ದಾಮೋದರ ನಿಸರ್ಗರ ತುಳು ಸೇವೆ ಅನನ್ಯ: ಪ್ರೊ.ಎ.ವಿ ನಾವಡ
ಮಂಗಳೂರು: ಮಂಗಳೂರು ತುಳು ಕೂಟದ ಅಧ್ಯಕ್ಷ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ದಾಮೋದರ ನಿಸರ್ಗ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವುನಗರದ ತುಳುಭವನದಲ್ಲಿ ನಡೆಯಿತು.
ಈ ಸಂದರ್ಭ ಮಾತನಾಡಿದ ಹಿರಿಯ ತುಳು ವಿದ್ವಾಂಸ ಪ್ರೊ.ಎ.ವಿ ನಾವಡ ತುಳು ಸಂಘಟನೆ, ಚಳುವಳಿಗೆ ದಾಮೋದರ ನಿಸರ್ಗ ಅವರ ಕೊಡುಗೆ ಅನನ್ಯವಾದುದು. ಯಕ್ಷಗಾನ ಬಗೆಗಿನ ಅವರ ಕಾಳಜಿ ಅಪಾರವಾಗಿತ್ತು ಎಂಬುದನ್ನು ಅಭಿಪ್ರಾಯಪಟ್ಟರು.
ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಮಾತನಾಡಿ, ಅಕಾಡಮಿ ಜೊತೆಗೆ ದಾಮೋದರ ನಿಸರ್ಗ ಅವರು ನಿರಂತರ ಬಾಂಧವ್ಯ, ಸಂಪರ್ಕವನ್ನು ಉಳಿಸಿಕೊಂಡಿದ್ದರು. ಎಲ್ಲಾ ತುಳು ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹಿಸುತ್ತಿದ್ದರು ಎಂದು ನೆನಪಿಸಿದರು.
ದಾಮೋದರ ನಿಸರ್ಗ ಅವರ ಪುತ್ರಿ ಡಾ. ವಿನ್ಯಾಸ್ ನಿಸರ್ಗ ಮಾತನಾಡಿ, ತನ್ನ ತಂದೆ ತನ್ನ ವೈಯುಕ್ತಿಕ ಬಯಕೆ ಕಷ್ಟಗಳ ನಡುವೆ ಕೂಡ ತುಳು ಭಾಷೆ, ಸಂಸ್ಕೃತಿಯ ಪರವಾಗಿ ನಿರಂತರವಾಗಿ ಸ್ಪಂದಿಸುತ್ತಿದ್ದರು. ತುಳು ಭಾಷೆ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರ್ಪಡೆಯಾಗಬೇಕು ಎಂಬ ಹೋರಾಟಕ್ಕೆ ಅವರು ಸದಾ ಬೆಂಬಲವಾಗಿದ್ದರು ಎಂದು ತಿಳಿಸಿದರು.
ಅಕಾಡಮಿಯ ಸದಸ್ಯ ಕುಂಬ್ರ ದುರ್ಗಾ ಪ್ರಸಾದ್ ರೈ, ಗಣೇಶ್ ಪೂಜಾರಿ, ರವಿ ಅಲೆವೂರಾಯ, ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ, ಸದಸ್ಯರಾದ ನಾಗೆಶ್ ಉದ್ಯಾವರ, ಬೂಬ ಪೂಜಾರಿ, ಅಕ್ಷಯ ಆರ್. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.