ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಮರು ತನಿಖೆ ನಡೆಸಿ ನೈಜ ಆರೋಪಿಗಳ ಬಂಧನಕ್ಕೆ ಒತ್ತಾಯ

Update: 2023-08-04 10:18 GMT

ಮಂಗಳೂರು, ಆ.4: ಉಜಿರೆಯಲ್ಲಿ 2011ರಲ್ಲಿ ನಡೆದ ಕುಮಾರಿ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ನಡೆಸಿ ನೈಜ ಆರೋಪಿಗಳನ್ನು ಬಂಧಿಸದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿ ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘ ಎಚ್ಚರಿಸಿದೆ.

ಮಂಗಳೂರಿನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಈ ಎಚ್ಚರಿಕೆ ನೀಡಿರುವ ಮಾತೃ ಸಂಘದ ಅಧ್ಯಕ್ಷ ಗುರುದೇವ್ ಯು.ಬಿ., ಸಂಘದ ಜಿಲ್ಲಾ ಮಟ್ಟದ ಹೋರಾಟದ ಸ್ವರೂಪವನ್ನು ರೂಪಿಸುವ ಬಗ್ಗೆ ಆ. 8ರಂದು ಪುತ್ತೂರಿನ ಒಕ್ಕಲಿಗರ ಭವನದಲ್ಲಿ ಸಭೆ ಆಯೋಜಿಸಲಾಗಿದೆ ಎಂದರು.

ಪ್ರಕರಣದಲ್ಲಿ ಬಂಧಿತನಾದ ಆರೋಪಿ ನಿರಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. ಹಾಗಿದ್ದಲ್ಲಿ ನೈಜ ಆರೋಪಿಗಳು ಯಾರೆಂದು ತಿಳಿಯಬೇಕಾಗಿದೆ. ಇದಕ್ಕಾಗಿ ಸರಕಾರ ಪ್ರಕರಣದ ಮರು ತನಿಖೆಗೆ ಮುಂದಾಗಬೇಕು ಎಂದು ಅವರು ಆಗ್ರಹಿಸಿದರು.

ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಅವರು ಮಾತನಾಡಿ, 11 ವರ್ಷಗಳ ಹಿಂದೆ ಹೆಣ್ಣು ಮಗಳ ಮೇಲಿನ ಪೈಶಾಚಿಕ ಕೃತ್ಯ ನಡೆದಿರುವುದು ಶತಸಿದ್ಧವಾಗಿದೆ. ಹಾಗಿದ್ದಲ್ಲಿ ಅಪರಾಧಿಗಳು ಯಾರು, ತನಿಖೆ ಯಾವ ಹಂತದಲ್ಲಿ ಎಡವಿದೆ, ನೈಜ ಆರೋಪಿಗಳು ತಪ್ಪಿಸಿಕೊಳ್ಳಲು ಕಾರಣವೇನು ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ ಎಂದರು.

ಕು. ಸೌಜನ್ಯರ ಆತ್ಮಕ್ಕೆ ಶಾಂತಿ ಹಾಗೂ ಆಕೆಯ ಕುಟುಂಬಕ್ಕೆ ನ್ಯಾಯ ಸಿಗಬೇಕಾದರೆ ನೈಜ ಆರೋಪಿಗಳಿಗೆ ಶಿಕ್ಷೆಯಾಗಬೇಕಾಗಿದೆ. ಅಪರಾಧಿಗಳಫು ಕಾನೂನಿನ ಚೌಕಟ್ಟಿನಿಂದ ಹೊರಹೋದಲ್ಲಿ ಇದು ಮುಂದೆಯೂ ಸಮಾಜದಲ್ಲಿ ಇಂತಹ ದುಷ್ಕೃತ್ಯಗಳಿಗೆ ಪರವಾನಿಗೆ ನೀಡಿದಂತಾಗುತ್ತದೆ. ಸಂಘದ ಹೋರಾಟವನ್ನು ಬಲಗೊಳಿಸುವ ನಿಟ್ಟಿನಲ್ಲಿ ಸಂಘದ ರಾಜ್ಯದ ಪದಾಧಿಕಾರಿಗಳ ಜತೆಯೂ ಚರ್ಚೆ ನಡೆಸಿ ಹೋರಾಟವನ್ನು ತೀವ್ರಗೊಳಿಸುವ ಚಿಂತನೆ ಇದೆ ಎಂದು ಅವರು ಹೇಳಿದರು.

ಪ್ರಕರಣದ ಮರು ತನಿಖೆ ನಡೆಯಬೇಕು. ಆದರೆ ನಿರಪರಾಧಿಯಾಗಿಯೂ ಈಗಾಗಲೇ ಹಲವು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಸಂತೋಷ್ ರಾವ್ ಅವರಿಗೆ ಮತ್ತೆ ತೊಂದರೆ ಆಗದ ರೀತಿಯಲ್ಲಿ ತನಿಖೆ ಆಗಬೇಕು. ಈ ಪ್ರಕರಣದಲ್ಲಿ ಸಾಕ್ಷಿ ನಾಶ ಆಗಿರುವುದು ಸಾಬೀತಾಗಿದೆ. ಹಾಗಾಗಿ ಅದಕ್ಕೆ ಕಾರಣರಾದ ಅಂದಿನ ತನಿಖಾಧಿಕಾರಿಯನ್ನು ವಿಚಾರಗೊಳಪಡಿಸಿ ಪ್ರಕರಣದ ಮರು ತನಿಖೆಗೆ ಮುಂದಾಗಬೇಕು ಎಂದು ಸಂಘದ ಯುವ ಘಟಕದ ಅಧ್ಯಕ್ಷ ಕಿರಣ್ ಬುಡ್ಲೆಗುತ್ತು ಆಗ್ರಹಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಘದ ವಿವಿಧ ವಿಭಾಗಗಳ ಪದಾಧಿಕಾರಿಗಳಾದ ಕಿರಣ್, ಪೂರ್ಣಿಮಾ, ಸಾರಿಕಾ, ನವೀನ್, ಪದ್ಮನಾಭ, ರಕ್ಷಿತ್, ರಾಮಚಂದ್ರ, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News