ಉಳ್ಳಾಲ: ಎಡೆಬಿಡದೆ ಸುರಿಯುತ್ತಿರುವ ಮಳೆ; ಹಲವೆಡೆ ಹಾನಿ, ಸಂಕಷ್ಟ
ಉಳ್ಳಾಲ: ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರ ಸಭಾ ವ್ಯಾಪ್ತಿಯ ಮುಕ್ಕಚ್ಚೇರಿ ಎಂಬಲ್ಲಿ ಜಯಕರ ಎಂಬವರ ವಾಸ್ತವ್ಯ ಮನೆ ಕುಸಿದು ಗೋಡೆ ಬಿರುಕು ಬಿಟ್ಟಿದ್ದು,ತೀವ್ರ ಹಾನಿಯಾಗಿದೆ.ಅಬ್ದುಲ್ ಖಾದರ್ ಅವರ ಮನೆ ಕಾಂಪೌಂಡ್ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.
ವಿಪರೀತ ಮಳೆ ಯಿಂದಾಗಿ ಕೆಲವು ಕಡೆ ಮರದ ಗೆಲ್ಲು ಬಿದ್ದು ವಿದ್ಯುತ್ ಕೈಕೊಟ್ಟಿದ್ದು, ಇದರಿಂದ ನಗರ ಸಭಾ ವ್ಯಾಪ್ತಿಯ ಪಟ್ಲ ,ಗಂಡಿ,ಮುಡಿಪೋಡಿ ಮುಂತಾದ ಕಡೆಗಳಲ್ಲಿ ವಿದ್ಯುತ್ ಇಲ್ಲದೇ ಕಳೆದೆರಡು ದಿನಗಳಿಂದ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿದು ಬಂದಿದೆ.
ವಿಪರೀತ ಮಳೆಗೆ ಗಂಡಿ ,ಪಟ್ಲ ಸಹಿತ ಕೆಲವು ಕಡೆ ವಿದ್ಯುತ್ ಕಡಿತಗೊಂಡಿದೆ.ಈ ಬಗ್ಗೆ ದೂರು ನೀಡೋಣ ಎಂದರೆ ಅಧಿಕಾರಿಗಳ ಫೋನ್ ಸಿಗುತ್ತಿಲ್ಲ. ಜನರು ಮೆಸ್ಕಾಂ ಕಚೇರಿ ಗೆ ಕರೆ ಮಾಡಿದರೆ ಕರೆ ಸ್ವೀಕರಿಸುವವರು ಇಲ್ಲ.ಈ ವಿಚಾರದಲ್ಲಿ ಹೋರಾಟ ನಡೆಸಲು ಮುಂದಾಗಿದ್ದಾರೆ.ಜನರ ಬದುಕು ಬೀದಿ ಪಾಲಾಗಿದೆ ಎಂದು ಉಳ್ಳಾಲ ನಗರ ಸಭೆ ಕೌನ್ಸಿಲರ್ ದಿನಕರ್ ಉಳ್ಳಾಲ ಆರೋಪಿಸಿದ್ದಾರೆ.
ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳು, ವಿದ್ಯುತ್ ಗೆ ಸಂಬಂಧಪಟ್ಟು ಏನು ದೂರುಗಳಿದ್ದರೂ ತಿಳಿಸಿದರೆ ಶೀಘ್ರ ಸ್ಪಂದನ ಮಾಡುತ್ತೇವೆ ಎಂದು ಭರವಸೆ ನೀಡುತ್ತಾರೆ.ಆದರೆ ವಿದ್ಯುತ್ ಕೈಕೊಟ್ಟ ಸಂದರ್ಭದಲ್ಲಿ ಸರಿಪಡಿಸಲು ಅಧಿಕಾರಿಗಳು ಇಲ್ಲ. ಅವರ ಫೋನ್ ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಇದರಿಂದ ಬದುಕು ಕಷ್ಟವಾಗಿದೆ ಎಂದು ಅವರು ವಾರ್ತಾ ಭಾರತಿ ಗೆ ತಿಳಿಸಿದ್ದಾರೆ.
ತಾಂತ್ರಿಕ ದೋಷದಿಂದ ವಿದ್ಯುತ್ ಕಡಿತ ಗೊಂಡಿದೆ. ದುರಸ್ತಿ ಕಾರ್ಯ ನಡೆಯುತ್ತಿದೆ.ಸಂಜೆಯೊಳಗೆ ದುರಸ್ತಿ ಮಾಡಿ ಸಮಸ್ಯೆ ಪರಿಹರಿಸುತ್ತೇವೆ ಎಂದು ಮೆಸ್ಕಾಂ ಉಳ್ಳಾಲ ವಲಯದ ಎ.ಇ. ರಾಜೇಶ್ ತಿಳಿಸಿದ್ದಾರೆ.