದವರು ಮೇಲಕ್ಕೆತ್ತಿ ಮರಣೋತ್ತರ ಪರೀಕ್ಷೆ ಗಾಗಿ ಬಂಟ್ವಾಳ ಸರಕಾರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News